ಸಿಂಧು, ಪ್ರಣಯ್‌ ಮುನ್ನಡೆ; ಸೈನಾ, ಸಮೀರ್‌ಗೆ ಆಘಾತ

Team Udayavani, Nov 13, 2019, 11:38 PM IST

ಹಾಂಕಾಂಗ್‌: ವಿಶ್ವ ಚಾಂಪಿಯನ್‌ ಪಿ.ವಿ. ಸಿಂಧು “ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಯ ದ್ವಿತೀಯ ಸುತ್ತು ತಲುಪಿದ್ದಾರೆ. ಆದರೆ ಭಾರತದ ಮತ್ತೋರ್ವ ಸ್ಟಾರ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಅವರ ಮೊದಲ ಸುತ್ತಿನ ಕಂಟಕ ಮುಂದುವರಿದಿದೆ. ಪುರುಷರ ಸಿಂಗಲ್ಸ್‌ನಲ್ಲಿ ಸಮೀರ್‌ ವರ್ಮ ಕೂಡ ಇದೇ ಆಘಾತಕ್ಕೆ ಸಿಲುಕಿದ್ದಾರೆ. ಆದರೆ ಎಚ್‌.ಎಸ್‌. ಪ್ರಣಯ್‌ ಮುನ್ನಡೆದಿದ್ದಾರೆ.

400,000 ಡಾಲರ್‌ ಬಹುಮಾನದ ಈ ಕೂಟದಲ್ಲಿ ಪಿ.ವಿ. ಸಿಂಧು ಕೊರಿಯಾದ ಕಿಮ್‌ ಗಾ ಯುನ್‌ ಅವರನ್ನು 36 ನಿಮಿಷಗಳ ಹೋರಾಟದ ಬಳಿಕ 21-15, 21-16 ನೇರ ಗೇಮ್‌ಗಳಿಂದ ಹಿಮ್ಮೆಟ್ಟಿಸಿದರು. ದ್ವಿತೀಯ ಸುತ್ತಿನಲ್ಲಿ ಸಿಂಧು ಎದುರಾಳಿ ಥಾಯ್ಲೆಂಡ್‌ನ‌ ಬುಸಾನನ್‌ ಒಂಗ್ಬಾಮ್ರುಂಗಫಾನ್‌.

ಪುರುಷರ ಸಿಂಗಲ್ಸ್‌ನಲ್ಲಿ ಎಚ್‌.ಎಸ್‌. ಪ್ರಣಯ್‌ ಚೀನದ ಹುವಾಂಗ್‌ ಯು ಕ್ಸಿಯಾಂಗ್‌ ವಿರುದ್ಧ 21-17, 21-17 ಅಂತರದ ಮೇಲುಗೈ ಸಾಧಿಸಿದರು. ಇವರ ಮುಂದಿನ ಎದುರಾಳಿ ಇಂಡೋನೇಶ್ಯದ ಜೊನಾಥನ್‌ ಕ್ರಿಸ್ಟಿ.

ಮೊದಲ ಸುತ್ತಿನ 5ನೇ ಸೋಲು
8ನೇ ಶ್ರೇಯಾಂಕದ ಸೈನಾ ನೆಹ್ವಾಲ್‌ ಚೀನದ ಕೈ ಯಾನ್‌ ಯಾನ್‌ ವಿರುದ್ಧ ಸತತ 2ನೇ ಸೋಲುಂಡರು. ಕಳೆದ ವಾರವಷ್ಟೇ “ಚೀನ ಓಪನ್‌’ ಪಂದ್ಯಾವಳಿಯ ಪ್ರಥಮ ಸುತ್ತಿನಲ್ಲಿ ಸೈನಾಗೆ ಆಘಾತವಿಕ್ಕಿದ್ದ ಯಾನ್‌ ಯಾನ್‌, ಇಲ್ಲಿ 21-13, 22-20 ಅಂತರದ ಮೇಲುಗೈ ಸಾಧಿಸಿದರು. ಇದರೊಂದಿಗೆ ಸೈನಾ ನೆಹ್ವಾಲ್‌ ಕಳೆದ 6 ಬ್ಯಾಡ್ಮಿಂಟನ್‌ ಕೂಟಗಳಲ್ಲಿ 5 ಸಲ ಮೊದಲ ಸುತ್ತಿನಲ್ಲೇ ಎಡವಿದ ಸಂಕಟಕ್ಕೆ ಸಿಲುಕಿದಂತಾಯಿತು.

ಸಮೀರ್‌ 3 ಗೇಮ್‌ಗಳ ಹೋರಾಟ
ವಿಶ್ವದ 16ನೇ ರ್‍ಯಾಂಕಿಂಗ್‌ ಆಟಗಾರ ಸಮೀರ್‌ ವರ್ಮ 54 ನಿಮಿಷಗಳ ಹೋರಾಟದ ಬಳಿಕ ಚೈನೀಸ್‌ ತೈಪೆಯ ವಾಂಗ್‌ ಜು ವೀ ವಿರುದ್ಧ 11-21, 21-13, 8-21 ಅಂತರದ ಸೋಲನುಭವಿಸಿದರು. ಇದು ಸಮೀರ್‌ ಪಾಲಿಗೆ ಎದುರಾದ ಮೊದಲ ಸುತ್ತಿನ ಹ್ಯಾಟ್ರಿಕ್‌ ಸೋಲಾಗಿದೆ.

ಪರಾಜಿತ ಸೈನಾ ನೆಹ್ವಾಲ್‌ ಮತ್ತು ಸಮೀರ್‌ ವರ್ಮ ಇಬ್ಬರೂ ಮುಂದಿನ ವಾರ ನಡೆಯುವ “ಗ್ವಾಂಗ್‌ಜೂ ಕೊರಿಯಾ ಮಾಸ್ಟರ್ ಸೂಪರ್‌ 300′ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಆಡಲಿದ್ದಾರೆ. ವನಿತಾ ಡಬಲ್ಸ್‌ನಲ್ಲಿ ಅಶ್ವಿ‌ನಿ ಪೊನ್ನಪ್ಪ-ಎನ್‌. ಸಿಕ್ಕಿ ರೆಡ್ಡಿ ಕೂಡ ಆರಂಭಿಕ ಸುತ್ತಿನಲ್ಲೇ ಎಡವಿದ್ದಾರೆ. ಡೆನ್ಮಾರ್ಕ್‌ನ ಮೈಕೆನ್‌ ಫ್ರುರ್‌ಗಾರ್ಡ್‌-ಸಾರಾ ತೈಗೆಸೆನ್‌ 21-13, 21-12 ಅಂತರದಿಂದ ಭಾರತೀಯ ಜೋಡಿಯನ್ನು ಮಣಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ