ವಿಂಡೀಸ್-ಲಂಕಾ ಡೇ-ನೈಟ್ ಟೆಸ್ಟ್
Team Udayavani, Feb 8, 2018, 6:25 AM IST
ಕೊಲಂಬೊ: ವೆಸ್ಟ್ ಇಂಡೀಸ್ ತನ್ನ ನೆಲದಲ್ಲಿ ಮೊದಲ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ಆಯೋಜಿಸಲು ಮುಂದಡಿ ಇರಿಸಿದೆ. ಮುಂಬರುವ ಜೂನ್ ತಿಂಗಳಲ್ಲಿ ಶ್ರೀಲಂಕಾ ತಂಡದ ಆಗಮನದ ವೇಳೆ ಈ ಡೇ-ನೈಟ್ ಟೆಸ್ಟ್ ನಡೆಯಲಿದೆ.
ಇದು 3 ಪಂದ್ಯಗಳ ಟೆಸ್ಟ್ ಸರಣಿಯಾಗಿದ್ದು, ಜೂ. 23ರಿಂದ ಬಾರ್ಬಡಾಸ್ನ “ಕೆನ್ಸಿಂಗ್ಸ್ಟನ್ ಓವಲ್’ನಲ್ಲಿ ಆರಂಭವಾಗಲಿರುವ ಅಂತಿಮ ಪಂದ್ಯ ಹಗಲು-ರಾತ್ರಿಯಾಗಿ ನಡೆಯಲಿದೆ. ಈ ವಿಷಯವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ಮೇ ತಿಂಗಳಲ್ಲಿ ಕೆರಿಬಿಯನ್ ನಾಡಿಗೆ ಬಂದಿಳಿಯುವ ಶ್ರೀಲಂಕಾ ಕ್ರಿಕೆಟ್ ತಂಡ 2 ಅಭ್ಯಾಸ ಪಂದ್ಯಗಳನ್ನಾಡಿದ ಬಳಿಕ ಟೆಸ್ಟ್ ಸರಣಿ ಆರಂಭಿಸಲಿದೆ. ಮೊದಲ ಟೆಸ್ಟ್ ಜೂ. 6ರಿಂದ ಟ್ರಿನಿಡಾಡ್ ಆ್ಯಂಡ್ ಟೊಬಾಗೋದ “ಕ್ವೀನ್ಸ್ ಪಾರ್ಕ್ ಓವಲ್’ನಲ್ಲಿ ಆರಂಭವಾಗಲಿದೆ.