618 ವಿಕೆಟ್ ಕಿತ್ತರೆ ಅದೇ ನನ್ನ ಕೊನೆಯ ಟೆಸ್ಟ್ : ಅಶ್ವಿನ್
Team Udayavani, Oct 22, 2017, 7:05 AM IST
ನವದೆಹಲಿ: ನಾನು ಅನಿಲ್ ಕುಂಬ್ಳೆ ಅವರ ದೊಡ್ಡ ಅಬಿಮಾನಿ, ಟೆಸ್ಟ್ನಲ್ಲಿ 618 ವಿಕೆಟ್ ಪಡೆದುಕೊಂಡರೆ ಅದೇ ನನ್ನ ಕೊನೆಯ ಟೆಸ್ಟ್ ಎಂದು ಭಾರತ ತಂಡದ ಸ್ಪಿನ್ನರ್ ಆರ್.ಅಶ್ವಿನ್ ತಿಳಿಸಿದ್ದಾರೆ.
ಕುಂಬ್ಳೆ ಟೆಸ್ಟ್ನಲ್ಲಿ ಪಡೆದಿರುವುದು 619 ವಿಕೆಟ್. ಹೀಗಾಗಿ ಅವರ ಮೇಲಿನ ಅಭಿಮಾನದಿಂದ ತಾನು ಒಂದು ವಿಕೆಟ್ ಮುಂಚಿತವಾಗಿ ನಿವೃತ್ತಿ ಪಡೆಯುತ್ತೇನೆ ಎನ್ನುವ ಅರ್ಥದಲ್ಲಿ ಅಶ್ವಿನ್ ಮಾತನಾಡಿದ್ದಾರೆ.
ಪ್ರಸಕ್ತ ನ್ಯೂಜಿಲೆಂಡ್ ಸರಣಿಗೆ ವಿಶ್ರಾಂತಿ ನೀಡಿರುವ ಬಗ್ಗೆ ಪ್ರಶ್ನಿಸಿದಾಗ ಅದರ ಬಗ್ಗೆ ನಾನು ಉತ್ತರಿಸುವುದಿಲ್ಲ. ಒಬ್ಬ ಆಟಗಾರನಾಗಿ ನನ್ನ ಆಟದ ಮೇಲೆ ಮಾತ್ರ ಗಮನ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಕಳೆದ ಜೂನ್ನಲ್ಲಿ ಕೊಹ್ಲಿ ಜತೆಗಿನ ಬಿರುಕಿನ ಹಿನ್ನೆಲೆಯಲ್ಲಿ ಕುಂಬ್ಳೆ ಕೋಚ್ ಸ್ಥಾನದಲ್ಲಿ ಮುಂದುವರಿಯಲು ಹಿಂದೇಟು ಹಾಕಿದ್ದರು. ಕುಂಬ್ಳೆ ರಾಜೀನಾಮೆಯ ನಂತರ ಅಶ್ವಿನ್ಗೆ ರಾಷ್ಟ್ರೀಯ ತಂಡದಲ್ಲಿ ಸರಿಯಾಗಿ ಸ್ಥಾನ ಸಿಗುತ್ತಿಲ್ಲ. ಹೀಗಾಗಿ ಅಶ್ವಿನ್ ಹೇಳಿಕೆ ಗಮನ ಸೆಳೆದಿದೆ. ಅಶ್ವಿನ್ 52 ಟೆಸ್ಟ್ನಿಂದ 295 ವಿಕೆಟ್ ಪಡೆದಿದ್ದಾರೆ.