ಸೇನಾ ಕ್ಯಾಪ್ ಧರಿಸಿದ ಟೀಮ್ ಇಂಡಿಯಾ ವಿರುದ್ಧ ಕ್ರಮಕ್ಕೆ ಪಾಕ್ ಒತ್ತಾಯ
Team Udayavani, Mar 9, 2019, 10:22 AM IST
ಹೊಸದಿಲ್ಲಿ: ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ‘ಸೇನಾ ಕ್ಯಾಪ್’ ಧರಿಸಿ ಆಡಿದ ಭಾರತೀಯ ಕ್ರಿಕೆಟ್ ಆಟಗಾರರ ಮತ್ತು ಬಿಸಿಸಿಐನ ವಿರುದ್ಧ ತನಿಖೆ ನಡೆಸಬೇಕೆಂದು ಪಾಕಿಸ್ಥಾನ, ಐಸಿಸಿಗೆ ಒತ್ತಾಯ ಮಾಡಿದೆ.
ಶುಕ್ರವಾರ ರಾಂಚಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲು ವಿಶೇಷ ಸೇನಾ ಕ್ಯಾಪ್ ಧರಿಸಿ ಕಣಕ್ಕಿಳಿದಿತ್ತು. ಇನ್ನು ಮುಂದೆ ಪ್ರತೀ ವರ್ಷ ಒಂದು ದಿನ ಹೀಗೆ ಸೇನಾ ಕ್ಯಾಪ್ ಧರಿಸಿ ಭಾರತೀಯ ಸೇನೆಗೆ ಗೌರವ ನೀಡುವುದಾಗಿ ಬಿಸಿಸಿಐ ಹೇಳಿಕೊಂಡಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಪಾಕಿಸ್ಥಾನದ ಸಚಿವ ಫಾವದ್ ಚೌಧರಿ, ಇದು ಕ್ರಿಕೆಟ್ ಆಟ ಅಲ್ಲ! ಜಂಟಲ್ ಮ್ಯಾನ್ ಆಟವನ್ನು ರಾಜಕೀಯವಾಗಿ ಬಳಸಿಕೊಳ್ಳುವುದರ ಬಗ್ಗೆ ಐಸಿಸಿ ಕ್ರಮ ಕೈಗೊಳ್ಳುತ್ತದೆ ಎಂದು ನಾನು ನಂಬಿದ್ದೇನೆ. ಒಂದು ವೇಳೆ ಭಾರತ ತಂಡ ಇದನ್ನು ನಿಲ್ಲಿಸದೇ ಹೋದರೆ ಪಾಕಿಸ್ಥಾನ ಕ್ರಿಕೆಟ್ ತಂಡ ಕೂಡಾ ಕಪ್ಪು ಪಟ್ಟಿಯನ್ನು ಸುತ್ತಿ ಕಾಶ್ಮೀರದಲ್ಲಿ ಭಾರತ ನಡೆಸುತ್ತಿರುವ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ. ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಈ ಬಗ್ಗೆ ಪ್ರತಿಭಟನೆ ನಡೆಸಬೇಕು ಎಂದಿದ್ದಾರೆ.