ನನ್ನ ಹೇಳಿಕೆ ಸಚಿನ್‌ ವಿರುದ್ಧವಾಗಿಲ್ಲ: ಗಂಗೂಲಿ ಸ್ಪಷ್ಟನೆ

Team Udayavani, Feb 26, 2019, 12:30 AM IST

ಕೋಲ್ಕತ: ಪುಲ್ವಾಮದಲ್ಲಿ ಪಾಕಿಸ್ತಾನಿ ಉಗ್ರರಿಂದ ದಾಳಿ ನಡೆದ ನಂತರ, ಪಾಕಿಸ್ತಾನ ವಿರುದ್ಧದ ವಿಶ್ವಕಪ್‌ ಪಂದ್ಯವನ್ನು ಭಾರತ ಬಹಿಷ್ಕರಿಸಬೇಕೆಂದು, ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಹೇಳಿದ್ದರು. 

ಇದರ ಬೆನ್ನಲ್ಲೇ ಸಚಿನ್‌ ತೆಂಡುಲ್ಕರ್‌, ಭಾರತ ಆಡದಿದ್ದರೆ, ಪಾಕಿಸ್ತಾನಕ್ಕೆ ಸುಲಭವಾಗಿ 2 ಅಂಕ ಸಿಗುತ್ತದೆ. ಅದಕ್ಕೆ ಅವಕಾಶ ಕೊಡಬಾರದು ಎಂದಿದ್ದರು. ಇದು ಮುಗಿಯುವ ಮೊದಲೇ ಈ ಇಬ್ಬರ ನಡುವೆಯೇ ಭಿನ್ನಮತವಿದೆ ಎಂದು ವದಂತಿಯೊಂದನ್ನು ಹಬ್ಬಿಸಲಾಗಿದೆ. ಈ ಬೆಳವಣಿಗೆ ಪರಿಣಾಮ ಸ್ವತಃ ಸೌರವ್‌ ಗಂಗೂಲಿ ಟ್ವೀಟ್‌ ಮಾಡಿ, ನಮ್ಮಿಬ್ಬರ ನಡುವೆ ಯಾವುದೇ ಪರ-ವಿರೋಧಗಳಿಲ್ಲ ಎಂದು ಸ್ಪಷ್ಟೀಕರಿಸಿದ್ದಾರೆ.

ಆಗಿದ್ದಿಷ್ಟೇ: ಪಾಕ್‌ ವಿರುದ್ಧ ಭಾರತ ಆಡಬೇಕು ಎಂದು ಸಚಿನ್‌ ಹೇಳಿದ ನಂತರ ಪ್ರತಿಕ್ರಿಯಿಸಿದ್ದ ಗಂಗೂಲಿ, ಸಚಿನ್‌ 2 ಅಂಕ ಬಯಸುತ್ತಾರೆ, ನಾನು ವಿಶ್ವಕಪ್‌ ಬಯಸುತ್ತೇನೆ ಎಂದಿದ್ದರು. ಇದು ಸಚಿನ್‌ ಹೇಳಿಕೆಗೆ ವಿರುದ್ಧ ಎಂಬ ವಾದ ವಿವಾದ ಆರಂಭವಾಗಿತ್ತು. ಕೂಡಲೇ ಗಂಗೂಲಿ ಪ್ರತಿಕ್ರಿಯಿಸಿ, ನನ್ನ ಹೇಳಿಕೆ ಸಚಿನ್‌ಗೆ ವಿರುದ್ಧವಾಗಿಲ್ಲ. ಆತ ಕಳೆದ 25 ವರ್ಷದಿಂದ ನನ್ನ ಆತ್ಮೀಯ ಸ್ನೇಹಿತರಲ್ಲೊಬ್ಬ ಎಂದು ಸ್ಪಷ್ಟೀಕರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿನ್‌, ಗಂಗೂಲಿ ಹೀಗೆ ಸ್ಪಷ್ಟನೆ ಕೊಡಬೇಕಾದ ಅಗತ್ಯವೂ ಇಲ್ಲ. ನಾವೆಲ್ಲರೂ ದೇಶಕ್ಕೆ ಯಾವುದು ಹಿತವೋ ಅದನ್ನೇ ಬಯಸುತ್ತೇವೆ ಎಂದು ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ