ಸ್ಟೀವನ್‌ ಸ್ಮಿತ್‌: ಮೋಸಗಾರ ಎಂದು ಜರೆದವರ ಮುಂದೆಯೇ ಮೆರೆದ ಮಾಂತ್ರಿಕ

Team Udayavani, Nov 4, 2019, 5:15 PM IST

ಅಂದು ಆ ಆಟಗಾರ ಎಡ್ಜ್ ಬಾಸ್ಟನ್ ಅಂಗಳಕ್ಕೆ ಕಾಲಿಟ್ಟಾಗ ಗ್ಯಾಲರಿಗಳಲ್ಲಿ ಕುಳಿತಿದ್ದ ಪ್ರೇಕ್ಷಕರು ಮೋಸಗಾರ ಎಂದು ಮೂದಲಿಸಿದ್ದರು. ಇಂಗ್ಲೆಂಡ್‌ನ‌ ಹಿರಿಯ ಆಟಗಾರರೆಲ್ಲಾ ವಾಗ್ಬಾಣ ಬಿಟ್ಟು ಆತನ ಆತ್ಮವಿಶ್ವಾಸಕ್ಕೆ ಪೆಟ್ಟು ನೀಡಲು ಪ್ರಯತ್ನಿಸಿದ್ದರು.

30ರ ಹರೆಯದ ಆ ಬ್ಯಾಟ್ಸ್‌ಮನ್‌ ಅದ್ಯಾವುದಕ್ಕೂ ಜಗ್ಗಲಿಲ್ಲ. ಮೊದಲ ಟೆಸ್ಟ್‌ ಎರಡೂ ಇನ್ನಿಂಗ್ಸ್‌ ನಲ್ಲಿ ಶತಕ ಸಿಡಿಸಿ, ಬೈಯ್ದವರಿಂದಲೇ ಭೇಷ್‌ ಎನಿಸಿಕೊಂಡರು. ಹೀಯಾಳಿಸಿದ್ದ ಅಭಿಮಾನಿಗಳಿಂದಲೇ ಚಪ್ಪಾಳೆ ಗಿಟ್ಟಿಸಿ ಖುಷಿಯ ಕಡಲಲ್ಲಿ ತೇಲಿದ್ದರು. ಕಲಾತ್ಮಕ ಆಟದ ಮೂಲಕವೇ ಕ್ರಿಕೆಟ್‌ ಲೋಕದ ಹೃದಯ ಗೆದ್ದ ಆ ತಾರೆ, ಆಸ್ಟ್ರೇಲಿಯಾದ ಸ್ಟೀವನ್‌ ಸ್ಮಿತ್‌.

ಒಂದು ವರ್ಷದ ಹಿಂದಿನ ಮಾತು. ಕೇಪ್‌ಟೌನ್‌ ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟೆಸ್ಟ್‌ ಪಂದ್ಯದ ವೇಳೆ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸ್ಮಿತ್‌ ಭಾಗಿಯಾಗಿದ್ದರು. ಆಗ ಆಸ್ಟ್ರೇಲಿಯಾ ತಂಡದ ಸಾರಥ್ಯ ವಹಿಸಿದ್ದ ಅವರನ್ನು ಎಲ್ಲರೂ ವಂಚಕ, ಮೋಸಗಾರ ಎಂದೇ ಜರೆದಿದ್ದರು. 2018ರ ಮಾರ್ಚ್‌ 29ರಂದು ಸಿಡ್ನಿಯಲ್ಲಿ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಅಭಿಮಾನಿಗಳ ಕ್ಷಮೆಯಾಚಿಸಿದ್ದ ಸ್ಮಿತ್‌ ಮಾಧ್ಯಮದವರ ಮುಂದೆ ಬಿಕ್ಕಿ ಬಿಕ್ಕಿ ಅತ್ತಿದ್ದರು.

ಈ ತಪ್ಪು ನನಗೆ ಒಳ್ಳೆಯ ಪಾಠ ಕಲಿಸಿದೆ. ಈಗ ಕಳೆದುಕೊಂಡಿರುವ ಘನತೆ, ಗೌರವವನ್ನು ಖಂಡಿತಾ ಮರಳಿ ಪಡೆಯುತ್ತೇನೆ’ ಎಂದು ಅವರು ಅಂದು ಹೇಳಿದ್ದ ಆ ಮಾತು ಈಗ ಅಕ್ಷರಶಃ ನಿಜವಾಗಿದೆ.

ಮಾಡಿದ ತಪ್ಪಿಗಾಗಿ 12 ತಿಂಗಳ ವನವಾಸ ಮುಗಿಸಿ ಬಂದಿರುವ ಸ್ಮಿತ್‌ ಇಂಗ್ಲೆಂಡ್‌ನ‌ಲ್ಲಿ ನಡೆದ ಆ್ಯಷಸ್‌ ಟೆಸ್ಟ್‌ ಸರಣಿಯಲ್ಲಿ ರನ್‌ ಮಳೆ ಹರಿಸಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ತಂಡ ಕುಸಿತದ ಹಾದಿ ಹಿಡಿದಿದ್ದಾಗ ತಂಡಕ್ಕೆ ಆಸರೆಯಾಗಿದ್ದು ಇದೇ ಸ್ಮಿತ್‌. ಬರೋಬ್ಬರಿ 336 ನಿಮಿಷ ಕ್ರೀಸ್ ನಲ್ಲಿದ್ದ ಅವರು ಇಂಗ್ಲೆಂಡ್‌ ಬೌಲರ್‌ಗಳನ್ನು ಹೈರಾಣಾಗಿಸಿಬಿಟ್ಟಿದ್ದರು. ಅವರು ಕಟ್ಟಿದ ಆ ಇನ್ನಿಂಗ್ಸ್‌ ಬಗ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿತ್ತು. ಎರಡನೇ ಇನ್ನಿಂಗ್ಸ್‌ನಲ್ಲೂ ಜಾದೂ ಮಾಡಿದ್ದ ಸ್ಮಿತ್‌ ತಂಡದ ಗೆಲುವಿನ ರೂವಾರಿಯೂ ಆಗಿದ್ದರು.

ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದರೂ ಸ್ಮಿತ್‌ ಸಂತೃಪ್ತರಾಗಿರಲಿಲ್ಲ. ಸಂತಸದಲ್ಲಿ ಮೈ ಮರೆತಿರಲೂ ಇಲ್ಲ. ಬದಲಾಗಿ ನೆಟ್‌ನಲ್ಲಿ ಗಂಟೆಗಟ್ಟಲೆ ಬೆವರು ಹರಿಸುತ್ತಿದ್ದರು. ಆಟದ ಬಗ್ಗೆ ಹೊಂದಿದ್ದ ಈ ಬದ್ಧತೆಯೇ ಅವರು ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿ ರೂಪುಗೊಳ್ಳಲು ಕಾರಣ’ ಎಂದು ಆಸ್ಟ್ರೇಲಿಯಾದ ಆಟಗಾರ ಮಿಚೆಲ್‌ ಮಾರ್ಷ್‌ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಬೌನ್ಸರ್‌ ಪೆಟ್ಟಿಗೂ ಅಂಜಲಿಲ್ಲ
ಕ್ರಿಕೆಟ್‌ ಕಾಶಿ ಲಾರ್ಡ್ಸ್‌ನಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಜೋಫ್ರಾ ಆರ್ಚರ್‌ 77ನೇ ಓವರ್‌ನ ಎರಡನೇ ಎಸೆದ ಬೌನ್ಸರ್‌ ಸ್ಮಿತ್‌ ಅವರ ಕುತ್ತಿಗೆಗೆ ಬಡಿದಿತ್ತು. ನೋವು ಸಹಿಸಲಾರದ ಸ್ಮಿತ್‌ ಕ್ರೀಸ್‌ನಲ್ಲಿಯೇ ಕುಸಿದು ಬಿದ್ದಿದ್ದರು. ತಂಡದ ವೈದ್ಯಕೀಯ ಸಿಬ್ಬಂದಿ ಅವರನ್ನು ಅಂಗಳದ ಆಚೆ ಕರೆದುಕೊಂಡು ಹೋದರು. ಪೀಟರ್‌ ಸಿಡಲ್‌ ಔಟಾದ ನಂತರ ಮತ್ತೆ ಮೈದಾನಕ್ಕೆ ಮರಳಿದ್ದ ಸ್ಮಿತ್‌ ಬೆನ್‌ ಸ್ಟೋಕ್ಸ್‌ ಹಾಕಿದ 86ನೇ ಓವರ್‌ನಲ್ಲಿ ಸತತ ಎರಡು ಬೌಂಡರಿ ಬಾರಿಸಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಮೆಕ್ಸಿಕನ್‌ ಅಲೆ ಏಳುವಂತೆ ಮಾಡಿದ್ದರು. 92ರನ್‌ ಗಳಿಸಿ ಔಟ್‌ ಆಗಿದ್ದರು. ಕುತ್ತಿಗೆಗೆ ಬಿದ್ದಿದ್ದ ಪೆಟ್ಟು ಗಂಭೀರ ಸ್ವರೂಪದ್ದಾಗಿದ್ದರಿಂದ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಕಣಕ್ಕಿಳಿಯಲಿಲ್ಲ. ಮೂರನೇ ಟೆಸ್ಟ್‌ಗೆ ಅಲಭ್ಯರಾದರು. ಆ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಸೋತಿತು!

ನಾಲ್ಕನೇ ಟೆಸ್ಟ್‌ನಲ್ಲಿ ಸ್ಮಿತ್‌ ಮತ್ತೆ ಪರಾಕ್ರಮ ಮೆರೆದರು. ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ದಾಖಲಿಸಿದ್ದ ಅವರು ಎರಡನೇ ಇನ್ನಿಂಗ್ಸ್‌ನಲ್ಲಿಯೂ ಪರಿಣಾಮಕಾರಿ ಬ್ಯಾಟಿಂಗ್‌ ಮಾಡಿ ಮತ್ತೂಮ್ಮೆ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು. ಜೊತೆಗೆ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದರು. ಈ ಹಾದಿಯಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರನ್ನು ಹಿಂದಿಕ್ಕಿದ್ದರು. ಅಷ್ಟೇ ಅಲ್ಲದೆ ಟೆಸ್ಟ್‌ನಲ್ಲಿ ಅತಿ ವೇಗವಾಗಿ 26 ಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟ್ಸ್‌ಮನ್‌ ಎಂಬ ಶ್ರೇಯಕ್ಕೂ ಭಾಜನರಾಗಿದ್ದರು. ಆ್ಯಶಸ್‌ ಸರಣಿಯಲ್ಲಿ ಸತತ ಎಂಟು ಅರ್ಧಶತಕ ಸಿಡಿಸಿದ ಹಿರಿಮೆಯೂ ಅವರದ್ದಾಗಿತ್ತು. ಒಟ್ಟಾರೆಯಾಗಿ ತನ್ನನ್ನು ಮೋಸಗಾರ ಎಂದು ಪದೇ ಪದೆ ಟೀಕಿಸುವವರ ನೆಲದಲ್ಲೆ ಸ್ಮಿತ್‌ ಈ ಸಾಧನೆ ಮಾಡಿರುವುದು ವಿಶೇಷ.

ಅಭಿ

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ತುಮಕೂರು: ಇಂದಿನ ಜಾತಿ ವ್ಯವಸ್ಥೆ ಭಾರತವನ್ನು ದುರ್ಬಲವನ್ನಾಗಿಸುತ್ತಿದೆ. ಈ ವ್ಯವಸ್ಥೆಯ ವಿರುದ್ಧ ಅಂದು ಬಸವಣ್ಣನವರು ಸಾಮಾಜಿಕ ಆಂದೋಲನವನ್ನೇ ಮಾಡಿದರು. ಇಂದು...

  • ಜಾಗತಿಕ ಮಟ್ಟದಲ್ಲಿ ಜನ ಸಾರಿಗೆ ಸೇವೆಗೆ ಮಾಡುವ ವೆಚ್ಚಕ್ಕೆ ಹೋಲಿಸಿದರೆ ಬೆಂಗಳೂರಿಗರು ದುಪ್ಪಟ್ಟು ಹಣ ತೆರುತ್ತಿದ್ದಾರೆ ಎಂದು ಸೆಂಟರ್‌ ಫಾರ್‌ ಸೈನ್ಸ್‌ ಆಂಡ್‌...

  • ಬೆಂಗಳೂರು: "ಪಕ್ಷದ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಿ'! ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ದಿನೇಶ್‌ ಗುಂಡೂರಾವ್‌ ಅವರಿಗೆ...

  • ಬೆಂಗಳೂರು: ಕಪ್‌ ಗಳಿಸಿ, ಕಸ ಅಳಿಸಿ!, ಕಸದ ಪ್ರಮಾಣ ಕಡಿಮೆ ಮಾಡಿ, ರನ್‌ ರೇಟ್‌ ಅಲ್ಲ, ಕಸ ಇಲ್ಲದಿರುವ ಸಿಟಿ ಸೂಪರ್‌ ಸಿಟಿ! ಇವು ಭಾನುವಾರ ಬಿಬಿಎಂಪಿಯ ವೆಬ್‌ಸೈಟ್‌...

  • ಬೆಂಗಳೂರು: ರಾಜ್ಯಾದ್ಯಂತ ಭಾನುವಾರ ನಡೆದ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 58,10,493 ಮಕ್ಕಳಿಗೆ ಲಸಿಕೆ ಹಾಕಲಾಗಿದ್ದು, ಶೇ. 91.16 ರಷ್ಟು ಗುರಿ ಸಾಧನೆಯಾಗಿದೆ....