ಕೆಪಿಎಲ್‌ ಬೆಟ್ಟಿಂಗ್‌ ದಂಧೆಯಲ್ಲಿ ಹನಿಟ್ರ್ಯಾಪ್‌

ಸಿಸಿಬಿ ತನಿಖೆಯಲ್ಲಿ ಬಹಿರಂಗವಾದ ದಂಧೆಯ ಮುಖವಾಡ

Team Udayavani, Nov 21, 2019, 5:45 AM IST

ಬೆಂಗಳೂರು: ಕರ್ನಾಟಕ ಪ್ರೀಮಿಯರ್‌ ಲೀಗ್‌(ಕೆಪಿಎಲ್‌)ಬೆಟ್ಟಿಂಗ್‌ ದಂಧೆ ಪ್ರಕರಣ ರೋಚಕ ತಿರುವು ಪಡೆದುಕೊಂಡಿದ್ದು, ಆಟಗಾರ ರನ್ನು ಹನಿಟ್ರ್ಯಾಪ್‌ ಮೂಲಕ ಫಿಕ್ಸಿಂಗ್‌ಗೆ ಕೆಡವ ಲಾಗಿತ್ತು ಎಂಬ ಸ್ಫೋಟಕ ವಿಚಾರ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬುಕ್ಕಿಗಳು ಹಾಗೂ ದಂಧೆ ಕೋರರು ಚಿಯರ್‌ಗರ್ಲ್ಸ್‌ ಹಾಗೂ ಕೆಲವು ಯುವತಿಯರನ್ನು ಹನಿ ಟ್ರ್ಯಾಪ್‌ಗೆ ಬಳಸಿಕೊಂಡು, ಅನಂತರ ಆಟಗಾರ ರನ್ನು ಮ್ಯಾಚ್‌ ಫಿಕ್ಸಿಂಗ್‌ಗೆ ಒಪ್ಪಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಬಹಿರಂಗಪಡಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಪ್ರಕರಣದಲ್ಲಿ ಭಾಗಿಯಾಗಿದ್ದ 7 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಆರೋಪಿಗಳ ವಿಚಾರಣೆಯಲ್ಲಿ ಕೆಲವೊಂದು ಸ್ಫೋಟಕ ವಿಚಾರ ಬಯಲಾಗಿದ್ದು, ಹನಿಟ್ರ್ಯಾಪ್‌ಗೆ ಒಳಗಾದ ಆಟಗಾರ ರನ್ನು ದಂಧೆಗೆ ಬಲವಂತವಾಗಿ ಒಪ್ಪಿ ಸುತ್ತಿದ್ದರು ಎಂಬುದು ಗೊತ್ತಾಗಿದೆ. ಕೆಎಸ್‌ಸಿಎ ಮತ್ತು ಬಿಸಿಸಿಐಯಲ್ಲಿ ಆಟಗಾರರ ಮೇಲೆ ಕಣ್ಣಿಡಲು ವಿಶೇಷ ಪಡೆ ಇರುತ್ತದೆ. ಆದರೂ ಇಷ್ಟು ದೊಡ್ಡ ಮಟ್ಟದಲ್ಲಿ ದಂಧೆ ಹೇಗೆ ನಡೆದಿದೆ ಎಂಬುದೇ ಆಶ್ಚರ್ಯ. ಹೀಗಾಗಿ ಪ್ರಕರಣದ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಲಾಗಿದೆ ಎಂದರು.

ಮ್ಯಾಚ್‌ ಫಿಕ್ಸಿಂಗ್‌ ಜಾಲದಲ್ಲಿ ಸಿಲುಕಿರುವ ಆಟಗಾರರಿಗೆ ಪಂದ್ಯ ಗೆದ್ದಾಗ ಸಿಗುವುದಕ್ಕಿಂತ ಹೆಚ್ಚಿನ ಹಣ ಬೆಟ್ಟಿಂಗ್‌ ದಂಧೆಕೋರರಿಂದ ಸಿಗುತ್ತದೆ. ವಿದೇಶ ಪ್ರವಾಸ ಮತ್ತು ಪಂಚತಾರಾ ಹೊಟೇಲ್‌ಗ‌ಳಿಗೆ ಆಟಗಾರರನ್ನು ಕಳುಹಿಸಿ ಹನಿಟ್ರ್ಯಾಪ್‌ ಮೂಲಕ ಅವರನ್ನು ನಿಯಂತ್ರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದರು.

ಎಸ್‌ಐಟಿ ರಚನೆ
ಸದ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿಯಲ್ಲೇ ಪ್ರತ್ಯೇಕ ಎಸ್‌ಐಟಿ ರಚನೆ ಮಾಡ ಲಾಗಿದೆ. ಎಸ್‌ಐಟಿ ಮಾದರಿಯಲ್ಲೇ ತನಿಖೆ ನಡೆಸಿ ಆರೋಪಿಗಳು ಪ್ರತಿನಿಧಿಸಿದ್ದ ತಂಡಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವಂತೆ ಸೂಚಿಸಿದ್ದೇನೆ. ಯಾವುದೇ ಹೊರಗಿನ ಪ್ರಭಾವಗಳಿಗೆ ಒಳಗಾಗದೆ ತನಿಖೆ ಮುಂದು ವರಿಯಲಿದೆ ಎಂದು ತಿಳಿಸಿದರು.

ಹಿರಿಯ ಆಟಗಾರರಿಂದ ಬೆಂಬಲ
ಹಲವು ಹಿರಿಯ ಆಟಗಾರರು ಬೆಂಗಳೂರು ಪೊಲೀಸರು ನಡೆಸುತ್ತಿರುವ ತನಿಖೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್‌ ಸ್ವತ್ಛಗೊಳಿಸುವ ಕಾರ್ಯವನ್ನು ಆರಂಭಿಸಿದ್ದೀರಿ. ಯಾವುದೇ ಕಾರಣಕ್ಕೂ ತನಿಖೆಯನ್ನು ಅರ್ಧಕ್ಕೆ ನಿಲ್ಲಿಸಬೇಡಿ ಎಂಬ ಸಲಹೆ ನೀಡಿದ್ದಾರೆ. ಎಲ್ಲ ಕೆಪಿಎಲ್‌ ತಂಡಗಳಿಂದ ಸಮಗ್ರ ಮಾಹಿತಿ ಸಂಗ್ರಹಿಸಲು ಸಂದೀಪ್‌ ಪಾಟೀಲ್‌ ನೇತೃತ್ವದ ತಂಡಕ್ಕೆ ಸೂಚನೆ ನೀಡಿದ್ದೇನೆ. ಅದರಂತೆ ಎಲ್ಲ ತಂಡಗಳಿಗೆ ನೋಟಿಸ್‌ ನೀಡಲಾಗಿದೆ ಎಂದು ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ