ಪಾಕ್ ವಿರುದ್ಧ ವಿಶ್ವಕಪ್ ಪಂದ್ಯ: ಈಗಲೇ ನಿರ್ಧಾರವಿಲ್ಲ
Team Udayavani, Feb 19, 2019, 12:30 AM IST
ನವದೆಹಲಿ: ಭಾರತ ಸರ್ಕಾರ ಹೇಳುವವರೆಗೆ ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಡುವುದಿಲ್ಲವೆಂದು ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲ ಹೇಳಿದ್ದಾರೆ.
ಆದರೆ ಪ್ರಸ್ತುತ ಏಕದಿನ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಆಡಲಾಗುತ್ತದೆಯೇ ಎಂಬ ಪ್ರಶ್ನೆಗೆ ರಾಜೀವ್ ನೇರ ಉತ್ತರ ನೀಡಿಲ್ಲ. ಈಗಲೇ ಅದರ ಬಗ್ಗೆ ಏನೂ ಹೇಳಲು ಸಾಧ್ಯವಿಲ್ಲ. ವಿಶ್ವಕಪ್ ಇನ್ನೂ ಬಹಳ ದೂರವಿದೆ. ಏನಾಗುತ್ತದೋ ಕಾದು ನೋಡೋಣ ಎಂದು ಹೇಳಿದ್ದಾರೆ. ಜನ ತಮ್ಮ ಸಿಟ್ಟನ್ನು ಈ ರೀತಿಯಾಗಿ ವ್ಯಕ್ತಪಡಿಸುತ್ತಿದ್ದಾರೆ. ಅದು ಸಹಜ ಕೂಡ. ಈ ವಿಚಾರದಲ್ಲಿ ಪಾಕಿಸ್ತಾನ ದ್ವಂದ್ವ ನೀತಿ ಅನುಸರಿಸುತ್ತಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರವಿದ್ದಾಗ (ಯುಪಿಎ) ಈ ಬಗ್ಗೆ ನಾವು ಟನ್ಗಟ್ಟಲೇ ದಾಖಲೆ ನೀಡಿದ್ದೇವೆ ಎಂದು ರಾಜೀವ್ ಶುಕ್ಲ ಹೇಳಿದ್ದಾರೆ.
ಮೇ 30ರಿಂದ ಇಂಗ್ಲೆಂಡ್ನಲ್ಲಿ ನಡೆಯಲಿರುವ ವಿಶ್ವಕಪ್ನಲ್ಲಿ ಜೂ.16ರಂದು ಪಾಕಿಸ್ತಾನ-ಭಾರತ ಪಂದ್ಯ ನಡೆಯಲಿದೆ. ಐಸಿಸಿ ನಿಯಮಗಳ ಪ್ರಕಾರ, ಜಾಗತಿಕ ಕೂಟದಲ್ಲಿ ಯಾವುದೇ ರಾಷ್ಟ್ರದ ವಿರುದ್ಧ ಆಡುವುದಿಲ್ಲವೆಂದು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಮಾಡಿದರೆ, ಆ ಕ್ರಿಕೆಟ್ ತಂಡದ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಐಸಿಸಿಗಿದೆ. ಆದರೆ ದ್ವಿಪಕ್ಷೀಯ ಸರಣಿಗಳಲ್ಲಿ ಆಡದಿರುವ ನಿರ್ಧಾರ ಮಾಡಲು ಯಾವುದೇ ತಂಡಕ್ಕೆ ಸಾಧ್ಯವಿದೆ.
ಭಾರತ, ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಆಡದೇ ಹಲವು ವರ್ಷಗಳೇ ಕಳೆದಿವೆ. ಪಾಕಿಸ್ತಾನ, ತನ್ನೊಂದಿಗೆ ಕ್ರಿಕೆಟ್ ಆಡುವಂತೆ ಒತ್ತಾಯಿಸುತ್ತಲೇ ಇದ್ದರೂ ಭಾರತ ಸತತವಾಗಿ ನಿರಾಕರಿಸುತ್ತಿದೆ. ಇದರಿಂದ ಪಾಕ್ ಕ್ರಿಕೆಟ್ ಮಂಡಳಿ ಆರ್ಥಿಕವಾಗಿ ಬಹಳ ದುರ್ಬಲವಾಗಿದೆ. ಈ ಬಗ್ಗೆ ಕಳೆದ ವರ್ಷದ ಕೊನೆಗೆ ಐಸಿಸಿ ನ್ಯಾಯಾಲಯದಲ್ಲಿ ವಾದವಿವಾದ ನಡೆದು, ತೀರ್ಪು ಭಾರತದ ಪರವಾಗಿ ಬಂದಿತ್ತು.