ಜೈಲಿನಲ್ಲಿ ಹೊಡೆದಾಟ: ಪಿಸ್ಟೋರಿಯಸ್‌ಗೆ ಪೆಟ್ಟು
Team Udayavani, Dec 13, 2017, 12:19 PM IST
ಜೊಹಾನ್ಸ್‌ಬರ್ಗ್: ಗೆಳತಿಯನ್ನು ಗುಂಡಿಕ್ಕಿ ಕೊಂದ ಆರೋಪದಲ್ಲಿ 13 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ದಕ್ಷಿಣ ಆಫ್ರಿಕಾದ ಬ್ಲೇಡ್ ರನ್ನರ್, ಪ್ಯಾರಾಲಿಂಪಿಯನ್ ಆಸ್ಕರ್ ಪಿಸ್ಟೋರಿಯಸ್‌ಗೆ ಈಗ ಮತ್ತೂಂದು ಸಂಕಟ ಎದುರಾಗಿದೆ. ಜೈಲಿನಲ್ಲಿರುವ ಸಾರ್ವಜನಿಕ ಫೋನ್ ಬಳಕೆ ಸಂಬಂಧ ಅವರು ಕೈದಿಯೊಂದಿಗೆ ಗಲಾಟೆ ಮಾಡಿ ಕೊಂಡಿದ್ದಾರೆ. ಅದು ಹೊಡೆದಾಟದವರೆಗೂ ಸಾಗಿದ್ದು, ಪಿಸ್ಟೋರಿಯಸ್ ಗಾಯಗೊಂಡಿದ್ದಾರೆ.
ಜೈಲಿನಲ್ಲಿದ್ದ ದೂರವಾಣಿಯಲ್ಲಿ ಪಿಸ್ಟೋರಿಯಸ್ ಮಾತ ನಾಡುತ್ತಿದ್ದರು. ಈ ವೇಳೆ ಹೆಚ್ಚು ಹೊತ್ತು ತೆಗೆದುಕೊಂಡಿದ್ದಕ್ಕೆ ಕೈದಿಯೊಬ್ಬ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಮಾತಿಗೆ ಮಾತು ಬೆಳೆದಿದೆ. ಇಬ್ಬರೂ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಘಟನೆಯಲ್ಲಿ ಪಿಸ್ಟೋರಿಯಸ್ ಗಾಯಗೊಂಡರು. ಘಟನೆ ಕುರಿತಂತೆ ತನಿಖೆಗೆ ಆದೇಶ ನೀಡಲಾಗಿದೆ.
ಇತ್ತೀಚೆಗಷ್ಟೇ ಪಿಸ್ಟೋರಿಯಸ್ ಶಿಕ್ಷೆ ಪ್ರಮಾಣವನ್ನು ಮತ್ತೆ ಹೆಚ್ಚಿಸಿ ನ್ಯಾಯಾಲಯ ಆದೇಶ ಹೊರಡಿಸಿತ್ತು. 2013ರ ಪ್ರೇಮಿಗಳ ದಿನದಂದು ಪಿಸ್ಟೋರಿಯಸ್, ಗೆಳತಿ ರೇವಾ ಸ್ಟೀನ್‌ಕೆಂಪ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.