ಪ್ರೊ ಕಬಡ್ಡಿ ಹರಾಜು: 2.26 ಕೋ.ರೂ ಪಡೆದು ದಾಖಲೆ ನಿರ್ಮಿಸಿದ ಪವನ್ ಸೆಹ್ರಾವತ್
Team Udayavani, Aug 7, 2022, 7:10 AM IST
ಮುಂಬೈ: 9ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ಗೆ ಮುಂಬೈನಲ್ಲಿ ಯಶಸ್ವಿಯಾಗಿ ಹರಾಜು ಪ್ರಕ್ರಿಯೆ ಮುಗಿಸಲಾಯಿತು. ಆ.5 ಮತ್ತು 6ರಂದು ನಡೆದ ಹರಾಜಿನಲ್ಲಿ ಒಟ್ಟು 130 ಆಟಗಾರರು ಮಾರಾಟವಾಗಿದ್ದಾರೆ.
ವಿಶೇಷ ಸಂಗತಿಯೆಂದರೆ ಪ್ರೊ ಕಬಡ್ಡಿ ಇತಿಹಾಸದಲ್ಲೇ ಗರಿಷ್ಠ ಮೊತ್ತವನ್ನು ಆಟಗಾರರು ಗಳಿಸಿದ್ದಾರೆ. ತಮಿಳ್ ತಲೈವಾಸ್ಗೆ ಆಯ್ಕೆಯಾದ ಪವನ್ ಕುಮಾರ್ ಸೆಹ್ರಾವತ್ 2.26 ಕೋಟಿ ರೂ. ಪಡೆದು ದಾಖಲೆ ನಿರ್ಮಿಸಿದ್ದಾರೆ.
ಇವರು ಪ್ರೊ ಇತಿಹಾಸದಲ್ಲೇ ಗರಿಷ್ಠ ಹಣ ಪಡೆದ ಆಟಗಾರ. ಅವರು ಹಿಂದಿನ ಆವೃತ್ತಿ ಪ್ರದೀಪ್ ನರ್ವಾಲ್ 1.65 ಕೋಟಿ ರೂ. ಪಡೆದು ನಿರ್ಮಿಸಿದ್ದ ದಾಖಲೆಯನ್ನು ಮುರಿದರು. ಆಗ ಪ್ರದೀಪ್ ಯುಪಿ ಯೋಧಾಸ್ಗೆ ಮಾರಾಟವಾಗಿದ್ದರು.
ಈ ಬಾರಿ ಅವರು ಕೇವಲ 90 ಲಕ್ಷ ರೂ. ಗಳಿಸಿದ್ದಾರೆ. ಪ್ರಸ್ತುತ ಹರಾಜಿನಲ್ಲಿ 2ನೇ ಗರಿಷ್ಠ ಮೊತ್ತಕ್ಕೆ ವಿಕಾಶ್ ಖಂಡೋಲಾ ಮಾರಾಟವಾದರು. 1.7 ಕೋ.ರೂ. ನೀಡಿ ಬೆಂಗಳೂರು ಬುಲ್ಸ್ ಅವರನ್ನು ಖರೀದಿಸಿತು. ಪುನೇರಿ ಪಲ್ಟಾನ್ 1.38 ಕೋಟಿ ರೂ. ನೀಡಿ ಫಜೆಲ್ ಅಟ್ರಾಚೆಲಿಯನ್ನು, ಯು ಮುಂಬಾ 1.21 ಕೋ.ರೂ. ನೀಡಿ ಗುಮನ್ ಸಿಂಗ್ರನ್ನು ಖರೀದಿಸಿತು.