ಕೋವಿಡ್ ಹೀರೋಗಳಿಗೆ ಗೌರವ ಸಲ್ಲಿಸಲಿರುವ ಆರ್‌ಸಿಬಿ
Team Udayavani, Sep 17, 2020, 8:14 PM IST
ದುಬಾೖ: ಈ ಬಾರಿಯ ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಸಾರಥ್ಯದ ಆರ್‌ಸಿಬಿ ತಂಡ “ಮಾದರಿ ಕೆಲಸ’ವೊಂದರ ಮೂಲಕ ಗಮನ ಸೆಳೆಯಲಿದೆ. ಮಹಾಮಾರಿ ಕೋವಿಡ್ ವಿರುದ್ಧ ಹೋರಾಡುತ್ತಿರುವ ವಾರಿಯರ್‌ಗಳಿಗೆ ಗೌರವ ಸಲ್ಲಿಸಲು ಬೆಂಗಳೂರು ಫ್ರಾಂಚೈಸಿ ನಿರ್ಧರಿಸಿದೆ. ಈ ಅಭಿಯಾನದ ಹೆಸರು “ಮೈ ಕೋವಿಡ್ ಹೀರೋಸ್’.
ಇದಕ್ಕಾಗಿ ನೂತನ ಜೆರ್ಸಿಯನ್ನು ಬಿಡುಗಡೆ ಮಾಡಲಾಗಿದೆ. ಅಭ್ಯಾಸ ಹಾಗೂ ಆಟದ ವೇಳೆ ಧರಿಸುವ ಈ ಜೆರ್ಸಿ ಮೇಲೆ “ಮೈ ಕೋವಿಡ್ ಹೀರೋಸ್’ ಎಂದು ಬರೆಯಲಾಗಿದೆ. ಕೂಟದುದ್ದಕ್ಕೂ ಆರ್‌ಸಿಬಿ ಆಟಗಾರರು ಈ ಜೆರ್ಸಿ ಧರಿಸಲಿದ್ದಾರೆ. ಐಪಿಎಲ್ ಮುಗಿದ ಬಳಿಕ ಈ ಜೆರ್ಸಿಗಳನ್ನು ಹರಾಜಿಗೆ ಹಾಕಿ, ಇದರಿಂದ ಸಂಗ್ರಹವಾದ ಮೊತ್ತವನ್ನು “ಗೀವ್ ಇಂಡಿಯಾ ಫೌಂಡೇಶನ್’ಗೆ ನೀಡುವುದು ಆರ್‌ಸಿಬಿ ಉದ್ದೇಶ.
ತಂಡದ ಸಾಮಾಜಿಕ ಜಾಲತಾಣದ ಮೂಲಕ ಆರ್‌ಸಿಬಿ ಕೋವಿಡ್ ಹೀರೋಗಳಿಗೆ ಗೌರವ ಸಲ್ಲಿಸಲಿದ್ದು, ಅವರ ಯಶಸ್ಸಿನ ಘಟನೆಗಳನ್ನು ಹಂಚಿಕೊಳ್ಳಲಿದೆ. ಇದು ತಂಡದ ಲಕ್ಷಾಂತರ ಅಭಿಮಾನಿಗಳಿಗೆ ಸ್ಫೂರ್ತಿಯಾಗಲಿದೆ ಎಂಬುದಾಗಿ ಜೆರ್ಸಿಯನ್ನು ಬಿಡುಗಡೆ ಮಾಡಿದ ಆರ್‌ಸಿಬಿ ಅಧ್ಯಕ್ಷ ಸಂಜೀವ್ ಚುರಿವಾಲಾ ಹೇಳಿದರು.