ಸೌರವ್ ಗಂಗೂಲಿ ದಾಖಲೆ ಸರಿದೂಗಿಸಲಿರುವ ಧೋನಿ
Team Udayavani, Dec 12, 2017, 6:10 AM IST
ಮೊಹಾಲಿ: ಭಾರತ-ಶ್ರೀಲಂಕಾ ನಡುವೆ ಬುಧವಾರ ಮೊಹಾಲಿಯಲ್ಲಿ ನಡೆಯುವ ಏಕದಿನ ಪಂದ್ಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕೆಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವ ಸಾಧ್ಯತೆ ಇದೆ.
ಇದರಲ್ಲಿ ಖಚಿತವಾಗಿ ಹೇಳಬಹುದಾದ ಸಾಧನೆಯೆಂದರೆ, ಭಾರತದ ಪರ 3ನೇ ಸರ್ವಾಧಿಕ ಏಕದಿನ ಪಂದ್ಯಗಳನ್ನಾಡಿರುವ ಸೌರವ್ ಗಂಗೂಲಿ ಅವರ ದಾಖಲೆಯನ್ನು ಸರಿದೂಗಿಸುವುದು. ಗಂಗೂಲಿ 311 ಏಕದಿನ ಪಂದ್ಯಗಳನ್ನಾಡಿದ್ದು, ಭಾರತದ ಪರ 4ನೇ ಸ್ಥಾನದಲ್ಲಿದ್ದಾರೆ. ಧೋನಿ 310 ಪಂದ್ಯಗಳನ್ನು ಆಡಿದ್ದಾರೆ (ಭಾರತದ ಪರ 307, ಏಶ್ಯ ಇಲೆವೆನ್ ಪರ 3 ಪಂದ್ಯ). ಸಚಿನ್ ತೆಂಡುಲ್ಕರ್ (463), ರಾಹುಲ್ ದ್ರಾವಿಡ್ (344) ಮತ್ತು ಮೊಹಮ್ಮದ್ ಅಜರುದ್ದೀನ್ (334) ಮೊದಲ 3 ಸ್ಥಾನ ಅಲಂಕರಿಸಿದ್ದಾರೆ.
ಧರ್ಮಶಾಲಾ ಪಂದ್ಯದ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 16 ಸಾವಿರ ರನ್ ಪೂರೈಸಿದ ಧೋನಿ ಅವರಿಂದ ಇನ್ನೊಂದು ಮೈಲುಗಲ್ಲನ್ನೂ ನಿರೀಕ್ಷಿಸಲಾಗುತ್ತಿದೆ. ಅವರೀಗ ಏಕದಿನ ಕ್ರಿಕೆಟಿನ 10 ಸಾವಿರ ರನ್ ಕ್ಲಬ್ ಬಾಗಿಲಿನ ಸನಿಹದಲ್ಲಿದ್ದಾರೆ. ಇದಕ್ಕೆ ಇನ್ನು ಬೇಕಿರುವುದು 109 ರನ್ ಮಾತ್ರ. ಉಳಿದೆರಡು ಪಂದ್ಯಗಳಲ್ಲಿ ಅವರು ಈ ಸಾಧನೆಯನ್ನು ಪೂರ್ತಿಗೊಳಿಸಬಹುದು.