ಸ್ಟೀಲರ್ ಗೆ ಸೋಲುಣಿಸಿದ ತಲೈವಾಸ್
ತವರು ನೆಲದಲ್ಲಿ ಮತ್ತೆ ಎಡವಿದ ಪಾಟ್ನಾ ಪೈರೇಟ್ಸ್
Team Udayavani, Aug 5, 2019, 5:42 AM IST
ಪಾಟಲಿಪುತ್ರ (ಬಿಹಾರ): ಏಳನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ನ ಪಾಟ್ನಾ ಚರಣದ ರವಿವಾರದ ಪಂದ್ಯದಲ್ಲಿ, ತಮಿಳ್ ತಲೈವಾಸ್ ತಂಡ ಹರ್ಯಾಣ ಸ್ಟೀಲರ್ ವಿರುದ್ಧ 35-28 ಅಂಕಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಆಡಿದ 4 ಪಂದ್ಯದಲ್ಲಿ ಹರ್ಯಾಣ ಮೂರರಲ್ಲಿ ಸೋತಂತಾಯಿತು. ಮತ್ತೂಂದು ಕಡೆ ತಮಿಳ್ ತಲೈವಾಸ್ ಇಷ್ಟೇ ಪಂದ್ಯವಾಡಿ ಎರಡನೇ ಜಯ ಸಾಧಿಸಿತು.
ತಮಿಳುನಾಡು ಪರ ಮಿಂಚಿದ್ದು ರಾಹುಲ್ ಚೌಧರಿ. ಅವರು 23 ಬಾರಿ ಎದುರಾಳಿ ತಂಡದ ಕೋಟೆಯ ಮೇಲೆ ದಾಳಿ ಮಾಡಿ ಉತ್ತಮ ಯಶಸ್ಸು ಗಳಿಸಿದರು. ಅವರು ಗಳಿಸಿದ ಅಂಕ 13. ರಕ್ಷಣೆಯಲ್ಲಿ ಅವರಿಗೆ ಮಂಜೀತ್ ಚಿಲ್ಲರ್ ನೆರವು ನೀಡಿ, 3 ಅಂಕ ಗಳಿಸಿದರು. ಹರ್ಯಾಣ ಪರ ವಿಕಾಸ್ ಕಂಡೊಲ ದಾಳಿಯಲ್ಲಿ ಮಿಂಚಿ 7 ಅಂಕ ತಂದಿತ್ತರು.
ಧರ್ಮರಾಜ್ ಟ್ಯಾಕಲ್ ದಾಖಲೆ
ಪ್ರೊ ಕಬಡ್ಡಿ ಇತಿಹಾಸದಲ್ಲಿ ಧರ್ಮರಾಜ್ ಚೆರ್ಲಥಾನ್, ಡು ಆರ್ ಡೈ ಹಂತದಲ್ಲಿ 10 ಸೂಪರ್ ಟ್ಯಾಕಲ್ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಹರ್ಯಾಣ ಪರ ಆಡುತ್ತಿರುವ ಧರ್ಮರಾಜ್ ರವಿವಾರದ ಪಂದ್ಯದಲ್ಲಿ ಈ ಸಾಧನೆ ಮಾಡಿದರು.
ಪಾಟ್ನಾಕ್ಕೆ ಹೀನಾಯ ಸೋಲು
ದಿನದ ದ್ವಿತೀಯ ಪಂದ್ಯದಲ್ಲಿ ಆತಿಥೇಯ ಪಾಟ್ನಾ ಪೈರೇಟ್ಸ್ ಪುನೇರಿ ಪಲ್ಟಾನ್ ವಿರುದ್ಧ 20-41 ಅಂತರದ ಭಾರೀ ಸೋಲಿಗೆ ತುತ್ತಾಯಿತು. ಇದು ತವರಿನಲ್ಲಿ ಪಾಟಾದನಕ್ಕೆ ಎದುರಾದ ಸತತ ಎರಡನೇ ಸೋಲಾಗಿದೆ.