ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಸಾಧನೆಗೈದ ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್
Team Udayavani, Jul 28, 2020, 5:18 PM IST
ಮ್ಯಾಂಚೆಸ್ಟರ್: ಇಂಗ್ಲೆಂಡ್ ನ ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ ಟೆಸ್ಟ್ ಕ್ರಿಕೆಟ್ ನಲ್ಲಿ 500 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ವಿಶ್ವದ ಏಳನೇ ಬೌಲರ್ ಆಗಿ ಬ್ರಾಡ್ ಮೂಡಿಬಂದಿದ್ದಾರೆ.
ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟೆಸ್ಟ್ ನ ಅಂತಿಮ ದಿನದ ಆಟದಲ್ಲಿ ಕ್ರೇಗ್ ಬ್ರಾಥ್ ವೇಟ್ ವಿಕೆಟ್ ಪಡೆಯುವುದರೊಂದಿಗೆ ಬ್ರಾಡ್ ಈ ಸಾಧನೆ ಮಾಡಿದ್ದಾರೆ. ಜೊತೆಗಾರ ಜೇಮ್ಸ್ ಆ್ಯಂಡರ್ಸನ್ ನಂತರ ಈ ಸಾಧನೆ ಮಾಡಿದ ಎರಡನೇ ಇಂಗ್ಲೆಂಡ್ ಬೌಲರ್ ಎಂಬ ಕೀರ್ತಿಗೆ ಬ್ರಾಡ್ ಪಾತ್ರರಾಗಿದ್ದಾರೆ.
ತನ್ನ 140ನೇ ಟೆಸ್ಟ್ ಪಂದ್ಯದಲ್ಲಿ ಬ್ರಾಡ್ ಈ ಸಾಧನೆ ಮಾಡಿದ್ದಾರೆ. ವಿಚಿತ್ರವೆಂದರೆ ಆ್ಯಂಡರ್ಸನ್ ಅವರ 500ನೇ ವಿಕೆಟ್ ಕೂಡಾ ಕ್ರೇಗ್ ಬ್ರಾಥ್ ವೇಟ್ ಅವರದೇ ಆಗಿತ್ತು.
ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಮುತ್ತಯ್ಯ ಮುರಳೀಧರನ್ (800). ನಂತರ ಶೇನ್ ವಾರ್ನ್ (708), ಅನಿಲ್ ಕುಂಬ್ಳೆ ( 619) ಆ್ಯಂಡರ್ಸನ್ (619), ಗ್ಲೆನ್ ಮೆಕ್ ಗ್ರಾಥ್ ( 563) ಮತ್ತು ಕಟ್ನಿ ವಾಲ್ಶ್ (519) ಇದ್ದಾರೆ. ಸದ್ಯ ಈ ಗುಂಪಿಗೆ ಬ್ರಾಡ್ ಸೇರ್ಪಡೆಯಾಗಿದ್ದಾರೆ.