ವಿಶ್ವಕಪ್‌: ಪಂತ್‌, ರಾಯುಡು ಮೀಸಲು ಆಟಗಾರರು

Team Udayavani, Apr 18, 2019, 5:41 AM IST

ಹೊಸದಿಲ್ಲಿ: ಯುವ ವಿಕೆಟ್‌ ಕೀಪರ್‌ ರಿಷಬ್‌ ಪಂತ್‌, ಬ್ಯಾಟ್ಸ್‌ಮನ್‌ ಅಂಬಾಟಿ ರಾಯುಡು ಅವರನ್ನು ಭಾರತದ ವಿಶ್ವಕಪ್‌ ತಂಡಕ್ಕೆ ಹೆಚ್ಚುವರಿ ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಯುವ ವೇಗಿ ನವದೀಪ್‌ ಸೈನಿ ಕೂಡ ಸ್ಥಾನ ಪಡೆದಿದ್ದಾರೆ.

ಈ ಬಾರಿಯ ವಿಶ್ವಕಪ್‌ಗಾಗಿ ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡವನ್ನು ಈಗಾಗಲೇ ಬಿಸಿಸಿಐ ಬಿಡುಗಡೆ ಮಾಡಿದ್ದು, ಪಂತ್‌ ಮತ್ತು ರಾಯುಡು ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫ‌ಲರಾಗಿದ್ದರು. ಇದು ಭಾರತೀಯ ಕ್ರಿಕೆಟ್‌ ಅಭಿಮಾನಿಗಳನ್ನು ಕಂಗೆಡಿಸಿತ್ತಲ್ಲದೆ, ದೊಡ್ಡ ಮಟ್ಟದಲ್ಲಿ ಸಾರ್ವಜನಿಕ ಚರ್ಚೆಗೂ ಒಳಗಾಗಿತ್ತು.

ಮಾಜಿಗಳ ಅಚ್ಚರಿ
ಪಂತ್‌ ಅವರನ್ನು ಆಯ್ಕೆ ಮಾಡ ದಿದ್ದುದಕ್ಕೆ ಮಾಜಿ ಕ್ರಿಕೆಟಿಗ ಸುನೀಲ್‌ ಗವಾಸ್ಕರ್‌ ಅಚ್ಚರಿ ವ್ಯಕ್ತಪಡಿಸಿದ್ದರು. ಇನ್ನೊಂದೆಡೆ ರಾಯುಡು ಅವರನ್ನು ಕೈಬಿಟ್ಟಿದ್ದಕ್ಕೆ ಗೌತಮ್‌ ಗಂಭೀರ್‌ ಬೇಸರ ವ್ಯಕ್ತಪಡಿಸಿದ್ದರು. ಆದರೀಗ ಬಿಸಿಸಿಐ ಹೆಚ್ಚುವರಿ ಆಟಗಾರರನ್ನು ಆಯ್ಕೆ ಮಾಡಿರು ವುದರಿಂದ ಕ್ರಿಕೆಟಿನ ಮಹಾಕೂಟದಲ್ಲಿ ಭಾಗಿಯಾಗುವ ಅವಕಾಶದಿಂದ ವಂಚಿತರಾಗಿದ್ದ ಈ ಇಬ್ಬರೂ ಆಟಗಾರರಲ್ಲಿ ಪುನಃ ಆಸೆ ಚಿಗುರಿದೆ.

ಅಗತ್ಯ ಬಿದ್ದರೆ ಇವರು ರೆಡಿ…
ಮೀಸಲು ಆಟಗಾರರ ಆಯ್ಕೆ ಬಗ್ಗೆ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, “ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಸಂದರ್ಭದಲ್ಲಿ ಮಾಡಿದಂತೆಯೇ ಈ ಬಾರಿಯೂ ಹೆಚ್ಚುವರಿ ಆಟಗಾರರನ್ನು ಹೊಂದಿರಲಿದ್ದೇವೆ. ಹಾಗಾಗಿ, ಒಬ್ಬ ವಿಕೆಟ್‌ ಕೀಪರ್‌ (ಪಂತ್‌), ಒಬ್ಬ ಬ್ಯಾಟ್ಸ್‌ಮನ್‌ (ರಾಯುಡು) ಮತ್ತು ಬೌಲರ್‌ನನ್ನು (ನವದೀಪ್‌) ಹೊಂದಿರುವ ಹೆಚ್ಚುವರಿ ಆಟಗಾರರ ತಂಡ ಸಿದ್ಧವಿರಲಿದೆ. ವಿಶ್ವಕಪ್‌ ಪಂದ್ಯಗಳಲ್ಲಿ ಭಾರತದ ಆಟಗಾರರ್ಯಾರಾದರೂ ಗಾಯಗೊಂಡರೆ ಅಥವಾ ತಂಡಕ್ಕೆ ಆವಶ್ಯಕವೆನಿಸಿದರೆ ಈ ಹೆಚ್ಚುವರಿ ಆಟಗಾರರನ್ನು ಕಳಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ.

“ಈಗಾಗಲೇ ನೆಟ್‌ ಬೌಲರ್‌ಗಳಾಗಿ ತಂಡದೊಂದಿಗೆ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿರುವ ಅಹ್ಮದ್‌, ಆವೇಶ್‌ ಖಾನ್‌ ಮತ್ತು ದೀಪಕ್‌ ಚಹರ್‌ ಅವರನ್ನು ಅಗತ್ಯ ಬಿದ್ದಲ್ಲಿ ಹೆಚ್ಚುವರಿ ಬೌಲರ್‌ಗಳೆಂದು ತಂಡದ ವ್ಯವಸ್ಥಾಪಕ ಮಂಡಳಿ ಪರಿಗಣಿಸಬಹುದು’ ಎಂದೂ ಆವರು ಹೇಳಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ