ಪ್ರಿಯಂ ಗರ್ಗ್‌ ಭಾರತ ತಂಡದ ನಾಯಕ

ಐಸಿಸಿ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌

Team Udayavani, Dec 3, 2019, 6:00 AM IST

ಮುಂಬಯಿ: ಮುಂದಿನ ವರ್ಷಾ ರಂಭದಲ್ಲಿ ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆಯುವ ಐಸಿಸಿ ಅಂಡರ್‌-19 ಏಕದಿನ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಉತ್ತರಪ್ರದೇಶದ ಬ್ಯಾಟ್ಸ್‌ಮನ್‌ ಪ್ರಿಯಂ ಗರ್ಗ್‌ ಅವರಿಗೆ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಲಭಿಸಿದೆ.

ಅಖೀಲ ಭಾರತ ಜೂನಿಯರ್‌ ಆಯ್ಕೆ ಸಮಿತಿ ಸಭೆ ಸೇರಿ ತಂಡವನ್ನು ಪ್ರಕಟಿಸಿತು. ವಿಕೆಟ್‌ ಕೀಪರ್‌ ಧ್ರುವ ಚಂದ್‌ ಜುರೆಲ್‌ ಉಪನಾಯಕರಾಗಿದ್ದಾರೆ.

ಕಳೆದ ಋತುವಿನಲ್ಲಿ ಬರೋಡ ವಿರುದ್ಧ ರಣಜಿ ಪದಾರ್ಪಣೆ ಮಾಡಿ, ಏಕೈಕ ಪಂದ್ಯವಾಡಿದ ಕರ್ನಾಟಕದ ಎಡಗೈ ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಶುಭಾಂಗ್‌ ಹೆಗ್ಡೆ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಂಡರ್‌-19 ತಂಡದ ಖಾಯಂ ಸದಸ್ಯನಾಗಿರುವ ಶುಭಾಂಗ್‌, ಕಳೆದ ಅಫ್ಘಾನಿಸ್ಥಾನ ವಿರುದ್ಧದ ಅಂಡರ್‌-19 ಸರಣಿ ವೇಳೆ ಗರ್ಗ್‌ ಗೈರಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಅನುಭವವನ್ನೂ ಹೊಂದಿದ್ದಾರೆ. ತಂಡದಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ಮತ್ತೂಬ್ಬ ಆಟಗಾರ ವಿದ್ಯಾಧರ್‌ ಪಾಟೀಲ್‌.

ಗರ್ಗ್‌ ಪ್ರಚಂಡ ಫಾರ್ಮ್
ಅಗ್ರ ಕ್ರಮಾಂಕದ ಬಲಗೈ ಬ್ಯಾಟ್ಸ್‌ಮನ್‌ ಆಗಿರುವ 19ರ ಹರೆಯದ ಪ್ರಿಯಂ ಗರ್ಗ್‌ 2018-19ರ ರಣಜಿ ಋತುವಿನಲ್ಲಿ ಉತ್ತರಪ್ರದೇಶ ಪರ 67.83ರ ಸರಾಸರಿಯಲ್ಲಿ 814 ರನ್‌ ಪೇರಿಸಿದ್ದರು. ಇದರಲ್ಲಿ 2 ಶತಕ ಸೇರಿತ್ತು. ಜೀವನಶ್ರೇಷ್ಠ 206 ರನ್‌ ಸಾಧನೆಯನ್ನೂ ದಾಖಲಿಸಿದ್ದರು.

ಮುಂಬಯಿಯ 17ರ ಹರೆಯದ ಯಶಸ್ವಿ ಜೈಸ್ವಾಲ್‌ ಈ ತಂಡದ ಪ್ರಮುಖ ಆಟಗಾರ. ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಅತೀ ಕಿರಿಯ ಆಟಗಾರನೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಕಳೆದ ವಿಜಯ್‌ ಹಜಾರೆ ಟ್ರೋಫಿ ಏಕದಿನ ಸರಣಿ ವೇಳೆ ಜೈಸ್ವಾಲ್‌ ಈ ಸಾಧನೆ ಮಾಡಿದ್ದರು. ಮುಂಬಯಿಯವರೇ ಆದ ಪ್ರತಿಭಾನ್ವಿತ ಸ್ಪಿನ್ನರ್‌ ಅಥರ್ವ ಅಂಕೋಲೆಕರ್‌ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

“ಎ’ ವಿಭಾಗದಲ್ಲಿ ಭಾರತ
ಒಟ್ಟು 16 ತಂಡಗಳು ಪಾಲ್ಗೊಳ್ಳಲಿರುವ ಕೂಟದಲ್ಲಿ ಭಾರತ “ಎ’ ವಿಭಾಗದಲ್ಲಿ ಸ್ಥಾನ ಪಡೆದಿದೆ. ನ್ಯೂಜಿಲ್ಯಾಂಡ್‌, ಶ್ರೀಲಂಕಾ ಮತ್ತು ಇದೇ ಮೊದಲ ಸಲ ಅರ್ಹತೆ ಪಡೆದಿರುವ ಜಪಾನ್‌ ಈ ವಿಭಾಗದ ಇತರ ತಂಡಗಳು. ಲೀಗ್‌ ಹಂತದ 2 ಅಗ್ರ ತಂಡಗಳು ಸೂಪರ್‌ ಲೀಗ್‌ ಹಂತವನ್ನು ಪ್ರವೇಶಿಸಲಿವೆ.

ಹಾಲಿ ಚಾಂಪಿಯನ್‌ ಕೂಡ ಆಗಿರುವ ಭಾರತ ಈವರೆಗೆ 4 ಸಲ ಅಂಡರ್‌-19 ವಿಶ್ವಕಪ್‌ ಪ್ರಶಸ್ತಿಯನ್ನೆತ್ತಿದೆ. 2018ರ ಫೈನಲ್‌ನಲ್ಲಿ ಆಸ್ಟ್ರೇಲಿಯವನ್ನು 8 ವಿಕೆಟ್‌ಗಳಿಂದ ಮಣಿಸಿ ಚಾಂಪಿಯನ್‌ ಎನಿಸಿಕೊಂಡ ಭಾರತ, ಅಂದಿನ ಕೂಟದಲ್ಲಿ ಅಜೇಯ ಅಭಿಯಾನ ನಡೆಸಿತ್ತು.

ಅಭ್ಯಾಸ ಸರಣಿ
ಪಂದ್ಯಾವಳಿಗೂ ಮುನ್ನ ಭಾರತ ತಂಡ ದಕ್ಷಿಣ ಆಫ್ರಿಕಾಕ್ಕೆ ತೆರಳಿ 3 ಪಂದ್ಯಗಳ ಏಕದಿನ ಸರಣಿ ಯನ್ನಾಡಲಿದೆ. ಬಳಿಕ ದ.ಆಫ್ರಿಕಾ, ಜಿಂಬಾಬ್ವೆ, ನ್ಯೂಜಿಲ್ಯಾಂಡ್‌ ಕಿರಿಯರ ತಂಡಗಳನ್ನೊಳಗೊಂಡ ಚತುಷೊRàಣ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ತಂಡಕ್ಕೆ ಸಿ.ಟಿ.ಎಲ್‌. ರಕ್ಷಣ್‌ ಹೆಚ್ಚುವರಿ ಆಟಗಾರನಾಗಿ ಸೇರ್ಪಡೆಗೊಂಡಿದ್ದಾರೆ.

ಬ್ರಹ್ಮಾವರ ಮೂಲದ ಶುಭಾಂಗ್‌!
ಅಂಡರ್‌-19 ವಿಶ್ವಕಪ್‌ ತಂಡಕ್ಕೆ ಆಯ್ಕೆಯಾದ ಶುಭಾಂಗ್‌ ಹೆಗ್ಡೆ ಅವರ ತಂದೆ-ತಾಯಿ ಉಡುಪಿ ಮೂಲದವರು. ಅನೇಕ ವರ್ಷಗಳ ಹಿಂದೆ ಅವರ ಕುಟುಂಬ ಬ್ರಹ್ಮಾವರದಲ್ಲಿ ನೆಲೆಸಿತ್ತು.

ಮಗ ಭಾರತದ ಕಿರಿಯರ ವಿಶ್ವಕಪ್‌ ತಂಡಕ್ಕೆ ಆಯ್ಕೆಯಾದ ಬಗ್ಗೆ ತಂದೆ ಸಮರ್ಥ್ ಹೆಗ್ಡೆ “ಉದಯವಾಣಿ’ ಜತೆ ಸಂತಸ ಹಂಚಿಕೊಂಡರು. ಅವರು ಕ್ರಿಕೆಟ್‌ ಕೋಚ್‌ ಆಗಿದ್ದಾರೆ.
“ಕೊನೆಗೂ ಬಹು ದಿನಗಳ ಕನಸೊಂದು ಈಡೇರಿತು. ಇಂಥದೊಂದು ಸಮಯಕ್ಕೆ ನಾವೆಲ್ಲ ಬಹಳ ದಿನಗಳಿಂದ ಕಾಯುತ್ತಿದ್ದೆವು. ಮಗನ ಸಾಧನೆ ಬಗ್ಗೆ ಹೆಮ್ಮೆ ಅನಿಸುತ್ತಿದೆ. ಮುಂದೆ ಆತನಿಗೆ ಐಪಿಎಲ್‌, ಭಾರತದ ಹಿರಿಯರ ತಂಡದಲ್ಲಿ ಆಡುವ ಅವಕಾಶ ಸಿಗುವಂತಾಗಲಿ’ ಎಂದು ಸಮರ್ಥ್ ಹೆಗ್ಡೆ ಹೇಳಿದರು.

ಶುಭಾಂಗ್‌ ಅವರ ಕ್ರಿಕೆಟ್‌ ಅಭ್ಯಾಸ 8ನೇ ವರ್ಷದಿಂದಲೇ ಆರಂಭವಾಗಿತ್ತು. ಬೆಂಗಳೂರಿನ “ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್ ಕ್ರಿಕೆಟ್‌ ಸಂಸ್ಥೆ’ಯಲ್ಲಿ ಕ್ರಿಕೆಟಿನ ಪ್ರಾಥಮಿಕ ಪಾಠ ಲಭಿಸಿತ್ತು. 9ನೇ ತರಗತಿ ತನಕ ಬೆಂಗಳೂರಿನ ವಿದ್ಯಾನಿಕೇತನದಲ್ಲಿ ಶಿಕ್ಷಣ ಪಡೆದರು. 10ನೇ ತರಗತಿ, ದ್ವಿತೀಯ ಪಿಯು ವರೆಗೆ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ನಡೆಸಿದರು.

ಸದ್ಯ ಬೆಂಗಳೂರಿನ ಸೇಂಟ್‌ ಜೋಸೆಫ್ ಕಾಲೇಜ್‌ನಲ್ಲಿ ಮೊದಲ ವರ್ಷದ ಬಿಬಿಎಂ ಅಭ್ಯಾಸ ನಡೆಸುತ್ತಿದ್ದಾರೆ. ತಾಯಿ ಮೈತ್ರಿ ಹೆಗ್ಡೆ ವೈದ್ಯೆಯಾಗಿದ್ದಾರೆ.

ಭಾರತ ವಿಶ್ವಕಪ್‌ ತಂಡ
ಪ್ರಿಯಂ ಗರ್ಗ್‌ (ನಾಯಕ), ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮ, ದಿವಾÏಂಶ್‌ ಸಕ್ಸೇನಾ, ಧ್ರುವ ಚಂದ್‌ ಜುರೆಲ್‌ (ಉಪನಾಯಕ, ವಿ.ಕೀ.), ಶಾಶ್ವತ್‌ ರಾವತ್‌, ದಿವ್ಯಾಂಶ್‌ ಜೋಶಿ, ಶುಭಾಂಗ್‌ ಹೆಗ್ಡೆ, ರವಿ ಬಿಶ್ನೋಯ್‌, ಆಕಾಶ್‌ ಸಿಂಗ್‌, ಕಾರ್ತಿಕ್‌ ತ್ಯಾಗಿ, ಅಥರ್ವ ಅಂಕೋಲೆಕರ್‌, ಕುಮಾರ್‌ ಕುಶಾಗ್ರ (ವಿ.ಕೀ.), ಸುಶಾಂತ್‌ ಮಿಶ್ರಾ, ವಿದ್ಯಾಧರ್‌ ಪಾಟೀಲ್‌.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ