ನಡಾಲ್‌ ಟೆನಿಸ್‌ ಅಕಾಡೆಮಿ ಆರಂಭ

Team Udayavani, Feb 21, 2019, 12:30 AM IST

ಮೆಕ್ಸಿಕೊ: ಟೆನಿಸ್‌ ದಿಗ್ಗಜ ರಫೆಲ್‌ ನಡಾಲ್‌ ಇಲ್ಲಿನ ಕ್ಯಾನ್‌ಕನ್‌ನಲ್ಲಿರುವ ಕೆರಿಬಿಯನ್‌ ಕಡಲತೀರದ ರೆಸಾರ್ಟ್‌ನಲ್ಲಿ ನೂತನ ಟೆನಿಸ್‌ ಅಕಾಡೆಮಿ ಪ್ರಾರಂಭಿಸಿದ್ದಾರೆ.

ಈ ಅಕಾಡೆಮಿ ಹೆಸರು “ಕೊಸ್ಟಾ ಮುಜೆರೆಸ್‌ ಸೆಂಟರ್‌’. ಇದು ನಡಾಲ್‌ ತವರೂರಾದ ಮಲ್ಲೋರ್ಕಾದಲ್ಲಿರುವ ಮೂಲ ಅಕಾಡೆಮಿಯ ವಿಸ್ತೃತ ರೂಪವಾಗಿದೆ.

“ಹಲವು ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇವೆ. ಈ ಸ್ಥಳ ಚಿರಪರಿಚಿತ. ಹೀಗಾಗಿ ಇಲ್ಲಿ ಅಕಾಡೆಮಿ ತೆರೆಯುವ ನಿರ್ಧಾರ ಕೈಗೊಂಡಿದ್ದೇನೆ. ಮೆಕ್ಸಿಕೋದಲ್ಲಿ ಟೆನಿಸ್‌ ಕ್ರೀಡೆಯನ್ನು ಸುಧಾರಿಸುವ ನಿಟ್ಟಿನಲ್ಲಿ ನಾನು ಈ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ರಫೆಲ್‌ ನಡಾಲ್‌ ಹೇಳಿದ್ದಾರೆ.

ಈ ಟೆನಿಸ್‌ ಅಕಾಡೆಮಿಯಲ್ಲಿ ಫ್ಲಡ್‌ಲೈಟ್‌ ಒಳಗೊಂಡ 8 ಆವೆಮಣ್ಣಿನ ಕೋರ್ಟ್‌, ಒಂದು ಪ್ಯಾಡಲ್‌ ಕೋರ್ಟ್‌ ಹಾಗೂ ಜಿಮ್ನೆàಶಿಯಂ ಇದೆ.

ನಡಾಲ್‌ ಕನಸು
ಗತಕಾಲದಲ್ಲಿ ಸಾಕಷ್ಟು ಟೆನಿಸ್‌ ತಾರೆಗಳನ್ನು ಹೊಂದಿದ್ದ ಮೆಕ್ಸಿಕೊ ಈಗ ಈ ಕ್ರೀಡೆಯಲ್ಲಿ ಬಹಳ ಹಿಂದುಳಿದಿದೆ. ನಂಬರ್‌ ವನ್‌ ಆಗಿದ್ದ ರಫೆಲ್‌ ಒಸುನ ಮೆಕ್ಸಿಕೋದ ಖ್ಯಾತ ಟೆನಿಸಿಗನಾಗಿದ್ದರು. 1963ರಲ್ಲಿ ಯುಎಸ್‌ ಓಪನ್‌ ಪ್ರಶಸ್ತಿ ಗೆದ್ದ ಹೆಗ್ಗಳಿಕೆ ಒಸುನ ಅವರದಾಗಿತ್ತು. 3 ಗ್ರ್ಯಾನ್‌ಸ್ಲಾಮ್‌ ಡಬಲ್ಸ್‌ ಜತೆಗೆ 1968ರ ಒಲಿಂಪಿಕ್ಸ್‌ನಲ್ಲಿ ಡಬಲ್ಸ್‌ ವಿಭಾಗದ ಚಿನ್ನ ಗೆದ್ದ ಸಾಧಕನೂ ಆಗಿದ್ದರು. 1962ರಲ್ಲಿ ಒಸುನ ಸಾಹಸದಿಂದಲೇ ಮೆಕ್ಸಿಕೊ ಡೇವಿಸ್‌ ಕಪ್‌ ಫೈನಲ್‌ಗೆ ಲಗ್ಗೆ ಇರಿಸಿತ್ತು. ಮೆಕ್ಸಿಕೋದಲ್ಲಿ ಮತ್ತೆ ಇಂಥ ಆಟಗಾರರು ಕಾಣಿಸಿಕೊಳ್ಳಬೇಕು ಎಂಬುದು ನಡಾಲ್‌ ಕನಸು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ