ದೀಪ್ತಿಕಾ ಟ್ವೀಟ್‌ಗೆ ಸ್ಪಂದಿಸಿದ ಕ್ರೀಡಾ ಸಚಿವ

ಮಂಗಳೂರು ಮೂಲದ ಪವರ್‌ಲಿಫ್ಟರ್‌

Team Udayavani, Jul 8, 2019, 5:56 AM IST

ಮಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ಮಂಗಳೂರು ಮೂಲದ ರಾಷ್ಟ್ರೀಯ ಪವರ್‌ಲಿಫ್ಟರ್‌ ದೀಪ್ತಿಕಾ ಪುತ್ರನ್‌ ಮಾಡಿದ ಟ್ವೀಟ್‌ಗೆ ಕೇಂದ್ರ ಕ್ರೀಡಾ ಸಚಿವ ಕಿರಣ್‌ ರಿಜಿಜು ಸ್ಪಂದಿಸಿದ್ದಾರೆ.

“ಸೆಪ್ಟಂಬರ್‌ನಲ್ಲಿ ಕೆನಡಾದಲ್ಲಿ ನಡೆಯುವ ಏಶ್ಯನ್‌ ಕಾಮನ್ವೆಲ್ತ್‌ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ನಾನು ಕೂಡ ಉತ್ಸುಕಳಾಗಿದ್ದೇನೆ. ಇದಕ್ಕೆ ಆರ್ಥಿಕ ಸಹಾಯ ಬೇಕಿದೆ. ಕ್ರೀಡಾ ಕ್ಷೇತ್ರದ ಸಾಧನೆಗಾಗಿ ನನಗೆ ಸಹಕಾರ ನೀಡಿ’ ಎಂದು ದೀಪ್ತಿಕಾ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರಿಗೆ ಜು. 5ರಂದು ಟ್ವೀಟ್‌ ಮಾಡಿದ್ದರು.

ಕ್ರೀಡಾ ಸಚಿವರು ದೀಪ್ತಿಕಾ ಅವರ ಟ್ವೀಟ್‌ಗೆ ಸ್ಪಂದಿಸಿದ್ದಾರೆ. “ಈಗಾಗಲೇ ನಮ್ಮ ಪಾಲಿಸಿ ಪ್ರಕಾರ ನಿವೃತ್ತ ಜೀವನ ನಡೆಸುವ ಮಾಜಿ ಕ್ರೀಡಾಪಟುಗಳಿಗೆ ಹಣಕಾಸಿನ ನೆರವು ನೀಡಲು ಅವಕಾಶವಿದೆ. ಆದರೂ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ನಿಮ್ಮನ್ನು ಸಂಪರ್ಕಿಸುವಂತೆ ಈಗಾಗಲೇ ಸೂಚನೆ ನೀಡಿದ್ದೇನೆ’ ಎಂದು ರಿಜಿಜು ಮರು ಟ್ವೀಟ್‌ ಮಾಡಿದ್ದಾರೆ.

ಸಚಿವರಿಗೆ ಧನ್ಯವಾದಗಳು
ಈ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿದ ದೀಪ್ತಿಕಾ, “ಭಾರತೀಯ ಕ್ರೀಡಾ ಪ್ರಾಧಿಕಾರದ ಅಧಿಕಾ ರಿಗಳು ನನ್ನನ್ನು ಸಂಪರ್ಕಿಸಿದ್ದಾರೆ. ನನ್ನ ಸ್ವವಿವರವನ್ನು ಅವರಿಗೆ ಮೈಲ್‌ ಮಾಡಿದ್ದೇನೆ. ಈ ಬಗ್ಗೆ ಸದ್ಯದಲ್ಲಿಯೇ ಪ್ರತಿಕ್ರಿಯಿಸುವುದಾಗಿ ಹೇಳಿದ್ದಾರೆ. ನನ್ನ ಟ್ವೀಟ್‌ಗೆ ಸ್ಪಂದಿಸಿದ ಕ್ರೀಡಾ ಸಚಿವ ಕಿರಣ್‌ ರಿಜಿಜು ಅವರಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.

ದೀಪ್ತಿಕಾ ಸಾಧನೆ
ಮಂಗಳೂರಿನ ಬೋಳಾರ ಮುಳಿಹಿತ್ಲುವಿನ ಜಿತೇಂದ್ರ ಪುತ್ರನ್‌-ನಮಿತಾ ಪುತ್ರನ್‌ ದಂಪತಿ ಪುತ್ರಿ ದೀಪ್ತಿಕಾ ನಗರದ ಕೆನರಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.ಇದೇ ವರ್ಷ ಪಾಂಡಿಚೇರಿಯಲ್ಲಿ ನಡೆದ ಸೌತ್‌ ಇಂಡಿಯಾ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನದ ಪದಕ, ತಮಿಳುನಾಡಿನಲ್ಲಿ ನಡೆದ ಅಖೀಲ ಭಾರತ ರಾಷ್ಟ್ರೀಯ ಮಟ್ಟದ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ಏಶ್ಯನ್‌ ಕಾಮನ್ವೆಲ್ತ್‌ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ದೀಪ್ತಿಕಾ 83 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಅವರ ಕೋಚ್‌ ಯಾದವ್‌ ಸುವರ್ಣ ತಿಳಿಸಿದ್ದಾರೆ.

ಏಶ್ಯನ್‌ ಕಾಮನ್‌ವೆಲ್ತ್‌ ಪವರ್‌ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಸುಮಾರು 3 ಲಕ್ಷ ರೂ. ಅಗತ್ಯವಿದೆ. ನಮ್ಮದು ಮಧ್ಯಮ ವರ್ಗದ ಕುಟುಂಬವಾದ್ದರಿಂದ ಅಷ್ಟೊಂದು ಹಣ ಹೊಂದಿಸುವುದು ಕಷ್ಟಸಾಧ್ಯ. ಇದೇ ಕಾರಣಕ್ಕೆ ಕ್ರೀಡಾ ಸಚಿವರಿಗೆ ಮನವಿ ಮಾಡಿದೆ.
-ದೀಪ್ತಿಕಾ ಪುತ್ರನ್‌,
ಪವರ್‌ಲಿಫ್ಟರ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ