ಶಾರ್ದೂಲ್ ಠಾಕೂರ್ ನಂ. 10 ಜೆರ್ಸಿ ಧರಿಸಿದ್ದೇಕೆ ?
Team Udayavani, Sep 2, 2017, 11:14 AM IST
ಮುಂಬಯಿ: ಟೀಮ್ ಇಂಡಿಯಾದಲ್ಲಿ “ನಂಬರ್ 10′ ಜೆರ್ಸಿಗೆ ವಿಶೇಷ ಮಹತ್ವವಿದೆ. ಇದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಧರಿಸುತ್ತಿದ್ದ ಜೆರ್ಸಿ. ತೆಂಡುಲ್ಕರ್ ನಿವೃತ್ತಿಯ ಬಳಿಕ ಅವರ ನಂಬರ್ 10 ಅಂಗಿಗೂ ಭಾವನಾತ್ಮಕ ವಿದಾಯ ಹೇಳಲಾಗಿದೆ. ಮುಂಬೈ ಇಂಡಿಯನ್ಸ್ ಇಂಥದೊಂದು ಹೆಜ್ಜೆ ಇರಿಸಿತ್ತು.
ಆದರೆ ಶ್ರೀಲಂಕಾ ವಿರುದ್ಧದ ಗುರುವಾರದ ಏಕದಿನ ಪಂದ್ಯದಲ್ಲಿ ಮೊದಲ ಸಲ ಭಾರತ ತಂಡವನ್ನು ಪ್ರತಿನಿಧಿಸಿದ ಶಾರ್ದೂಲ್ ಠಾಕೂರ್ ನಂ.10 ಜೆರ್ಸಿ ಧರಿಸಿದ್ದನ್ನು ಕಂಡ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಠಾಕೂರ್ ಅವರ ಈ ಕ್ರಮವನ್ನು ತೀವ್ರವಾಗಿ ಟೀಕಿಸಲಾಗಿದೆ.
ಇದಕ್ಕೀಗ ಶಾರ್ದೂಲ್ ಠಾಕೂರ್ ಸ್ಪಷ್ಟನೆ ನೀಡಿದ್ದಾರೆ. ತನ್ನ ಜನ್ಮ ದಿನಾಂಕದ ಸಂಖ್ಯೆಗಳ ಒಟ್ಟು ಮೊತ್ತ 10 ಆಗುವುದರಿಂದ ತಾನು ಈ ನಂಬರ್ ಆಯ್ದುಕೊಂಡೆ ಎಂದಿದ್ದಾರೆ (16-10-1991). ಇದು ಸಚಿನ್ ಅಭಿಮಾನಿಗಳಿಗೆ ಎಷ್ಟರ ಮಟ್ಟಿಗೆ ಸಮಾಧಾನ ತರುತ್ತದೋ ಗೊತ್ತಿಲ್ಲ.
ಇದೇ ವೇಳೆ ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ತಮ್ಮದೇ ಆದ ಕಾರಣವನ್ನು ಗುರುತಿಸಿದ್ದಾರೆ. ಸಚಿನ್ ತೆಂಡುಲ್ಕರ್ ಮತ್ತು ಶಾರ್ದೂಲ್ ಠಾಕೂರ್ ಹೆಸರಿನ ಕಿರು ರೂಪ “ಎಸ್.ಟಿ.’ ಆಗಿದೆ. ಇಬ್ಬರೂ ಮುಂಬಯಿಯವರು. ಹೀಗಾಗಿ ಶಾರ್ದೂಲ್ ಈ ಸಂಖ್ಯೆಯನ್ನು ಆಯ್ದುಕೊಂಡಿರಬಹುದು ಎಂದಿದ್ದಾರೆ!