ಬೊಲಿವಿಯಾಗೆ ಪೆರು ಆಘಾತ

ಕೊಪಾ ಅಮೆರಿಕ ಫ‌ುಟ್‌ಬಾಲ್‌

Team Udayavani, Jun 20, 2019, 6:07 AM IST

ರಿಯೋ ಡಿ ಜನೈರೊ: ನಾಯಕ ಪಾಲೊ ಗ್ಯುರೆರೊ ಮತ್ತು ಫಾರ್ವರ್ಡ್‌ ಆಟಗಾರ ಜೆಫ‌ರ್ಸನ್‌ ಫ‌ರ್ಫಾನ್‌ ಅವರ ಉತ್ತಮ ಆಟದಿಂದಾಗಿ ಪೆರು ತಂಡ “ಕೊಪಾ ಅಮೆರಿಕ ಫ‌ುಟ್‌ಬಾಲ್‌’ ಪಂದ್ಯಾಟದಲ್ಲಿ ಬೊಲಿವಿಯಾ ತಂಡವನ್ನು 3-1 ಗೋಲುಗಳಿಂದ ಸೋಲಿಸಿದೆ.

“ಎ’ ಬಣದ ಈ ಪಂದ್ಯದಲ್ಲಿ ಪೆನಾಲ್ಟಿ ಮೂಲಕ ಗೋಲು ಹೊಡೆದ ಬೊಲಿವಿಯಾ ಮುನ್ನಡೆ ಸಾಧಿಸಿತ್ತು. ಆದರೆ ಗ್ಯುರೆರೊ ಮೊದಲ ಅವಧಿಯ ಆಟದ ವೇಳೆ ಸಮಬಲ ಸಾಧಿಸಲು ಯಶಸ್ವಿಯಾಗಿದ್ದರು. ಬಳಿಕ ಫ‌ರ್ಫಾನ್‌ ಅವರ ಅಮೋಘ ಗೋಲಿನಿಂದ ಪೆರು ಮುನ್ನಡೆ ಸಾಧಿಸಿತು. ಕೊನೆ ಹಂತದಲ್ಲಿ ಎಡಿಸನ್‌ ಫ್ಲೋರ್‌ ಇನ್ನೊಂದು ಗೋಲು ಹೊಡೆದರು.

ಆಡಿದ ಎರಡು ಪಂದ್ಯಗಳಿಂದ ಪೆರು 4 ಅಂಕ ಗಳಿಸಿದೆ. ಅಂತಿಮ ಲೀಗ್‌ ಪಂದ್ಯದಲ್ಲಿ ಅದು ಬ್ರಝಿಲ್‌ ಸವಾಲಿಗೆ ಉತ್ತರಿಸಬೇಕಿದೆ. 4 ಅಂಕ ಪಡೆದ ತಂಡಗಳು ಈ ಹಿಂದೆ ಕ್ವಾರ್ಟರ್‌ ಫೈನಲಿಗೇರಿದ ನಿದರ್ಶನವಿರುವ ಕಾರಣ ಪೆರು ಕೂಡ ಮುನ್ನಡೆಯುವ ನಿರೀಕ್ಷೆಯನ್ನು ಇರಿಸಿಕೊಳ್ಳಲಾಗಿದೆ.

“ತಂಡ ಪರಿಪೂರ್ಣ ಪ್ರದರ್ಶನ ನೀಡಿರುವುದು ಅತ್ಯಂತ ಮುಖ್ಯ ವಿಷಯವಾಗಿದೆ. ಬೊಲಿವಿಯಾ ಪೆನಾಲ್ಟಿ ಮೂಲಕ ಗೋಲು ಖಾತೆ ತೆರೆದ ಕಾರಣ ನಾವು ಆರಂಭದಲ್ಲಿ ಸ್ವಲ್ಪಮಟ್ಟಿಗೆ ಮುಜುಗರಕ್ಕೆ ಒಳಗಾಗಿದ್ದೆವು’ ಎಂದು ಗ್ಯುರೆರೊ ಹೇಳಿದರು.

ಡ್ರಾ ಸಾಧಿಸಿದ ಬ್ರಝಿಲ್‌
ದಿನದ ಇನ್ನೊಂದು ಪಂದ್ಯದಲ್ಲಿ ಬಲಿಷ್ಠ ಬ್ರಝಿಲ್‌ ತಂಡ ವೆನೆಜುವೆಲಾ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿದೆ. ಬ್ರಝಿಲ್‌ ಆಡಿದ ಎರಡು ಪಂದ್ಯಗಳಿಂದ 4 ಅಂಕ ಗಳಿಸಿ ಅಗ್ರಸ್ಥಾನದಲ್ಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ