ವಿಶ್ವ ಕುಸ್ತಿ ಪಂದ್ಯಾಟ : ಚೊಚ್ಚಲ ಪದಕ ಗೆದ್ದ ವಿನೇಶ್ ಪೋಗಟ್
Team Udayavani, Sep 18, 2019, 9:16 PM IST
ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಅವರು ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ಪಂದ್ಯಾಟದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ವಿಶ್ವ ಕುಸ್ತಿ ಕಣದಲ್ಲಿ ತಾನು ಅನುಭವಿಸುತ್ತಿದ್ದ ಪದಕದ ಬರವನ್ನು ನೀಗಿಸಿಕೊಂಡಿದ್ದಾರೆ.
ವಿನೆಶ್ ಅವರು ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಎರಡು ಬಾರಿಯ ಕಂಚಿನ ಪದಕ ವಿಜೇತೆ ಗ್ರೀಸ್ ದೇಶದ ಮರಿಯಾ ಪ್ರಿವೊಲರ್ಕಿ ಅವರನ್ನು ಮಣಿಸುವ ಮೂಲಕ 53 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕನ್ನು ತನ್ನದಾಗಿಸಿಕೊಂಡರು. ಮತ್ತು ಈ ಮೂಲಕ ವಿಶ್ವಮಟ್ಟದ ಪ್ರತಿಷ್ಠಿತ ಕೂಟವೊಂದರಲ್ಲಿ ಪದಕ ಗೆದ್ದ ನಾಲ್ಕನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೂ ವಿನೇಶ್ ಪಾತ್ರರಾದರು.
ಇನ್ನೊಂದು ಶುಭ ಸುದ್ದಿಯೆಂದರೆ ವಿನೆಶ್ ಪೋಗಟ್ ಅವರು 53 ಕೆ.ಜಿ. ಫ್ರೀ ಸ್ಟೈಲ್ ವಿಭಾಗದಲ್ಲಿ ಟೋಕಿಯೋ ಒಲಂಪಿಕ್ ಕೂಟದಲ್ಲಿ ಪಾಲ್ಗೊಳ್ಳುವ ಅರ್ಹತೆಯನ್ನು ಸಂಪಾದಿಸಿಕೊಂಡಿದ್ದಾರೆ.
ಕಾಮನ್ ವೆಲ್ತ್ ಗೇಮ್ಸ್ ಮತ್ತು ಏಶಿಯನ್ ಗೇಮ್ಸ್ ಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದರೂ ವಿನೆಶ್ ಅವರಿಗೆ ವಿಶ್ವ ಚಾಂಪಿಯನ್ ಶಿಪ್ ಪದಕದ ಗೆಲುವು ಮರೀಚಿಕೆಯಾಗಿಯೇ ಇತ್ತು. ಆದರೆ ಪ್ರಸ್ತುತ ನೂರ್-ಸುಲ್ತಾನ್ ನಲ್ಲಿ ನಡೆಯುತ್ತಿರುವ ವಿಶ್ವ ಚಾಂಪಿಯನ್ ಕೂಟದಲ್ಲಿ ಪದಕ ಗೆಲ್ಲುವ ಮೂಲಕ ಪೋಗಟ್ ಅವರು ಈ ಕೊರತೆಯನ್ನು ನೀಗಿಸಿಕೊಂಡಿದ್ದಾರೆ.