ಲಾರ್ಡ್ಸ್ ಟೆಸ್ಟ್: ದಕ್ಷಿಣ ಆಫ್ರಿಕಾದ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್
ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಜಯಭೇರಿ
Team Udayavani, Aug 19, 2022, 11:05 PM IST
ಲಂಡನ್: ದಕ್ಷಿಣ ಆಫ್ರಿಕಾದ ಘಾತಕ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ದೊಡ್ಡ ಸೋಲನುಭವಿಸಿ ಭಾರೀ ಮುಖಭಂಗ ಅನುಭವಿಸಿದೆ. ಅಂತರ ಇನ್ನಿಂಗ್ಸ್ ಮತ್ತು 12 ರನ್. ಪಂದ್ಯ ಮೂರೇ ದಿನಗಳಲ್ಲಿ ಸಮಾಪ್ತಿಯಾಯಿತು.
161 ರನ್ ಹಿನ್ನಡೆ ಬಳಿಕ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಶೋಚನೀಯ ಬ್ಯಾಟಿಂಗ್ ಪ್ರದರ್ಶಿಸಿತು. 37.4 ಓವರ್ಗಳಲ್ಲಿ 149ಕ್ಕೆ ಆಲೌಟ್ ಆಯಿತು. ಹರಿಣಗಳ ಹರಿತವಾದ ಎಸೆತಗಳಿಗೆ ಆಂಗ್ಲರ ಬಳಿ ಉತ್ತರವೇ ಇರಲಿಲ್ಲ. ದಾಳಿಗಿಳಿದ ಎಲ್ಲರೂ ವಿಕೆಟ್ ಉಡಾಯಿಸುತ್ತಲೇ ಹೋದರು. ಆ್ಯನ್ರಿಚ್ ನೋರ್ಜೆ 3, ಕಾಗಿಸೊ ರಬಾಡ, ಕೇಶವ್ ಮಹಾರಾಜ್ ಮತ್ತು ಮಾರ್ಕೊ ಜಾನ್ಸೆನ್ ತಲಾ 2 ವಿಕೆಟ್ ಕಿತ್ತರು. ಇನ್ನೊಂದು ವಿಕೆಟ್ ಎನ್ಗಿಡಿ ಪಾಲಾಯಿತು.
ತಲಾ 35 ರನ್ ಮಾಡಿದ ಅಲೆಕ್ಸ್ ಲೀಸ್ ಮತ್ತು ಸ್ಟುವರ್ಟ್ ಬ್ರಾಡ್ ಅವರದೇ ಹೆಚ್ಚಿನ ಗಳಿಕೆ. ಇದು ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಇಂಗ್ಲೆಂಡಿಗೆ ಎದುರಾದ ಮೊದಲ ಸೋಲು.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್-165 ಮತ್ತು 149. ದಕ್ಷಿಣ ಆಫ್ರಿಕಾ-326.