ಏಕದಿನ ರ‍್ಯಾಂಕಿಂಗ್ ಪ್ರಕಟ: ಕೊಹ್ಲಿ ನಂ-1, ರೋಹಿತ್ ಗೆ 2ನೇ ಸ್ಥಾನ, ಕುಸಿದ ಬುಮ್ರಾ !
Team Udayavani, Dec 10, 2020, 8:30 PM IST
ನವದೆಹಲಿ: ಐಸಿಸಿ ಬಿಡುಗಡೆ ಮಾಡಿದ ನೂತನ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕೊಹ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದು, ಹಿಟ್ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ದ್ವಿತೀಯ ಸ್ಥಾನಪಡೆದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಇತ್ತೀಚಿಗಷ್ಟೇ ಮುಕ್ತಾಯಗೊಂಡ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎರಡು ಅರ್ಧಶತಕಗಳನ್ನು ಸಿಡಿಸಿದ್ದು, 870 ಅಂಕಗಳೊಂದಿಗೆ ಏಕದಿನ ರ‍್ಯಾಂಕಿಂಗ್ ನಲ್ಲಿ ಮೊದಲ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಆ ಮೂಲಕ ಅಗ್ರಪಟ್ಟದೊಂದಿಗೆ 2020ಕ್ಕೆ ಗುಡ್ ಬೈ ಹೇಳಲಿದ್ದಾರೆ.
ಗಾಯಾಳುವಾಗಿ ಏಕದಿನ ಪಂದ್ಯದಲ್ಲಿ ಹೊರಗುಳಿದರೂ ರೋಹಿತ್ ಶರ್ಮಾ 842 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 837 ಅಂಕಗಳಿಂದ ಪಾಕಿಸ್ಥಾನದ ಬಾಬರ್ ಅಜಾಮ್ ಮೂರನೇ ಸ್ಥಾನಿಯಾದರೆ, ನ್ಯೂಜಿಲ್ಯಾಂಡ್ ನ ರಾಸ್ ಟೇಲರ್ 818 ಅಂಕಗಳಿಂದ ನಾಲ್ಕನೇ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್, ಎರಡು ಸ್ಥಾನಗಳ ಮುಂಭಡ್ತಿ ಪಡೆದು ಐದನೇ ಸ್ಥಾನ ಅಲಂಕರಿಸಿದ್ದಾರೆ. ಡೇವಿಡ್ ವಾರ್ನರ್ 7ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.
ಟಾಪ್-50 ಪಟ್ಟಿಯಲ್ಲಿ ಹಾರ್ದಿಕ್ ಪಾಂಡ್ಯ:
ಆಸ್ಟ್ರೇಲಿಯಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ 49ನೇ ಸ್ಥಾನ ಪಡೆದಿದ್ದಾರೆ. ಪಾಂಡ್ಯ ಮೊದಲ ಮತ್ತು ಅಂತಿಮ ಪಂದ್ಯದಲ್ಲಿ ಕ್ರಮವಾಗಿ 90 ಮತ್ತು 92 ರನ್ ಗಳಿಸಿದ್ದರು.
ಬೌಲಿಂಗ್ ವಿಭಾಗದಲ್ಲಿ ಜಸ್ಪ್ರಿತ್ ಬುಮ್ರಾ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಟ್ರೆಂಟ್ ಬೌಲ್ಟ್ 772 ಅಂಕಗಳಿಂದ ಮೊದಲ ಸ್ಥಾನದಲ್ಲಿದ್ದು, ಮುಜೀಬ್ ಉರ್ ರೆಹಮಾನ್ 701 ಅಂಕಗಳಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ.