ಸೌತ್‌ ಏಶ್ಯನ್‌ ಗೇಮ್ಸ್‌: ಭಾರತಕ್ಕೆ ನಾಲ್ಕು ಪದಕ

Team Udayavani, Dec 2, 2019, 11:45 PM IST

ಪೋಖರಾ (ನೇಪಾಲ): 13ನೇ ಸೌತ್‌ ಏಶ್ಯನ್‌ ಗೇಮ್ಸ್‌ನ (ಎಸ್‌ಎಜಿ) ಮೊದಲ ದಿನ ಭಾರತ ಒಂದು ಚಿನ್ನ, 2 ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದು ಶುಭಾರಂಭ ಮಾಡಿದೆ.

ಸೋಮವಾರ ನಡೆದ ವೈಯಕ್ತಿಕ ವಿಭಾಗದ ಪುರುಷರ ಟ್ರಯಾಥ್ಲಾನ್‌ ಸ್ಪರ್ಧೆಯಲ್ಲಿ ಆದರ್ಶ್‌ ಎಂ.ಎನ್‌. ಸಿನಿಮೊಳ್‌ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಕೊರಳಿಗೇರಿಸಿ ಕೊಂಡರು. ಇದೇ ವಿಭಾಗದಲ್ಲಿ ಭಾರತದ ಮತ್ತೋರ್ವ ಸ್ಪರ್ಧಿ ಬಿಶ್ವರ್‌ಜಿತ್‌ ಶ್ರೀಕೋಮ್‌ ಬೆಳ್ಳಿ ಪದಕ ಗೆದ್ದರು.

ಟ್ರಯಾಥ್ಲಾನ್‌ ಸ್ಪರ್ಧೆಯ ಮೊದಲ ಹಂತದಲ್ಲಿ 750 ಮೀ. ಈಜು, ಬಳಿಕ 20 ಕಿ.ಮೀ. ಬೈಕ್‌ ರೇಸ್‌ ಹಾಗೂ 5 ಕಿ.ಮೀ. ಓಟ ನಡೆಯಿತು. 1 ಗಂಟೆ, 2 ನಿಮಿಷ, 51 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿದ ಆದರ್ಶ್‌ ಚಾಂಪಿಯನ್‌ ಆದರು. 1 ಗಂಟೆ, 2 ನಿಮಿಷ, 59 ಸೆಕೆಂಡ್‌ಗಳಲ್ಲಿ ಸ್ಪರ್ಧೆ ಮುಗಿಸಿದ ಬಿಶ್ವರ್‌ಜಿತ್‌ ಬೆಳ್ಳಿ ಪದಕ ಪಡೆದರು. ನೇಪಾಲದ ಬಸಂತಾ ಥಾರು ಕಂಚಿನ ಪದಕ ಗೆದ್ದರು (1 ಗಂಟೆ, 3 ನಿಮಿಷ, 6 ಸೆಕೆಂಡ್ಸ್‌).

ಸರೋಜಿನಿಗೆ ಬೆಳ್ಳಿ
ಟ್ರಯಾಥ್ಲಾನ್‌ ಮಹಿಳಾ ವೈಯಕ್ತಿಕ ವಿಭಾಗದಲ್ಲಿ ಸರೋಜಿನಿ ದೇವಿ ಬೆಳ್ಳಿ ಪದಕ ಪಡೆದರು. ಅವರು 1 ಗಂಟೆ, 14 ನಿಮಿಷಗಳಲ್ಲಿ ಸ್ಪರ್ಧೆ ಮುಗಿಸಿ 2ನೇ ಸ್ಥಾನಿಯಾದರು. ಎಂ. ಪ್ರಗ್ನಾé ಕಂಚು ಗೆದ್ದರು. ಈ ವಿಭಾಗದ ಚಿನ್ನ ನೇಪಾಲದ ಸೋನಿ ಗುರುಂಗ್‌ ಪಾಲಾಯಿತು (1 ಗಂಟೆ, 13 ನಿಮಿಷ, 45 ಸೆಕೆಂಡ್ಸ್‌).

ಈ ಕೂಟದಲ್ಲಿ ಭಾರತದ 487 ಆ್ಯತ್ಲೀಟ್‌ಗಳು ಪಾಲ್ಗೊಂಡಿದ್ದು, 15 ವಿಭಾಗಗಳಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ