ಆರ್‌ಸಿಬಿಯಿಂದ ಲಯನ್ಸ್‌  ಬೇಟೆ ಸಾಧ್ಯವೇ ?

Team Udayavani, Apr 18, 2017, 10:30 AM IST

ರಾಜ್‌ಕೋಟ್‌: ಹತ್ತನೇ ಐಪಿಎಲ್‌ನ ತಳದಲ್ಲಿರುವ ರಾಯಲ್‌ ಚಾಲೆಂಜರ್ ಬೆಂಗಳೂರು ಮತ್ತು ಗುಜರಾತ್‌ ಲಯನ್ಸ್‌ ತಂಡಗಳು ಮಂಗಳವಾರದ ಮಹತ್ವದ ಪಂದ್ಯವೊಂದರಲ್ಲಿ ಪರಸ್ಪರ ಎದುರಾಗಲಿವೆ. ಇತ್ತಂಡಗಳಿಗೂ ಅಳಿವು ಉಳಿವಿನ ಪ್ರಶ್ನೆ ತೀವ್ರಗೊಂಡಿದ್ದು, ಮರಳಿ ಹಳಿ ಏರಲು ಅಸಾಮಾನ್ಯ ಪ್ರದರ್ಶನವನ್ನೇ ನೀಡಬೇಕಾದ ಒತ್ತಡದಲ್ಲಿವೆ. ಆದರೆ ಇದು ರಾಜ್‌ಕೋಟ್‌ನಲ್ಲಿ ನಡೆಯುವ ಪಂದ್ಯವಾದ್ದರಿಂದ ಗುಜರಾತ್‌ಗೆ ಹೆಚ್ಚಿನ ಲಾಭವಾದೀತೆಂಬುದೊಂದು ನಿರೀಕ್ಷೆ.

ಕಳೆದ ವರ್ಷದ ರನ್ನರ್ ಅಪ್‌ ತಂಡ ವಾಗಿರುವ ಆರ್‌ಸಿಬಿ 5 ಪಂದ್ಯಗಳಿಂದ 4 ಸೋಲನುಭವಿಸಿ ಚಿಂತಾಜನಕ ಸ್ಥಿತಿಯಲ್ಲಿದೆ. ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲೂ ಕೊಹ್ಲಿ ಪಡೆಗೆ ಸೋಲಿನ ಉರುಳು ಬಿಗಿಯಲ್ಪಟ್ಟಿರುವುದು ನಿಜಕ್ಕೂ ದುರಂತ. ಇನ್ನೊಂದೆಡೆ ಸುರೇಶ್‌ ರೈನಾ ನೇತೃತ್ವದ ಗುಜರಾತ್‌ ಲಯನ್ಸ್‌ನ ಘರ್ಜನೆ ಕೂಡ ಕ್ಷೀಣಗೊಂಡಿದೆ. ಅದು ನಾಲ್ಕರಲ್ಲಿ ಒಂದು ಪಂದ್ಯವನ್ನಷ್ಟೇ ಗೆದ್ದಿದೆ. 

ಈ ಎರಡೂ ತಂಡಗಳು ರವಿವಾರದ ಪಂದ್ಯಗಳಲ್ಲಿ ಮುಗ್ಗರಿಸಿದ್ದನ್ನು ಮರೆಯು ವಂತಿಲ್ಲ. ಬೆಂಗಳೂರಿನಲ್ಲಿ ಆರ್‌ಸಿಬಿಯನ್ನು ಪುಣೆ 27 ರನ್ನುಗಳಿಂದ ಉರುಳಿಸಿದರೆ, ಇದಕ್ಕೂ ಮುನ್ನ ವಾಂಖೇಡೆಯಲ್ಲಿ ಮುಂಬೈ 6 ವಿಕೆಟ್‌ಗಳಿಂದ ಗುಜರಾತ್‌ಗೆ ಗುದ್ದು ನೀಡಿತ್ತು. ಹೀಗಾಗಿ ಇತ್ತಂಡಗಳಿಗೂ ಗೆಲುವಿನ ಟಾನಿಕ್‌ ತುರ್ತಾಗಿ ಬೇಕಿದೆ.

ಆರ್‌ಸಿಬಿ ಬ್ಯಾಟಿಂಗ್‌ ವೈಫ‌ಲ್ಯ
ಬೆಂಗಳೂರು ತಂಡದ ಶಕ್ತಿಯೆಂದರೆ ಸ್ಫೋಟಕ ಬ್ಯಾಟಿಂಗ್‌. ಗೇಲ್‌, ಕೊಹ್ಲಿ, ಎಬಿಡಿ, ಜಾಧವ್‌, ವಾಟ್ಸನ್‌ ಅವರೆಲ್ಲ ಸಿಡಿದರೆ ಎಂಥ ಎದುರಾಳಿಯೂ  ಬೆಚ್ಚಿಬೀಳಬೇಕು. ಆದರೆ ಈ ಬಾರಿ ಇವರೆಲ್ಲರ ಬ್ಯಾಟ್‌ ಮುಷ್ಕರ ಹೂಡಿದೆ. ಸಣ್ಣ ಮೊತ್ತವನ್ನೂ ಬೆನ್ನಟ್ಟಿಕೊಂಡು ಹೋಗುವ ಸಾಮರ್ಥ್ಯ ಆರ್‌ಸಿಬಿಗೆ ಇಲ್ಲವಾಗಿದೆ. ಇದಕ್ಕೆ ಪುಣೆ ಎದುರಿನ ರವಿವಾರ ರಾತ್ರಿಯ ಪಂದ್ಯವೇ ಸಾಕ್ಷಿ.

ಆರ್‌ಸಿಬಿಯ ಇನ್ನೊಂದು ಹಿನ್ನಡೆಯತ್ತ ಇಲ್ಲಿ ಗಮನಹರಿಸಲೇಬೇಕು. ಅದೆಂದರೆ, ಪಂದ್ಯದಿಂದ ಪಂದ್ಯಕ್ಕೆ ತಂಡದ ಸ್ಕೋರ್‌ ಕಡಿಮೆ ಆಗುತ್ತಲೇ ಬಂದಿರುವುದು! ಹೈದರಾ ಬಾದ್‌ ವಿರುದ್ಧ 172 ಆಲೌಟ್‌, ಡೆಲ್ಲಿ ವಿರುದ್ಧ 8ಕ್ಕೆ 157, ಪಂಜಾಬ್‌ ವಿರುದ್ಧ 4ಕ್ಕೆ 148, ಮುಂಬೈ ವಿರುದ್ಧ 5ಕ್ಕೆ 142, ಪುಣೆ ವಿರುದ್ಧ 9ಕ್ಕೆ 134 ರನ್‌! ಬಲಾಡ್ಯ ಬ್ಯಾಟಿಂಗ್‌ ಸರದಿಯನ್ನು ಹೊಂದಿರುವ ತಂಡದ ಇಂಥ ಬ್ಯಾಟಿಂಗ್‌ ಕುಸಿತವನ್ನು ಸಹಿಸಿಕೊಳ್ಳುವುದಾದರೂ ಹೇಗೆ?!

ವಿರಾಟ್‌ ಕೊಹ್ಲಿ ಆಗಮನದಿಂದ ಆರ್‌ಸಿಬಿಯ ಸಾಮರ್ಥ್ಯ ಹೆಚ್ಚಲಿದೆ, ತಂಡದ ಮನೋಸ್ಥೈರ ಹೆಚ್ಚಲಿದೆ, ಎದುರಾಳಿಗಳು ಬೆಚ್ಚಿಬೀಳಲಿದ್ದಾರೆ ಎಂದೆಲ್ಲ ಭಾವಿಸಲಾಗಿತ್ತು. ಇದು ಸಹಜವೂ ಆಗಿತ್ತು. ಆದರೆ ಕಳೆದೆರಡು ಪಂದ್ಯಗಳಲ್ಲಿ ಯಾವ ಪವಾಡವೂ ಸಂಭವಿಸಿಲ್ಲ. ಆರ್‌ಸಿಬಿಗೆ ಬೆಂಗಳೂರಿನಲ್ಲೇ ಮುಂಬೈ ಮತ್ತು ಪುಣೆ ಬಿಸಿ ಮುಟ್ಟಿಸಿವೆ.

ಬೆಂಗಳೂರು ತಂಡ ಈವರೆಗೆ 2 ಪಂದ್ಯಗಳನ್ನು ತವರಿನಾಚೆಯ ಅಂಗಳದಲ್ಲಿ ಆಡಿದ್ದು, ಎರಡರಲ್ಲೂ ಲಾಗ ಹಾಕಿದೆ. ಈ ಸೋಲು ಎದುರಾದದ್ದು ಹೈದರಾಬಾದ್‌ ಮತ್ತು ಇಂದೋರ್‌ನಲ್ಲಿ. ಇನ್ನು ರಾಜ್‌ಕೋಟ್‌ನಲ್ಲಿ ಏನು ಕಾದಿದೆಯೋ ಎಂಬ ಆತಂಕ ಸಹಜವಾದದ್ದೇ.

ಎಂದಿನಂತೆ ಬೌಲಿಂಗ್‌ ಬಡತನದಲ್ಲಿರುವ ರಾಯಲ್‌ ಚಾಲೆಂಜರ್ ಬ್ಯಾಟಿಂಗ್‌ ಮೂಲಕವೇ ತನ್ನ ತಾಕತ್ತನ್ನು ಪರಿಚಯಿಸ ಬೇಕಾದುದು ಅನಿವಾರ್ಯ ಎಂಬ ಸ್ಥಿತಿ ಈ ವರ್ಷವೂ ಮುಂದುವರಿದಿತ್ತು. ಆದರೆ ಈ 10ನೇ ಐಪಿಎಲ್‌ನಲ್ಲಿ ಬ್ಯಾಟಿಂಗ್‌ ಬರಗಾಲ ಎನ್ನುವುದು ಈ ಕರ್ನಾಟಕದ ತಂಡದ ಮೇಲೆ ಮುರಕೊಂಡು ಬಿದ್ದಿದೆ.

ಗುಜರಾತ್‌ ಕೂಡ ಥಂಡಾ!
ಗುಜರಾತ್‌ ಕೂಡ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ತಂಡ. ಮೆಕಲಮ್‌, ರಾಯ್‌, ಸ್ಮಿತ್‌, ಫಿಂಚ್‌, ರೈನಾ, ಕಾರ್ತಿಕ್‌ ಅವರಲ್ಲಿ ಇಬ್ಬರು ಕ್ರೀಸಿಗೆ ಕಚ್ಚಿಕೊಂಡು ಆಡಿ ದರೂ ಎದುರಾಳಿ ಬೌಲಿಂಗ್‌ ಪುಡಿ ಪುಡಿಗೊಳ್ಳುತ್ತದೆ. ಆದರೆ ಈವರೆಗೆ ಹಾಗಾಗಲಿಲ್ಲ ಎಂಬುದು ಗುಜರಾತ್‌ ತಂಡದ ಸಂಕಟವನ್ನು ಸಾರುತ್ತದೆ.

ಇತ್ತಂಡಗಳಲ್ಲೂ ಹ್ಯಾಟ್ರಿಕ್‌ ಹೀರೋಗಳಿದ್ದಾರೆ ಎಂಬುದನ್ನು ಬಿಟ್ಟರೆ ಆರ್‌ಸಿಬಿ-ಗುಜರಾತ್‌ ಬೌಲಿಂಗ್‌ನಲ್ಲಿ ಯಾವುದೇ ಮೊನಚಿಲ್ಲ. ಬೌಲಿಂಗ್‌ ಮೂಲಕವೇ ಮ್ಯಾಚ್‌ ಗೆಲ್ಲುವುದಾದರೆ ರವಿವಾರ ರಾತ್ರಿ ಮುಂಬೈ ವಿರುದ್ಧ ಇದಕ್ಕೆ ಒಳ್ಳೆಯ ಅವಕಾಶವಿತ್ತು. ಆದರೆ ಇದನ್ನೂ ಗುಜರಾತ್‌ ಕಳೆದುಕೊಂಡಿದೆ. ಮುಂದೇನೋ ಎಂಬ ಪ್ರಶ್ನೆಗೆ ಮಂಗಳವಾರ ರಾತ್ರಿ ಉತ್ತರ ಲಭಿಸಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ