ಡೇವಿಸ್ ಕಪ್ ಕ್ವಾರ್ಟರ್ ಫೈನಲ್ನಲ್ಲಿ ನಡಾಲ್
Team Udayavani, Mar 28, 2018, 6:00 AM IST
ಮ್ಯಾಡ್ರಿಡ್: ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ವಿಶ್ವ ನಂ. 2 ಆಟಗಾರ ರಫೆಲ್ ನಡಾಲ್ ಮುಂದಿನ ತಿಂಗಳು ಜರ್ಮನಿ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ಕ್ವಾರ್ಟರ್ ಫೈನಲ್ ಸ್ಪರ್ಧೆಗಾಗಿ ಸ್ಪೇನ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. 2016ಲ್ಲಿ ಭಾರತ ವಿರುದ್ಧ ಗೆಲ್ಲುವ ಮೂಲಕ ವಿಶ್ವಬಣಕ್ಕೆ ಸ್ಪೇನ್ ಮರಳಿದ ಬಳಿಕ 31ರ ಹರೆಯದ ನಡಾಲ್ ಡೇವಿಸ್ ಕಪ್ನಲ್ಲಿ ಆಡಿಲ್ಲ. ಐದು ಬಾರಿಯ ಚಾಂಪಿಯನ್ ಆಗಿರುವ ಸ್ಪೇನ್ ಈ ಬಾರಿ ನಡಾಲ್ ಸಾಹಸದಿಂದ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ.
ಪ್ಯಾಬ್ಲೊ ಕ್ಯಾರೆನೊ ಬುಸ್ಟ, ರೊಬರ್ಟೊ ಬಾಟಿಸ್ಟ ಆಗುಟ್, ಡೇವಿಡ್ ಫೆರರ್ ಮತ್ತು ಫೆಲಿಶಿಯಾನೊ ಲೊಪೆಜ್ ಅವರನ್ನೊಳಗೊಂಡ ಸ್ಪೇನ್ ತಂಡದಲ್ಲಿ ನಡಾಲ್ ಸೇರಿಕೊಂಡಿದ್ದಾರೆ. ತಂಡವನ್ನು ಸೆರ್ಗಿ ಬ್ರುಗುವೆರಾಸ್ ಮುನ್ನಡೆಸಲಿದ್ದಾರೆ. 16 ಬಾರಿ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಗೆದ್ದಿರುವ ನಡಾಲ್ ತೊಡೆ ನೋವಿನಿಂದಾಗಿ ಕಳೆದ ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್ನಲ್ಲಿ ಅಂತಿಮ ಎಂಟರ ಸುತ್ತಿಗೇರಿದ ಬಳಿಕ ಹಿಂದೆ ಸರಿದಿದ್ದರು. ಫೆಬ್ರವರಿ ಕೊನೆಯಲ್ಲಿ ನಡೆದ ಮೆಕ್ಸಿಕನ್ ಓಪನ್ನಲ್ಲಿ ನಡಾಲ್ ಪಾಲ್ಗೊಳ್ಳುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಆ ಟೂರ್ನಿಯಲ್ಲೂ ಅವರು ಪಾಲ್ಗೊಂಡಿರಲಿಲ್ಲ.