ರಫೆಲ್ ನಡಾಲ್ ಎಂಟನೇ ಸಲ ನಂ.1
Team Udayavani, Nov 5, 2019, 12:04 AM IST
ಪ್ಯಾರಿಸ್: ಸ್ಪೇನಿನ ಟೆನಿಸ್ ದೈತ್ಯ ರಫೆಲ್ ನಡಾಲ್ ಸರಿಯಾಗಿ ಒಂದು ವರ್ಷದ ಬಳಿಕ ವಿಶ್ವದ ನಂಬರ್ ವನ್ ಸ್ಥಾನಕ್ಕೆ ಮರಳಿದ್ದಾರೆ. ರವಿವಾರವಷ್ಟೇ 5ನೇ ಸಲ ಪ್ಯಾರಿಸ್ ಮಾಸ್ಟರ್ ಟೆನಿಸ್ ಪ್ರಶಸ್ತಿ ಜಯಿಸಿದರೂ ನೊವಾಕ್ ಜೊಕೋವಿಕ್ 2ನೇ ಸ್ಥಾನಕ್ಕೆ ಇಳಿದಿದ್ದಾರೆ.
ನಡಾಲ್ ವಿಶ್ವದ ನಂ.1 ಟೆನಿಸ್ ಗೌರವಕ್ಕೆ ಪಾತ್ರರಾಗುತ್ತಿರುವುದು ಇದು 8ನೇ ಸಲ. ಕಳೆದ ವರ್ಷ ಇದೇ ದಿನ (ನ. 4) ಅವರು ಅಗ್ರಸ್ಥಾನದಿಂದ ಕೆಳಗಿಳಿದಿದ್ದರು. ನಡಾಲ್ 9,585 ಮತ್ತು ಜೊಕೋವಿಕ್ 8,945 ಅಂಕ ಹೊಂದಿದ್ದಾರೆ.
ಟಾಪ್-10 ಯಾದಿಯಲ್ಲಿ ಸಂಭವಿಸಿದ ಮಹತ್ತರ ಪ್ರಗತಿಯೆಂದರೆ, ಫ್ರಾನ್ಸ್ನ ಗೇಲ್ ಮಾನ್ಫಿಲ್ಸ್ 3 ಸ್ಥಾನ ಮೇಲೇರಿ 10ನೇ ಸ್ಥಾನ ತಲುಪಿದ್ದು. ಸ್ಟೆಫನಸ್ ಸಿಸಿಪಸ್ (6), ಮ್ಯಾಟಿಯೊ ಬರೆಟಿನಿ (8), ರಾಬರ್ಟೊ ಬಟಿಸ್ಟ (9) ಒಂದೊಂದು ಸ್ಥಾನ ಮೇಲೇರಿದ್ದಾರೆ. ಅಲೆಕ್ಸಾಂಡರ್ ಜ್ವೆರೇವ್ (7) ಒಂದು ಸ್ಥಾನ ಕೆಳಕ್ಕಿಳಿದಿದ್ದಾರೆ. ರೋಜರ್ ಫೆಡರರ್ (3), ಡ್ಯಾನಿಲ್ ಮೆಡ್ವಡೇವ್ (4), ಡೊಮಿನಿಕ್ ಥೀಮ್ (5) ಯಥಾಸ್ಥಾನದಲ್ಲಿ ಮುಂದುವರಿದಿದ್ದಾರೆ.