ರಣಜಿ: ಫಾಲೋಆನ್‌ ಬಲೆಗೆ ಬಿದ್ದ ಕರ್ನಾಟಕ

171 ಆಲೌಟ್‌, 410 ರನ್‌ ಹಿನ್ನಡೆ, ಶ್ರೇಯಸ್‌ ಪಡೆಗೆ ಸೋಲಿನ ಭೀತಿ

Team Udayavani, Jan 13, 2020, 11:23 PM IST

ರಾಜ್‌ಕೋಟ್‌: ಸೌರಾಷ್ಟ್ರ ವಿರುದ್ಧ ಬೌಲಿಂಗ್‌ನಲ್ಲಿ ಪರದಾಡಿದ ಬಳಿಕ ಬ್ಯಾಟಿಂಗ್‌ನಲ್ಲೂ ಮುಗ್ಗರಿಸಿದ ಕರ್ನಾಟಕ ಫಾಲೋಆನ್‌ ಬಲೆಗೆ ಬಿದ್ದಿದೆ. ರಣಜಿ ಪಂದ್ಯದ ಅಂತಿಮ ದಿನವಾದ ಮಂಗಳವಾರ ಕೆಲವು ವಿಕೆಟ್‌ಗಳನ್ನು ಕಾಯ್ದುಕೊಂಡರಷ್ಟೇ ರಾಜ್ಯ ತಂಡ ಸೋಲಿನ ಅವಮಾನದಿಂದ ಪಾರಾಗಲಿದೆ.

ಸೌರಾಷ್ಟ್ರದ 581 ರನ್ನುಗಳ ಬೃಹತ್‌ ಮೊತ್ತಕ್ಕೆ ಉತ್ತರವಾಗಿ ಒಂದು ವಿಕೆಟಿಗೆ 13 ರನ್‌ ಮಾಡಿದ್ದ ಕರ್ನಾಟಕ, 3ನೇ ದಿನದ ಆಟ ಮುಂದುವರಿಸಿ 171ಕ್ಕೆ ಸರ್ವಪತನ ಕಂಡಿತು. 410 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಕಾರಣ ಸೌರಾಷ್ಟ್ರ ನಾಯಕ ಜೈದೇವ್‌ ಉನಾದ್ಕತ್‌ ಫಾಲೋಆನ್‌ ಹೇರಲು ಹಿಂಜರಿಯಲಿಲ್ಲ. ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ಕರ್ನಾಟಕ, ವಿಕೆಟ್‌ ನಷ್ಟವಿಲ್ಲದೆ 30 ರನ್‌ ಮಾಡಿದೆ. ರೋಹನ್‌ ಕದಮ್‌ (16) ಹಾಗೂ ಆರ್‌. ಸಮರ್ಥ್ (14) ಅಂತಿಮ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಉನಾದ್ಕತ್‌ ಘಾತಕ ಬೌಲಿಂಗ್‌
ಒಂದು ಕಡೆ ವೇಗಿ ಜೈದೇವ್‌ ಉನಾದ್ಕತ್‌ ಅವರ ಬಿರುಗಾಳಿಯಂಥ ಬೌಲಿಂಗ್‌ (49ಕ್ಕೆ 5), ಮತ್ತೂಂದು ಕಡೆ ಕಮಲೇಶ್‌ ಮಕ್ವಾನ (27ಕ್ಕೆ 3) ಅವರ ಮಿಂಚಿನ ದಾಳಿ… ಇವರಿಬ್ಬರನ್ನು ಎದುರಿಸಿ ನಿಲ್ಲಲು ರಾಜ್ಯದ ಬ್ಯಾಟ್ಸ್‌ಮನ್‌ಗಳು ಸಂಪೂರ್ಣ ವಿಫ‌ಲರಾದರು. 93 ರನ್‌ ಆಗುವಷ್ಟರಲ್ಲಿ 6 ಮಂದಿ ಪೆವಿಲಿಯನ್‌ ಸೇರಿ ಆಗಿತ್ತು. ಆಗಲೇ ಕರ್ನಾಟಕಕ್ಕೆ ಕಂಟಕ ಖಾತ್ರಿಯಾಗಿತ್ತು.

ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್ತ ಪಡಿಕ್ಕಲ್‌ ದ್ವಿತೀಯ ದಿನದ ಕೊನೆಯಲ್ಲಿ ಖಾತೆ ತೆರೆಯದೆ ಪೆವಿಲಿಯನ್‌ ಸೇರಿದ್ದರು. ಈ ವಿಕೆಟ್‌ ಉನಾದ್ಕತ್‌ ಪಾಲಾಗಿತ್ತು. ರೋಹನ್‌ ಕದಮ್‌ (29), ಕೆ.ವಿ. ಸಿದ್ಧಾರ್ಥ್ (0) ಕೂಡ ಉನಾದ್ಕತ್‌ಗೆ ವಿಕೆಟ್‌ ಒಪ್ಪಿಸಿ ಹೊರನಡೆದರು. ಪವನ್‌ ದೇಶಪಾಂಡೆ (8 ),ಶ್ರೇಯಸ್‌ ಗೋಪಾಲ್‌ (11), ಬಿ.ಆರ್‌. ಶರತ್‌ (2) ಕೂಡ ನೆರವಿಗೆ ನಿಲ್ಲಲಿಲ್ಲ.

ಒಂದೆಡೆ ಕರ್ನಾಟಕದ ವಿಕೆಟ್‌ಗಳು ತರಗೆಲೆಯಂತೆ ಉರುಳುತ್ತಿದ್ದರೆ ಆರ್‌. ಸಮರ್ಥ್ (63) ಮತ್ತು ಪ್ರವೀಣ್‌ ದುಬೆ (ಅಜೇಯ 46) ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸಿದರು. ಆರಂಭಿಕನಾಗಿ ಬಂದಿದ್ದ ಸಮರ್ಥ್ 174 ಎಸೆತ ಎದುರಿಸಿ 8 ಬೌಂಡರಿ ನೆರವಿನಿಂದ ಅರ್ಧ ಶತಕ ಬಾರಿಸಿದರು. ಸ್ಕೋರ್‌ 132 ರನ್‌ ಆಗಿದ್ದಾಗ 7ನೇ ವಿಕೆಟ್‌ ರೂಪದಲ್ಲಿ ಸಮರ್ಥ್ ಔಟಾದರು. ದುಬೆ 106 ಎಸೆತ ಎದುರಿಸಿ 5 ಬೌಂಡರಿ, 1 ಸಿಕ್ಸರ್‌ ಹೊಡೆದರು.

ಸಂಕ್ಷಿಪ್ತ ಸ್ಕೋರ್‌
ಸೌರಾಷ್ಟ್ರ-7 ವಿಕೆಟಿಗೆ 581 ಡಿಕ್ಲೇರ್‌. ಕರ್ನಾಟಕ-171 (ಸಮರ್ಥ್ 63, ದುಬೆ ಅಜೇಯ 46, ಕದಮ್‌ 29, ಉನಾದ್ಕತ್‌ 49ಕ್ಕೆ 5, ಮಕ್ವಾನ 27ಕ್ಕೆ 3) ಮತ್ತು ವಿಕೆಟ್‌ ನಷ್ಟವಿಲ್ಲದೆ 30 (ಸಮರ್ಥ್ ಬ್ಯಾಟಿಂಗ್‌ 14, ಕದಮ್‌ ಬ್ಯಾಟಿಂಗ್‌ 16).

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ