ಸೌಥಂಪ್ಟನ್ ಟೆಸ್ಟ್: ಮಳೆಯ ನಡುವೆ ಬ್ಯಾಟಿಂಗ್ ನಡೆಸಲು ಪಾಕ್ ಪರದಾಟ
Team Udayavani, Aug 14, 2020, 7:34 AM IST
ಸೌಥಂಪ್ಟನ್: ಪ್ರವಾಸಿ ಪಾಕಿಸ್ಥಾನ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ದಿನದ ಗೌರವ ಸಂಪಾದಿಸಿದೆ. ಮಳೆಯಿಂದ ಅಡ್ಡಿಯಾದ ಮೊದಲ ದಿನದಲ್ಲಿ ಪಾಕಿಸ್ಥಾನ ಐದು ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ಥಾನ ಆರಂಭದಲ್ಲಿ ವಿಕೆಟ್ ಕಳೆದುಕೊಂಡಿತು. ಕಳೆದ ಪಂದ್ಯದ ಶತಕವೀರ ಶಾನ್ ಮಸೂದ್ ಒಂದು ರನ್ ಗೆ ಔಟಾದರೆ, ನಾಯಕ ಅಜರ್ ಅಲಿ 20 ರನ್ ಗಳಿಸಿದರು. ಅಸದ್ ಶಫೀಕ್ ಐದು ರನ್ ಗಳಿಸಿದರೆ, 11 ವರ್ಷಗಳ ನಂತರ ಟೆಸ್ಟ್ ತಂಡಕ್ಕೆ ಮರಳಿದ ಫಾವದ್ ಅಲಂ ಶೂನ್ಯ ಸಂಪಾದಿಸಿದರು.
ಆದರೆ ಮತ್ತೊಂದೆಡೆ ದಿಟ್ಟವಾಗಿ ನಿಂತ ಅಬಿದ್ ಅಲಿ 60 ರನ್ ಗಳಿಸಿದರು. ಬಾಬರ್ ಅಜಂ 25 ರನ್ ಗಳಿಸಿ ಔಟಾದರು. ತಂಡ 126 ರನ್ ಗೆ ಐದು ವಿಕೆಟ್ ಕಳೆದುಕೊಂಡಿದೆ.
ಇಂಗ್ಲೆಂಡ್ ಪರ ಆ್ಯಂಡರ್ಸನ್ ಎರಡು ವಿಕೆಟ್ ಪಡೆದರೆ, ಬ್ರಾಡ್, ಕರ್ರನ್ ಮತ್ತು ವೋಕ್ಸ್ ತಲಾ ಒಂದು ವಿಕೆಟ್ ಪಡೆದರು. ಪಾಕಿಸ್ಥಾನ ಈ ಪಂದ್ಯದಲ್ಲಿ ಶದಾಬ್ ಖಾನ್ ಬದಲಿಗೆ ಫಾವದ್ ಅಲಂ ಗೆ ಸ್ಥಾನ ನೀಡಿದ್ದರೆ, ಇಂಗ್ಲೆಂಡ್ ತಂಡದಲ್ಲಿ ಬೆನ್ ಸ್ಟೋಕ್ಸ್ ಮತ್ತು ಆರ್ಚರ್ ಬದಲಿಗೆ ಜ್ಯಾಕ್ ಕ್ರಾಲಿ ಮತ್ತು ಸ್ಯಾಮ್ ಕರ್ರನ್ ಸ್ಥಾನ ಪಡೆದರು.