ನಿಷೇಧಿತ ಸ್ಟೀವ್ ಸ್ಮಿತ್ ಗ್ಲೋಬಲ್ ಟಿ20 ಲೀಗ್ನಲ್ಲಿ ಆಡಲು ಸಜ್ಜು
Team Udayavani, May 26, 2018, 7:30 AM IST
ಸಿಡ್ನಿ: ಚೆಂಡು ವಿರೂಪ ಪ್ರಕರಣದ ಹಿನ್ನೆಲೆಯಲ್ಲಿ 1 ವರ್ಷ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯಿಂದ ನಿಷೇಧಕ್ಕೊಳಗಾಗಿರುವ ಮಾಜಿ ನಾಯಕ ಸ್ಟೀವ್ ಸ್ಮಿತ್ ಮತ್ತೆ ಕ್ರೀಡಾಂಗಣ ಪ್ರವೇಶಿಸುವುದು ನಿಶ್ಚಿತವಾಗಿದೆ. ಅವರು ಕೆನಡಾದಲ್ಲಿ ಜೂ.28ರಿಂದ ಜು.15ರವರೆಗೆ ನಡೆಯುವ ಗ್ಲೋಬಲ್ ಟಿ20 ಲೀಗ್ನಲ್ಲಿ ಆಡಲು ಸಜ್ಜಾಗಿದ್ದಾರೆ. ಇದಕ್ಕೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯೂ ಅನುಮತಿ ನೀಡಿದೆ.
ಈ ಕೂಟದಲ್ಲಿ ಸ್ಮಿತ್ ತಾರಾ ಆಟಗಾರ ಎನಿಸಿಕೊಂಡಿದ್ದಾರೆ. ಇವರೊಂದಿಗೆ ಕ್ರಿಸ್ಗೆàಲ್, ಕ್ರಿಸ್ ಲಿನ್, ಶಾಹಿದ್ ಅಫ್ರಿದಿ, ಡ್ವೇನ್ ಬ್ರಾವೋ, ಲಸಿತ್ ಮಾಲಿಂಗ, ಡ್ಯಾರೆನ್ ಸ್ಯಾಮಿ, ಡೇವಿಡ್ ಮಿಲ್ಲರ್, ಸುನೀಲ್ ನಾರಾಯಣ್, ಆಂಡ್ರೆ ರಸೆಲ್ ಕೂಡ ಆಡಲಿದ್ದಾರೆ. ಕೂಟಕ್ಕಾಗಿ ಆಟಗಾರರ ಹರಾಜು ಮೇ 30ಕ್ಕೆ ನಡೆಯಲಿದೆ. ಸದ್ಯ ಸ್ಟೀವ್ ಸ್ಮಿತ್ ಟೆಸ್ಟ್ ಕ್ರಿಕೆಟ್ನ ವಿಶ್ವ ನಂ.1 ಆಟಗಾರ. ಚೆಂಡು ವಿರೂಪ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ನಿಂದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ 1 ವರ್ಷ ನಿಷೇಧಿಸಿದೆ. ಆದರೆ ಅವರು ವಿದೇಶಗಳ ದೇಶೀಯ ಲೀಗ್ಗಳಲ್ಲಿ ಆಡುವುದಕ್ಕೆ ಅನುಮತಿ ಇರುವುದರಿಂದ ಅವರಿಗೆ ಲೀಗ್ಗಳಲ್ಲಿ ಆಡುವುದು ಸುಲಭವಾಗಿದೆ.