ವಿಶ್ವಕಪ್ ಶೂಟಿಂಗ್: ಚಿನ್ನಕ್ಕೆ ಗುರಿಯಿಟ್ಟ ಯಶಸ್ವಿನಿ
Team Udayavani, Sep 2, 2019, 5:35 AM IST
ರಿಯೋ ಡಿ ಜನೈರೊ: ಭಾರತದ ಯಶಸ್ವಿನಿ ಸಿಂಗ್ ದೆಸ್ವಾಲ್ ಅವರು ಅದ್ಭುತ ನಿರ್ವಹಣೆ ನೀಡುವ ಮೂಲಕ ಐಎಸ್ಎಸ್ಎಫ್ ವಿಶ್ವಕಪ್ ಶೂಟಿಂಗ್ನ 10 ಮೀ. ಏರ್ ಪಿಸ್ತೂಲ್ನಲ್ಲಿ ಚಿನ್ನಕ್ಕೆ ಗುರಿಯಿಟ್ಟಿದ್ದಾರೆ. ಮಾತ್ರವಲ್ಲದೇ ಭಾರತದ 9ನೇ ಸ್ಪರ್ಧಿಯಾಗಿ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದರು.
ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ಆಗಿರುವ 22ರ ಹರೆಯದ ಯಶಸ್ವಿನಿ ಎಂಟು ಸ್ಪರ್ಧಿಗಳ ಫೈನಲ್ ಹೋರಾಟದಲ್ಲಿ 236.7 ಅಂಕ ಗಳಿಸಿ ಉಕ್ರೈನಿನ ವಿಶ್ವ ನಂಬರ್ ವನ್ ಶೂಟರ್ ಒಲೆನಾ ಕೋಸ್ಟೆವಿಚ್ ಅವರನ್ನು ಉರುಳಿಸಿ ಚಿನ್ನ ಗೆದ್ದರು. ಮಾಜಿ ವಿಶ್ವ ಮತ್ತು ಒಲಿಂಪಿಕ್ ಚಾಂಪಿಯನ್ ಆಗಿರುವ ಕೋಸ್ಟೆವಿಚ್ 234.8 ಅಂಕ ಗಳಿಸಿ ಬೆಳ್ಳಿಗೆ ತೃಪ್ತಿಪಟ್ಟರೆ ಸರ್ಬಿಯಾದ ಜಾಸ್ಮಿನಾ ಮಿಲವೊನೊವಿಕ್ ಕಂಚು ಗೆದ್ದರು.
ಒಲಿಂಪಿಕ್ಸ್ಗೆ ಅರ್ಹತೆ
ಅಮೋಘ ನಿರ್ವಹಣೆ ನೀಡಿ ಗಮನ ಸೆಳೆದ ಯಶಸ್ವಿನಿ 2020ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿದರು. ಅವರು ಅರ್ಹತೆ ಪಡೆದ ಭಾರತದ 9ನೇ ಶೂಟರ್ ಆಗಿದ್ದಾರೆ. ಈ ಮೊದಲು ಮನು ಭಾಕರ್, ರಾಹಿ ಸನೊìಬಾಟ್, ದಿವ್ಯಾಂಶು ಸಿಂಗ್ ಪನ್ವಾರ್, ಅಭಿಷೇಕ್ ವರ್ಮ, ಸೌರಭ್ ಚೌಧರಿ, ಅಪೂರ್ವಿ ಚಾಂಡೇಲ, ಅಂಜುಮ್ ಮೌಡ್ಗಿಲ್ ಮತ್ತು ಸಂಜೀವ್ ರಾಜ್ಪೂತ್ ಈ ಮೊದಲು ಒಲಿಂಪಿಕ್ಸ್ ಗೆ ಅರ್ಹತೆ ಗಳಿಸಿದ್ದರು.
ಯಶಸ್ವಿನಿ ಅವರ ಚಿನ್ನ ರಿಯೋದಲ್ಲಿ ಭಾರತಕ್ಕೆ ಸಿಕ್ಕಿದ ಮೂರನೇ ಚಿನ್ನವಾಗಿದೆ. ಈ ಮೊದಲು ಅಭಿಷೇಕ್ ವರ್ಮ ಮತ್ತು ಎಲಾವೆನಿಲ್ ವಲರಿವಾನ್ ಅನುಕ್ರಮವಾಗಿ ಪುರುಷರ 10 ಮೀ. ಏರ್ ಪಿಸ್ತೂಲ್ ಮತ್ತು ವನಿತೆಯರ 10 ಮೀ. ಏರ್ ರೈಫಲ್ನಲ್ಲಿ ಚಿನ್ನ ಜಯಿಸಿದ್ದರು.
ಅರ್ಹತಾ ಸುತ್ತಿನಲ್ಲಿ ಭರ್ಜರಿ ನಿರ್ವಹಣೆ ನೀಡಿದ್ದ ಯಶಸ್ವಿನಿ ಫೈನಲ್ನಲ್ಲೂ ಅದೇ ನಿರ್ವಹಣೆ ಕಾಯ್ದುಕೊಂಡರು. 10.1, 10.5 ಮತ್ತು 10.1 ಅಂಕ ಗಳಿಸುವ ಮೂಲಕ ಮುನ್ನಡೆ ಕಾಯ್ದುಕೊಂಡ ಅವರು ಮುಂದಿನೆರಡು ಸುತ್ತಿನಲ್ಲಿ 10.6, 10.1 ಅಂಕ ಗಳಿಸಿ ಅಗ್ರಸ್ಥಾನಕ್ಕೇರಿದರು.
ಸೈನಿ ಉತ್ತಮ ನಿರ್ವಹಣೆ
ವನಿತೆಯರ 50 ಮೀ. ರೈಫಲ್ 3 ಪೊಸಿಸನ್ಸ್ ನಲ್ಲಿ ಭಾರತದ ಕಾಜಲ್ ಸೈನಿ ಗಮನಾರ್ಹ ನಿರ್ವಹಣೆ ನೀಡಿದ್ದು 22ನೇ ಸ್ಥಾನ ಗಳಿಸಿದ್ದಾರೆ. ಪ್ರೋನ್ ವಿಭಾಗದಲ್ಲಿ ಮಾಜಿ ವಿಶ್ವ ಚಾಂಪಿಯನ್ ಆಗಿರುವ ತೇಜಸ್ವಿನಿ ಸಾವಂತ್ 47ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು.