ಮೊದಲ ಸುತ್ತಿನಲ್ಲೇ ಸೋತ ಬೋಪಣ್ಣ
Team Udayavani, Aug 24, 2020, 10:29 PM IST
ನ್ಯೂಯಾರ್ಕ್: ಐದು ತಿಂಗಳ ಸುದೀರ್ಘ ವಿರಾಮದ ಬಳಿಕ ಟೆನಿಸ್ ಅಂಕಣಕ್ಕಿಳಿದ ರೋಹನ್ ಬೋಪಣ್ಣ ಮತ್ತು ಅವರ ಕೆನಡಾದ ಜತೆಗಾರ ಡೆನ್ನಿಸ್ ಶಪೊವಲೋವ್ “ವೆಸ್ಟರ್ನ್ ಆ್ಯಂಡ್ ಸದರ್ನ್ ಓಪನ್’ ಟೆನಿಸ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋಲಿಗೆ ಸಿಲುಕಿದ್ದಾರೆ.
ಪುರುಷರ ಡಬಲ್ಸ್ ಮುಖಾಮುಖಿಯಲ್ಲಿ 2019ರ ಯುಎಸ್ ಓಪನ್ ರನ್ನರ್ ಅಪ್ ಆಗಿರುವ ಮಾರ್ಸೆಲ್ ಗ್ರಾನೋಲರ್ -ಹೊರಾಶಿಯೊ ಝೆಬಲ್ಲೋಸ್ ಜೋಡಿ ಬೋಪಣ್ಣ-ಶಪೊವಲೋವ್ ವಿರುದ್ಧ 6-4, 7-6 (1) ಅಂತರದ ಜಯ ಸಾಧಿಸಿತು.
ಕ್ರೊವೇಶಿಯಾ ವಿರುದ್ಧ ಮಾರ್ಚ್ ನಲ್ಲಿ ಆಡಲಾದ ಡೇವಿಸ್ ಕಪ್ ಬಳಿಕ ರೋಹನ್ ಬೋಪಣ್ಣ ಸ್ಪರ್ಧಿಸಿದ ಮೊದಲ ಪಂದ್ಯ ಇದಾಗಿದೆ.
“5 ತಿಂಗಳ ಬಳಿಕ ನೇರವಾಗಿ ಕೋರ್ಟಿಗೆ ಇಳಿದು ಆಡಿದ ರೀತಿ ತೃಪ್ತಿ ತಂದಿದೆ. ಸತತ 3 ಡ್ನೂಸ್ ಅಂಕಗಳನ್ನು ಕಳೆದುಕೊಂಡದ್ದು ನಮಗೆ ಮುಳುವಾಯಿತು’ ಎಂದು ಬೋಪಣ್ಣ ಪ್ರತಿಕ್ರಿಯಿಸಿದ್ದಾರೆ.
ಸಿಸಿಪಸ್, ಗೊಫಿನ್ ಮುನ್ನಡೆ
ಪುರುಷರ ಸಿಂಗಲ್ಸ್ನಲ್ಲಿ ಗ್ರೀಕ್ನ ಸ್ಟೆಫನಸ್ ಸಿಸಿಪಸ್ ದ್ವಿತೀಯ ಸುತ್ತಿನಲ್ಲಿ ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ವಿರುದ್ಧ 6-1, 6-3ರಿಂದ ಜಯ ಸಾಧಿಸಿದರು. ಬೆಲ್ಜಿಯಂನ ಡೇವಿಡ್ ಗೊಫಿನ್ ಕ್ರೊವೇಶಿಯಾದ ಬೋರ್ನ ಕೊರಿಕ್ ಅವರನ್ನು 7-6 (6), 6-4ರಿಂದ ಮಣಿಸಿ 3ನೇ ಸುತ್ತಿಗೆ ಏರಿದರು. ಡೀಗೊ ಶಾರ್ಟ್ಸ್ಮನ್, ಕರೆನ್ ಕಶನೋವ್, ಗ್ರಿಗರ್ ಡಿಮಿಟ್ರೋವ್ ಮುನ್ನಡೆ ಸಾಧಿಸಿದ ಇತರ ಪ್ರಮುಖರು.