ಈ ಟೆನಿಸ್‌ ತ್ರಿವಿಕ್ರಮರಿಗೆ ಇನ್ನೆಷ್ಟು ಗ್ರ್ಯಾನ್‌ ಸ್ಲ್ಯಾಮ್‌ ಒಲಿಯುತ್ತೆ?

Team Udayavani, Sep 20, 2019, 6:00 PM IST

ಒಂದೇ ಕಾಲಘಟ್ಟದಲ್ಲಿ ಆಡುತ್ತಿದ್ದಾರೆ ಟೆನಿಸ್‌ ಮೂವರು ಸಾರ್ವಕಾಲಿಕ ಶ್ರೇಷ್ಠರು
10 ವರ್ಷದಲ್ಲಿ ನಡೆದ 40 ಗ್ರ್ಯಾನ್‌ ಸ್ಲ್ಯಾಮ್‌ ಗಳಲ್ಲಿ ಫೆಡರರ್‌, ನಡಾಲ್‌, ಜೊಕೊಗೆ 33 ಕಿರೀಟ
-ಅಭಿಲಾಷ್‌ ಬಿ.ಸಿ.

ಇತ್ತೀಚೆಗಷ್ಟೇ ಮುಗಿದ ಯುಎಸ್‌ ಓಪನ್‌ ಪುರುಷರ ಸಿಂಗಲ್ಸ್‌ ಪ್ರಶಸ್ತಿಯನ್ನು ಸ್ಪೇನಿನ ರಫೆಲ್‌ ನಡಾಲ್‌ ಗೆದ್ದುಕೊಂಡರು. ಇದು ಅವರು ಗೆದ್ದ 19ನೇ ಗ್ರ್ಯಾನ್‌ ಸ್ಲ್ಯಾಮ್‌ ಕಿರೀಟ. ಇಲ್ಲಿಗೆ ಹಲವು ವರ್ಷಗಳಿಂದ ನಡೆಯುತ್ತಿದ್ದ ಚರ್ಚೆಯೊಂದು ಮತ್ತೆ ಮುನ್ನೆಲೆಗೆ ಬಂದಿದೆ. ಟೆನಿಸ್‌ ಜಗತ್ತಿನ ಸಾರ್ವಕಾಲಿಕ ಮೂವರು ಶ್ರೇಷ್ಠ ಆಟಗಾರರು ಒಂದು ಕಾಲಘಟ್ಟದಲ್ಲಿ ಆಡುತ್ತಿರುವುದಕ್ಕೆ ಸಂಬಂಧಿಸಿದ ಚರ್ಚೆ ಇದು. ರೋಜರ್‌ ಫೆಡರರ್‌, ರಫೆಲ್‌ ನಡಾಲ್‌, ನೊವಾಕ್‌ ಜೊಕೊವಿಕ್‌, ಹೀಗೆ ಗ್ರ್ಯಾನ್‌ ಸ್ಲ್ಯಾಮ್‌ ಗಳನ್ನು ಸತತವಾಗಿ ಗೆಲ್ಲುತ್ತಿರುವುದರ ಹಿಂದಿನ ರಹಸ್ಯವಾದರೂ ಏನು? ಇವರ ಸಾಮರ್ಥ್ಯದ ಗುಟ್ಟೇನು? ಈ ಮೂವರಲ್ಲಿ ನಿಜಕ್ಕೂ ಯಾರು ಶ್ರೇಷ್ಠ ಆಟಗಾರ?

ಕಳೆದೊಂದು ದಶಕ ಅಂದರೆ 2010ರಿಂದ 2019ರವರೆಗೆ ನಡೆದ 40 ಗ್ರ್ಯಾನ್‌ ಸ್ಲ್ಯಾಮ್‌ ಗಳಲ್ಲಿ 33 ಪ್ರಶಸ್ತಿಗಳನ್ನು ಈ ಮೂವರೇ ಗೆದ್ದಿದ್ದಾರೆ! ಬಿಟ್ಟುಕೊಟ್ಟಿರುವುದು ಕೇವಲ 7 ಪ್ರಶಸ್ತಿಗಳನ್ನು ಮಾತ್ರ. ಈಗ ನೀವು ಮೂವರ ಅಧಿಪತ್ಯವನ್ನು ಊಹಿಸಿ. ಟೆನಿಸ್‌ ನಲ್ಲಿ ಗರಿಷ್ಠ ಪ್ರಶಸ್ತಿಗಳನ್ನು ಗೆದ್ದಿರುವ ಮೂವರು ತಾರೆಯರೂ ಇವರೇ. ಸ್ವಿಜರ್ಲೆಂಡ್‌ ನ‌ ರೋಜರ್‌ ಫೆಡರರ್‌ 20 ಪ್ರಶಸ್ತಿಗಳನ್ನು ಗೆದ್ದು ಅಗ್ರಸ್ಥಾನದಲ್ಲಿದ್ದರೆ, ನಡಾಲ್‌ 19 ಪ್ರಶಸ್ತಿ ಗೆದ್ದು 2 ನೇ ಸ್ಥಾನದಲ್ಲಿದ್ದಾರೆ. ಜೊಕೊವಿಕ್‌ 16 ಪ್ರಶಸ್ತಿ ಗೆದ್ದು 3 ನೇ ಸ್ಥಾನದಲ್ಲಿದ್ದಾರೆ. ಇವರನ್ನು ಬಿಟ್ಟರೆ ಗರಿಷ್ಠ ಪ್ರಶಸ್ತಿ ಗೆದ್ದ ಇನ್ನೊಬ್ಬ ಸಾಧಕ ಪೀಟ್‌ ಸಾಂಪ್ರಾಸ್‌. ಪ್ರಶಸ್ತಿಗಳ ಸಂಖ್ಯೆ 14. ಈ ಮೂವರು ತಮ್ಮ ಮೊದಲ ಗ್ರ್ಯಾನ್‌ ಸ್ಲ್ಯಾಮ್‌ ಪ್ರಶಸ್ತಿ ಗೆಲ್ಲುವ ಮುಂಚೆಯೇ ಸಾಂಪ್ರಾಸ್‌ ನಿವೃತ್ತಿ ಹೊಂದಿದ್ದರು. ಅನಂತರ ಈ ಮೂವರ ಆರ್ಭಟ ಶುರುವಾದಾಗ ಅದು ಈ ಮಟ್ಟಕ್ಕೆ ಬೆಳೆಯುತ್ತದೆ ಎಂದು ಯಾರೂ ಊಹೆ ಮಾಡಿರಲಿಲ್ಲ !

ಮೂವರಿಗೆ ಇನ್ನೆಷ್ಟು ಪ್ರಶಸ್ತಿ?
ಬರೀ ಗ್ರ್ಯಾನ್‌ ಸ್ಲ್ಯಾಮ್‌ ಒಂದನ್ನೇ ಗಮನದಲ್ಲಿಟ್ಟುಕೊಂಡರೂ, ಈ ಮೂವರಲ್ಲಿ ಯಾರು ಹೆಚ್ಚು ಪ್ರಶಸ್ತಿ ಗೆಲ್ಲುತ್ತಾರೆಂದು ಊಹಿಸುವುದು ಕಷ್ಟ. ಆದರೆ ಮೂವರ ವಯಸ್ಸನ್ನು ಗಮನಿಸಿದರೆ, ಒಂದು ಹಂತದ ಅಂದಾಜು ಮಾಡಬಹುದು. ಮೂವರಿಗೆ ದೈಹಿಕ ಸಕ್ಷಮತೆಯ ಸಮಸ್ಯೆ ದೊಡ್ಡ ಪ್ರಮಾಣದಲ್ಲಿ ಕಾಡಿದೆ. ಇದೇ ಕಾರಣದಿಂದ ಆಗಾಗ ಟೆನಿಸ್‌ ನಿಂದ ದೂರವಾಗಿದ್ದು, ಹಾಗೆಯೇ ಪ್ರಶಸ್ತಿಗಳನ್ನು ಕಳೆದುಕೊಂಡಿದ್ದೂ ಇದೆ. ಸದ್ಯ ಮೂವರ ದೈಹಿಕ ಕ್ಷಮತೆ ಅತ್ಯುತ್ತಮ ಮಟ್ಟದಲ್ಲಿಯೇ ಇರುತ್ತದೆ ಎಂದು ಊಹಿಸಿ ಮುಂದುವರಿಯೋಣ.

ಫೆಡರರ್‌ ಗೆ ಇನ್ನು ಮೂರು ಕಷ್ಟವಲ್ಲ
ಫೆಡರರ್‌ ಗೆ ಈ 38 ವರ್ಷ. ಕ್ರೀಡಾಭಾಷೆಯಲ್ಲಿ ಹೇಳುವುದಾದರೆ ಇನ್ನೆರಡು ವರ್ಷಕ್ಕೆ ಅವರು ನಿವೃತ್ತಿ ಘೋಷಿಸಬೇಕು. ಅದರ ನಂತರವೂ ಮುಂದುವರಿದರೆ ಅದು ಅವರ ಶರೀರಶಕ್ತಿಯನ್ನು ನಿರ್ಧರಿಸಿ ಕೈಗೊಳ್ಳುವ ತೀರ್ಮಾನ. ಪ್ರಸ್ತುತ ಫೆಡರರ್‌ ಯುವ ಫೆಡರರ್‌ ಆಗಿದ್ದಾಗ ಇದ್ದ ಸಕ್ಷಮತೆ ಹೊಂದಿಲ್ಲ. ಆದ್ದರಿಂದ 40 ವರ್ಷವಾದಾಗ ಅವರು ನಿವೃತ್ತಿಯಾಗಿಯಾರು.

ಹಾಗಾದರೆ ಅವರು ಇನ್ನೂ 8 ಗ್ರ್ಯಾನ್‌ ಸ್ಲ್ಯಾಮ್‌ಗಳನ್ನು ಆಡಬಹುದು. ಅದರಲ್ಲಿ ಗರಿಷ್ಠವೆಂದರೆ 2ರಿಂದ 3 ಪ್ರಶಸ್ತಿಯನ್ನು ಗೆಲ್ಲಬಹುದು. ಸದ್ಯದ ಅವರ ಪ್ರದರ್ಶನ ಗಮನಿಸಿದರೆ ಇದೂ ಅನುಮಾನ. ಆದರೂ ಫೆಡರರ್‌ ಊಹಾತೀತ ಆಟಗಾರ. ಪದೇಪದೇ ಜನರ ಊಹೆಗಳನ್ನು ಸುಳ್ಳು ಮಾಡಿದ್ದಾರೆ. ಅವರು ತಮ್ಮ 20ನೇ ಪ್ರಶಸ್ತಿ ಗೆಲ್ಲುತ್ತಾರೆಂದು ಯಾರೂ ನಂಬಿರಲಿಲ್ಲ. ಕಾರಣ ಅಷ್ಟೊತ್ತಿಗಾಗಲೇ ಅವರ ಪ್ರದರ್ಶನ ಮಟ್ಟ ಸಂಪೂರ್ಣ ಕುಸಿದಿತ್ತು. ಈ ತರ್ಕವನ್ನು ಅನ್ವಯಿಸಿದರೆ ಮುಂಚಿತವಾಗಿ, ಹೀಗೆಯೇ ಎಂದು ಊಹೆ ಮಾಡುವುದು ತಪ್ಪಾದೀತು. ಒಟ್ಟಾರೆ ಫೆಡರರ್‌ ಪ್ರಶಸ್ತಿಗಳ ಸಂಖ್ಯೆ 23ಕ್ಕೇರಬಹುದು.

ಗ್ರ್ಯಾನ್‌ ಸ್ಲ್ಯಾಮ್‌ ಸಾಧನೆ
ಒಟ್ಟು ಫೈನಲ್‌-31
ಗೆದ್ದ ಪ್ರಶಸ್ತಿ-20
ದ್ವಿತೀಯ ಸ್ಥಾನ-11
ಆಸ್ಟ್ರೇಲಿಯನ್‌ ಓಪನ್‌-6
ಫ್ರೆಂಚ್‌ ಓಪನ್‌-1
ವಿಂಬಲ್ಡನ್‌-8
ಯುಎಸ್‌ ಓಪನ್‌-5

ಫ್ರೆಂಚ್‌ ಸರ್ದಾರ ನಡಾಲ್‌ 25 ದಾಟಬಹುದು!
ಸ್ಪೇನಿನ ಬಲಾಡ್ಯ ಆಟಗಾರ ರಫೆಲ್‌ ನಡಾಲ್‌ಗೆ ಈಗ 33 ವರ್ಷ. ಎಡಗೈನ ಬಲಿಷ್ಠ ಸರ್ವೀಸ್‌ಗಳು ಇವರ ತಾಕತ್ತು. ಇವರು ಈಗ 19 ಪ್ರಶಸ್ತಿ ಗೆದ್ದಿದ್ದಾರೆ. ಇವರ ಸದ್ಯದ ದೈಹಿಕ ಕ್ಷಮತೆಯನ್ನು ಗಮನಿಸಿದರೆ ಇನ್ನೂ ಕನಿಷ್ಠ 6 ಪ್ರಶಸ್ತಿಯನ್ನು ಗೆಲ್ಲಬಲ್ಲರು. ಇವರಿಗೆ ನಿವೃತ್ತಿಯಾಗಲು ಕನಿಷ್ಠ 7 ವರ್ಷಗಳಿವೆ. ಅಷ್ಟರಲ್ಲಿ 28 ಗ್ರ್ಯಾನ್‌ ಸ್ಲ್ಯಾಮ್‌ ಗಳನ್ನು ಆಡಿ, ಕನಿಷ್ಠ 6 ಪ್ರಶಸ್ತಿಗಳನ್ನು ಗೆಲ್ಲುವುದು ಅಸಾಧ್ಯವಂತೂ ಅಲ್ಲ. ಅವರ ಪ್ರಶಸ್ತಿಗಳ ಸಂಖ್ಯೆ 30ನ್ನು ಮುಟ್ಟಿದರೆ ಅಚ್ಚರಿಯಿಲ್ಲ. ನಡಾಲ್‌ ಗ್ರ್ಯಾನ್‌ ಸ್ಲ್ಯಾಮ್‌ ನಲ್ಲಿ ಪ್ರಶಸ್ತಿ ಗೆಲ್ಲಲು ಆರಂಭಿಸಿದ ನಂತರ ಎರಡು ಬಾರಿ ತೀವ್ರ ಹಿನ್ನಡೆ ಅನುಭವಿಸಿದ್ದಾರೆ. 2011-12ರಲ್ಲಿ ಅವರಿಗೆ ಹೇಳಿಕೊಳ್ಳುವಂತಹ ಸಾಧನೆ ತೋರಲಿಲ್ಲ. ಆದರೆ ಅವರಿಗೆ ನಿಜಕ್ಕೂ ಬರಗಾಲ ಉಂಟಾಗಿದ್ದು 2014ರ ಅಂತ್ಯದ ನಂತರ. ಮುಂದಿನ ಎರಡು ವರ್ಷಗಳ ಕಾಲ ಅವರು ಯಾವುದೇ ಗ್ರ್ಯಾನ್‌ ಸ್ಲ್ಯಾಮ್‌ ಗೆಲ್ಲಲಿಲ್ಲ. ಈ ಅವಧಿಯಲ್ಲಿ ಅವರು ಬೇಗ ಬೇಗ ಸೋತು ಹೊರಬೀಳುತ್ತಿದ್ದುದ್ದನ್ನು ಗಮನಿಸಿದಾಗ ನಡಾಲ್‌ ವೃತ್ತಿಜೀವನ ಮುಗಿಯಿತು ಎಂದೇ ಭಾವಿಸಲಾಗಿತ್ತು. 2017ರಿಂದ ನಡಾಲ್‌ ತಿರುಗಿಬಿದ್ದು ಸ್ಫೋಟಕ ಆಟವಾಡಿದರು. ಈ ಎರಡು ವರ್ಷದಲ್ಲಿ ಅವರು ಐದು ಗ್ರ್ಯಾನ್‌ ಸ್ಲ್ಯಾಮ್‌ ಗೆದ್ದರು. ಹಾಗಾಗಿ ಅವರ ಓಟ ನಿಲ್ಲುತ್ತದೆ ಎಂದು ಭಾವಿಸುವುದಕ್ಕೆ ಸದ್ಯ ಕಾರಣವಿಲ್ಲ.

ಗ್ರ್ಯಾನ್‌ ಸ್ಲ್ಯಾಮ್‌ ಸಾಧನೆ
ಒಟ್ಟು ಫೈನಲ್‌-27
ಗೆದ್ದ ಪ್ರಶಸ್ತಿ-19
ದ್ವಿತೀಯ ಸ್ಥಾನ-8
ಆಸ್ಟ್ರೇಲಿಯನ್‌ ಓಪನ್‌-1
ಫ್ರೆಂಚ್‌ ಓಪನ್‌-12
ವಿಂಬಲ್ಡನ್‌-2
ಯುಎಸ್‌ ಓಪನ್‌-4

ಬಲಿಷ್ಠ ಜೊಕೊ 20 ದಾಟುವುದು ಕಷ್ಟವೇ ಅಲ್ಲ
ಸರ್ಬಿಯದ ನೊವಾಕ್‌ ಜೊಕೊವಿಕ್‌ ಗೆ ಈಗ 32 ವರ್ಷ. ಅವರ ಮುಂದೆಯೂ ಈಗ 8 ವರ್ಷ ಅವಧಿಯಿದೆ. ಲೆಕ್ಕಾಚಾರದ ಪ್ರಕಾರ ಅವರಿಗೆ 32 ಗ್ರ್ಯಾನ್‌ ಸ್ಲ್ಯಾಮ್‌ ಗಳು ಸಿಗುತ್ತವೆ. ಅವರು ದೈಹಿಕ ಸಕ್ಷಮತೆ ಉಳಿಸಿಕೊಂಡರೆ ಕನಿಷ್ಠ 20 ಗ್ರ್ಯಾನ್‌ ಸ್ಲ್ಯಾಮ್‌ ಗೆಲ್ಲುತ್ತಾರೆ. ಎಲ್ಲವೂ ಅವರಿಗೆ ಸರಿಯಾಗಿ ನಡದರೆ ಜೊಕೊಗೆ 30 ಗ್ರ್ಯಾನ್‌ ಸ್ಲ್ಯಾಮ್‌ ಗೆಲ್ಲುವ ಎಲ್ಲ ಅರ್ಹತೆ ಇದೆ. ಅವರ ಪ್ರತಿಭೆ, ಕೌಶಲಗಳನ್ನು ಗಮನಿಸಿದರೆ ಅವರಿಗೆ ಸವಾಲಾಗಬಲ್ಲಂಥದ್ದು ದೈಹಿಕ ಶಕ್ತಿಯ ಕೊರತೆ ಮಾತ್ರ!

ಫೆಡರರ್‌, ನಡಾಲ್‌ಗೆ ಹೋಲಿಸಿದರೆ ಅತಿಹೆಚ್ಚು ಸಕ್ಷಮತೆ ಕೊರತೆಯಿಂದ ನರಳುತ್ತಿರುವುದು ಜೊಕೊವಿಕ್‌. ಒಂದು ವೇಳೆ ಜೊಕೊ ನಿರೀಕ್ಷೆಯಷ್ಟು ಸಾಧಿಸದಿದ್ದರೆ ಅದಕ್ಕೆ ಏಕೈಕ ಕಾರಣ ದೇಹ ಸ್ಪಂದಿಸದಿರುವುದು ಮಾತ್ರ ಎಂಬುದು ಸ್ಪಷ್ಟ. ಆರಂಭದಲ್ಲಿ ಫೆಡರರ್‌, ನಡಾಲ್‌ ಪೈಪೋಟಿ ಮೇಲೆ ಗ್ರ್ಯಾನ್‌ ಸ್ಲ್ಯಾಮ್‌ ಗೆಲ್ಲುತ್ತಿದ್ದಾಗ ಅವರಿಗೆ ಜೊಕೊವಿಕ್‌ ರೂಪದಲ್ಲಿ ಸ್ಪರ್ಧಿಯೊಬ್ಬರು ಹುಟ್ಟಿಕೊಂಡರು. ಈ ಇಬ್ಬರ ಏಕಸ್ವಾಮ್ಯ ಮುರಿದು ಸತತವಾಗಿ ಪ್ರಶಸ್ತಿ ಗೆಲ್ಲುತ್ತ ಹೋದರು. ಅಲ್ಲಿಗೆ ನಡಾಲ್‌, ಫೆಡರರ್‌ ಯುಗಾಂತ್ಯವಾಯಿತು ಎಂದುಕೊಂಡಿದ್ದಾಗ ಜೊಕೊ ಭುಜದ ನೋವಿನ ಸಮಸ್ಯೆಗೆ ತುತ್ತಾಗಿ ಮಂಕಾಗಿದ್ದು ಇತಿಹಾಸ.

ಗ್ರ್ಯಾನ್‌ ಸ್ಲ್ಯಾಮ್‌ ಸಾಧನೆ
ಒಟ್ಟು ಫೈನಲ್‌-25
ಗೆದ್ದ ಪ್ರಶಸ್ತಿ-16
ದ್ವಿತೀಯ ಸ್ಥಾನ-9
ಆಸ್ಟ್ರೇಲಿಯನ್‌ ಓಪನ್‌-7
ಫ್ರೆಂಚ್‌ ಓಪನ್‌-1
ವಿಂಬಲ್ಡನ್‌-5
ಯುಎಸ್‌ ಓಪನ್‌-3

ಸ್ಪರ್ಧೆಯಿರುವುದು ನಡಾಲ್‌-ಜೊಕೊ ನಡುವೆ
ಫೆಡರರ್‌ ಬಹುತೇಕ ನಿವೃತ್ತಿಯ ಸನಿಹವಿರುವುದರಿಂದ, ಪ್ರಶಸ್ತಿಯ ಲೆಕ್ಕಾಚಾರದಲ್ಲಿ (ಆಟದ ಕೌಶಲದ ದೃಷ್ಟಿಯನ್ನು ಇಲ್ಲಿ ಪರಿಗಣಿಸಿಲ್ಲ) ಸಾರ್ವಕಾಲಿಕ ಶ್ರೇಷ್ಠ ಆಟಗಾರ ಸ್ಥಾನ ಗಳಿಸುವ ಪೈಪೋಟಿಯಿರುವುದು ನಡಾಲ್‌ ಮತ್ತು ಜೊಕೊವಿಕ್‌ ನಡುವೆ. ಇಬ್ಬರಿಗೂ ವಯಸ್ಸಿದೆ, ಶಕ್ತಿಯೂ ಇದೆ. ಈ ಇಬ್ಬರ ಮಧ್ಯೆ ಮುಂದಿನ ದಿನಗಳಲ್ಲಿ ಪ್ರಶಸ್ತಿಗಳನ್ನು ಜಯಿಸಲು ಪೈಪೋಟಿ ಶುರುವಾಗಬಹುದು. ಅಷ್ಟರಲ್ಲಿ ಫೆಡರರ್‌ ಯುಗಾಂತ್ಯವಾಗಿರುತ್ತದೆ ಎನ್ನುವುದು ಫ್ರೆಡ್ಡೀ ಅಭಿಮಾನಿಗಳ ಆತಂಕ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಹೊಸದಿಲ್ಲಿ/ಮುಂಬಯಿ: ಲೋಕಸಭೆ ಚುನಾವಣೆ ಬಳಿಕ ನಡೆಯುತ್ತಿರುವ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಶುರುವಾಗಿದೆ. ಸೋಮವಾರ...

  • ಬೆಂಗಳೂರು: ಪೊಲೀಸ್‌ ಇಲಾಖೆಯ ಅಧಿಕಾರಿ ಹಾಗೂ ಸಿಬಂದಿ ವರ್ಗದ ವೇತನ ಹೆಚ್ಚಳ ಮಾಡುವ ಮೂಲಕ ರಾಜ್ಯ ಸರಕಾರ ಭರ್ಜರಿ ದೀಪಾವಳಿ ಕೊಡುಗೆ ನೀಡಿದೆ. ಪೊಲೀಸ್‌ ಅಧಿಕಾರಿ,...

  • ಗಂಗಾವತಿ: ಪ್ರವಾಹದಿಂದಾಗಿ ವಿರೂಪಾಪುರ ಗಡ್ಡಿಯಲ್ಲಿ ಸಿಲುಕಿಕೊಂಡಿದ್ದ 350ಕ್ಕೂ ಹೆಚ್ಚು ಟೆಕ್ಕಿಗಳನ್ನು ರಕ್ಷಿಸಲಾಗಿದೆ. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ...

  • ಇನ್ನೇನು, ಗಂಟೆ 8 ಹೊಡೆ ಯುವ ಮೊದಲೇ ನಾನು ನನ್ನ ಸಂಶೋಧನಾಲಯದ ಬಾಗಿಲಲ್ಲಿ ಇರುತ್ತೇನೆ. ಮತ್ತಿನ್ನೇನು ಮಾಡಲಿ? ನನ್ನ ಮನೆಯಲ್ಲಿಯೇ ಇದ್ದು, ನನ್ನ ಮೃತ್ಯುವಿಗೆ ಕಾಯುತ್ತಾ...

  • ಕೊಲ್ಲೂರು: ಮಹಾತ್ಮಾ ಗಾಂಧಿ ಜಯಂತಿಯ 150ನೇ ವರ್ಷದ ಅಂಗವಾಗಿ ಸ್ವದೇಶಿ, ಸ್ವರಾಜ್‌, ಸ್ವಾವಲಂಬಿ ಮತ್ತು ಸ್ವಚ್ಛ ಭಾರತ ಸಾಕಾರಕ್ಕಾಗಿ ಸಂಸದ ಬಿ.ವೈ. ರಾಘವೇಂದ್ರ ಅವರ...