
ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್; ರಫೆಲ್ ನಡಾಲ್ ನಾಲ್ಕಕ್ಕೆ ನಾಗಾಲೋಟ
ಸ್ವಿಯಾಟೆಕ್, ಕ್ವಿಟೋವಾ ಮುನ್ನಡೆ; ಶಪೊವಲೋವ್ ಪರಾಭವ
Team Udayavani, Sep 5, 2022, 12:02 AM IST

ನ್ಯೂಯಾರ್ಕ್: ರಫೆಲ್ ನಡಾಲ್ ಯುಎಸ್ ಓಪನ್ ಗ್ರ್ಯಾನ್‌ಸ್ಲಾಮ್ ಪಂದ್ಯಾವಳಿಯ ನಾಲ್ಕನೇ ಸುತ್ತಿಗೆ ನಾಗಾಲೋಟ ಬೆಳೆಸಿದ್ದಾರೆ. ಕಾಲೋರ್ಸ್ ಅಲ್ಕರಾಝ್, ಮರಿನ್ ಸಿಲಿಕ್, ಕ್ಯಾಮರಾನ್ ನೂರಿ ಕೂಡ ಇವರ ಹಾದಿಯಲ್ಲಿ ಸಾಗಿದ್ದಾರೆ.
ವನಿತಾ ಸಿಂಗಲ್ಸ್‌ನಲ್ಲಿ ಐಗಾ ಸ್ವಿಯಾಟೆಕ್, ಡೇನಿಯಲ್ ಕಾಲಿನ್ಸ್, ಪೆಟ್ರಾ ಕ್ವಿಟೋವಾ ಮೂರನೇ ಸುತ್ತನ್ನು ಯಶಸ್ವಿಯಾಗಿ ದಾಟಿದ್ದಾರೆ. ಆದರೆ ಕೆನಡಾದ ಡೆನ್ನಿಸ್ ಶಪೊವಲೋವ್, ಸ್ಪೇನ್‌ನ ಗಾರ್ಬಿನ್ ಮುಗುರುಜಾ ಆಟ ಮುಗಿಸಿ ಹೊರಬಿದ್ದರು.
ನಡಾಲ್ ಎದುರಾಳಿ ಥಿಯಾಫೊ
ಕೂಟದ ನೆಚ್ಚಿನ ಆಟಗಾರರಲ್ಲಿ ಒಬ್ಬರಾಗಿರುವ ರಫೆಲ್ ನಡಾಲ್ ಫ್ರಾನ್ಸ್‌ನ 36 ವರ್ಷದ ಹಿರಿಯ ಆಟಗಾರ ರಿಚರ್ಡ್ ಗಾಸ್ಕ್ವೆಟ್ ಅವರನ್ನು 6-0, 6-1, 7-5 ಅಂತರದಿಂದ ಬಗ್ಗುಬಡಿದರು. ಕಳೆದ ಪಂದ್ಯದ ವೇಳೆ ಗಾಯಾಳಾಗಿದ್ದ ನಡಾಲ್‌ಗೆ ಇಲ್ಲಿ ಯಾವುದೇ ಸಮಸ್ಯೆ ಕಾಡಲಿಲ್ಲ. ಮುಂದಿನ ಸುತ್ತಿನಲ್ಲಿ ಅವರು ಅಮೆರಿಕದ ಭರವಸೆಯಾಗಿರುವ ಫ್ರಾನ್ಸೆಸ್ ಥಿಯಾಫೊ ವಿರುದ್ಧ ಆಡಲಿದ್ದಾರೆ. ಥಿಯಾಫೊ 7-6 (7), 6-4, 6-4ರಿಂದ ಆರ್ಜೆಂಟೀನಾದ ಡೀಗೊ ಶಾರ್ಟ್ಸ್ಮನ್‌ಗೆ ಸೋಲುಣಿಸಿದರು.
ನಡಾಲ್ ನಾಡಿನವರೇ ಆದ ಕಾರ್ಲೋಸ್ ಅಲ್ಕರಾಝ್ ಕೂಡ 4ನೇ ಸುತ್ತು ತಲುಪಿದ್ದಾರೆ. ಅವರು ಅಮೆರಿಕದ ಜೆನ್ಸನ್ ಬ್ರೂಕ್ಸ್‌ಬಿ ವಿರುದ್ಧ 6-3, 6-3, 6-3 ಅಂತರದ ಸುಲಭ ಜಯ ಸಾಧಿಸಿದರು. ಇವರಿನ್ನು ಮರಿನ್ ಸಿಲಿಕ್ ವಿರುದ್ಧ ಆಡಬೇಕಿದೆ.
2014ರ ಚಾಂಪಿಯನ್, ಕ್ರೊವೇಶಿಯಾದ ಮರಿನ್ ಸಿಲಿಕ್ ತೀವ್ರ ಸ್ಪರ್ಧೆಯೊಡ್ಡಿದ ಬ್ರಿಟನ್ ಟೆನಿಸಿಗ ಡೇನಿಯಲ್ ಇವಾನ್ಸ್ ಅವರನ್ನು 7-6 (13-11), 6-7 (3-7), 6-2, 7-5 ಅಂತರದಿಂದ ಮಣಿಸಿ ನಿಟ್ಟುಸಿರೆಳೆದರು.
ಬ್ರಿಟನ್‌ನ ಕ್ಯಾಮರಾನ್ ನೂರಿ ಡೆನ್ಮಾರ್ಕ್‌ನ ಹೋಲ್ಜರ್ ರುನೆ ಅವರನ್ನು 7-5, 6-4, 6-1 ಅಂತರದಿಂದ ಪರಾಭವಗೊಳಿಸಿದರು. ಇದು ಈ ವರ್ಷ ರುನೆ ವಿರುದ್ಧ ನೂರಿ ಸಾಧಿಸಿದ 3ನೇ ಗೆಲುವು. ನೂರಿ ಎದುರಾಳಿ ಆ್ಯಂಡ್ರೆ ರುಬ್ಲೇವ್. ಕೆನಡಾದ ಡೆನಿಸ್ ಶಪವಲೋವ್ ವಿರುದ್ಧದ ಥ್ರಿಲ್ಲಿಂಗ್ ಮುಖಾಮುಖೀಯಲ್ಲಿ ರುಬ್ಲೇವ್ 6-4, 2-5, 6-7 (3-7), 6-4, 7-6 (10-7) ಅಂತರದಿಂದ ಗೆದ್ದರು.
ಸ್ವಿಯಾಟೆಕ್, ಕಾಲಿನ್ಸ್ ಗೆಲುವು
ವನಿತೆಯರ ಸಿಂಗಲ್ಸ್‌ನಲ್ಲಿ ವಿಶ್ವದ ನಂ.1 ಆಟಗಾರ್ತಿ, ಫ್ರೆಂಚ್ ಓಪನ್ ಚಾಂಪಿಯನ್ ಕೂಡ ಆಗಿರುವ ಪೋಲೆಂಡ್‌ನ ಐಗಾ ಸ್ವಿಯಾಟೆಕ್ ಅಮೆರಿಕದ ಲಾರೆನ್ ಡೇವಿಸ್ ಅವರಿಗೆ 6-3, 6-4 ಅಂತರದ ಸೋಲುಣಿಸಿದರು. ಸ್ವಿಯಾಟೆಕ್ ಅವರಿನ್ನು ಜರ್ಮನಿಯ ಜೂಲೆ ನೀಮಿಯರ್ ವಿರುದ್ಧ ಆಡಲಿದ್ದಾರೆ. ಅವರು ಚೀನದ ಕ್ವಿನ್ವೆನ್ ಜೆಂಗ್ ವಿರುದ್ಧ 6-4, 7-6 (7 -5) ಅಂತರದಿಂದ ಗೆದ್ದು ಬಂದರು.
ಪ್ರಥಮ ಸುತ್ತಿನಲ್ಲೇ ಎರಡು ಬಾರಿಯ ಮಾಜಿ ಚಾಂಪಿಯನ್ ನವೋಮಿ ಒಸಾಕಾ ಅವರನ್ನು ಕೆಡವಿದ ತವರಿನ ಡೇನಿಯಲ್ ಕಾಲಿನ್ಸ್ ಮೊದಲ ಸಲ ಯುಎಸ್ ಓಪನ್ 4ನೇ ಸುತ್ತು ಪ್ರವೇಶಿಸಿದರು. ಫ್ರಾನ್ಸ್‌ನ ಅನುಭವಿ ಆಟಗಾರ್ತಿ ಅಲೈಜ್ ಕಾರ್ನೆಟ್ ವಿರುದ್ಧ ಕಾಲಿನ್ಸ್ 6-4, 7-6 (11 -9) ಅಂತರದ ರೋಚಕ ಗೆಲುವು ಸಾಧಿಸಿದರು.
ಕಾಲಿನ್ಸ್ ಈ ವರ್ಷದ ಆಸ್ಟ್ರೇಲಿಯನ್ ಓಪನ್ ರನ್ನರ್ ಅಪ್ ಆಗಿದ್ದು, ಇನ್ನು 6ನೇ ಶ್ರೇಯಾಂಕದ ಅರಿನಾ ಸಬಲೆಂಕಾ ಸವಾಲು ಎದುರಿಸಬೇಕಿದೆ. ಗೆದ್ದರೆ ಮೊದಲ ಸಲ ತವರಿನ ಗ್ರ್ಯಾನ್‌ಸ್ಲಾಮ್ ಕ್ವಾರ್ಟರ್ ಫೈನಲ್ ತಲುಪಲಿದ್ದಾರೆ. ಸಬಲೆಂಕಾ ಫ್ರಾನ್ಸ್‌ನ ಕಯಾ ಕನೆಪಿ ಅವರನ್ನು 6-0, 6-2 ಅಂತರದ ಸುಲಭದಲ್ಲಿ ಹಿಮ್ಮೆಟ್ಟಿಸಿದರು.
ಜೆಕ್ ಆಟಗಾರ್ತಿ ಪೆಟ್ರಾ ಕ್ವಿಟೋವಾ 5-7, 6-3, 7-6 (12-10)ರಿಂದ ಗಾರ್ಬಿನ್ ಮುಗುರುಜಾ ಆಟಕ್ಕೆ ತೆರೆ ಎಳೆದರು. ಮುಗುರುಜಾ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್‌ನಲ್ಲಿ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
