ಜೆರಿಮಿ ಲಾಲ್ರಿನುಂಗಗೆ ಐತಿಹಾಸಿಕ ಚಿನ್ನ
Team Udayavani, Oct 10, 2018, 10:43 AM IST
ಬ್ಯೂನಸ್ ಐರಿಸ್: ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತ ಚೊಚ್ಚಲ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದೆ. ಮಿಜೋರಂನ ವೇಟ್‌ಲಿಫ್ಟರ್ ಜೆರಿಮಿ ಲಾಲ್ರಿನುಂಗ ಅವರು ಯೂತ್ ಒಲಿಂಪಿಕ್ಸ್ ನ ಪುರುಷರ 62 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆಗೈದಿದ್ದಾರೆ. ವಿಶ್ವ ಯೂತ್ ಬೆಳ್ಳಿ ವಿಜೇತ 15ರ ಹರೆಯದ ಲಾಲ್ರಿನುಂಗ ಅವರು ಸ್ನ್ಯಾಚ್‌ನಲ್ಲಿ 124 ಕೆ.ಜಿ., ಕ್ಲೀನ್ ಆ್ಯನ್ ಜರ್ಕ್‌ನಲ್ಲಿ 150 ಕೆ.ಜಿ. (ಒಟ್ಟು 274 ಕೆ.ಜಿ.) ಭಾರ ಎತ್ತುವ ಮೂಲಕ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟರು. ಟರ್ಕಿಯ ತೊಪ್ತಾಸ್ ಕಾನೆರ್ ಬೆಳ್ಳಿ ಗೆದ್ದರೆ ಕೊಲಂಬಿಯಾದ ವಿಲ್ಲರ್ ಎಸ್ಟಿವೆನ್ ಜೋಸ್ ಕಂಚು ತನ್ನದಾಗಿಸಿಕೊಂಡರು.
ಮಿಜೋರಂನ ಭರವಸೆಯ ಲಿಫ್ಟರ್ ಲಾಲ್ರಿನುಂಗ ಅ. 26ಕ್ಕೆ 16ರ ಹರೆಯಕ್ಕೆ ಕಾಲಿಡಲಿದ್ದಾರೆ. ಭವಿಷ್ಯದಲ್ಲಿ ಭಾರತೀಯ ವೇಟ್‌ಲಿಫ್ಟಿಂಗ್ ರಂಗದಲ್ಲಿ ದೊಡ್ಡ ಹೆಸರು ಮಾಡುವ ಭರವಸೆ ಮೂಡಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಲಾಲ್ರಿನುಂಗ ಯೂತ್ ವಿಭಾಗದಲ್ಲಿ ಬೆಳ್ಳಿ ಮತ್ತು ಜೂನಿಯರ್ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ಪದಕ ಗೆಲ್ಲುವ ವೇಳೆ ಅವರು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.
ಸ್ನೇಹಾ ಸೊರೆನ್ ನಿರಾಶೆ
ವನಿತೆಯರ 48 ಕೆ.ಜಿ. ವೇಟ್‌ಲಿಫ್ಟಿಂಗ್‌ನಲ್ಲಿ ಸ್ನೇಹಾ ಸೊರೆನ್ 5ನೇ ಸ್ಥಾನ ಪಡೆಯಲಷ್ಟೇ ಶಕ್ತರಾಗಿ ನಿರಾಶೆ ಮೂಡಿಸಿದ್ದಾರೆ. ಈಜು ಸ್ಪರ್ಧೆಯ 100 ಮೀ. ಬ್ಯಾಕ್‌ಸ್ಟ್ರೋಕ್ ಫೈನಲ್‌ನಲ್ಲಿ ಸ್ಪರ್ಧಿಸಿದ್ದ ಶ್ರೀಹರಿ ನಟರಾಜ್ 6ನೇ ಸ್ಥಾನ ಪಡೆದರು. ಟೇಬಲ್ ಟೆನಿಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅರ್ಚನಾ ಕಾಮತ್, ಮಾನವ್ ಥಕ್ಕರ್ ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಜಯ ಸಾಧಿಸಿದ್ದಾರೆ. ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ಕಠಿನ ಹೋರಾಟದಲ್ಲಿ ಬೋಸ್ನಿಕ್ ಅವರನ್ನು 23-21, 21-8 ಗೇಮ್‌ಗಳಿಂದ ಉರುಳಿಸಿ ಮುನ್ನಡೆದರು.
ಬಾಕ್ಸಿಂಗ್‌ನಿಂದ ಲಿಫ್ಟಿಂಗ್‌ಗೆ
ಲಾಲ್ರಿನುಂಗ ಅವರ ತಂದೆ ಲಾಲ್‌ನೈತ್ಲುಂಗ ಮಾಜಿ ಬಾಕ್ಸರ್ ಆಗಿದ್ದರು ಮತ್ತು ಏಳು ಬಾರಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಜಯಿಸಿದ್ದರು. ಹಾಗಾಗಿ ಲಾಲ್ರಿನುಂಗ ಕೂಡ ಎಳವೆಯಲ್ಲಿ ಬಾಕ್ಸಿಂಗ್‌ನಲ್ಲಿ ಅಭ್ಯಾಸ ಮಾಡುತ್ತಿದ್ದರು. ಆದರೆ ಎಂಟರ ಹರೆಯದ ವೇಳೆ ಕೋಚ್‌ಗಳ ಸಲಹೆ ಮೇರೆಗೆ ಅವರು ವೇಟ್‌ಲಿಫ್ಟಿಂಗ್ ಕ್ರೀಡೆಯತ್ತ ಒಲವು ವ್ಯಕ್ತಪಡಿಸಿದರು. 2011ರಲ್ಲಿ ಆರ್ಮಿ ನ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್ ಸ್ಕೌಟ್ಸ್‌ಗೆ ಸೇರಿ ಸತತ ಅಭ್ಯಾಸ ನಡೆಸಿದರು.
ಭಾರತಕ್ಕೆ ನಾಲ್ಕನೇ ಪದಕ
ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಯೂತ್ ಒಲಿಂಪಿಕ್ಸ್‌ನಲ್ಲಿ ತನ್ನ ಶ್ರೇಷ್ಠ ನಿರ್ವಹಣೆಯನ್ನು ದಾಖಲಿಸಿದೆ. ಭಾರತ ಈಗಾಗಲೇ ನಾಲ್ಕು ಪದಕ ಗೆದ್ದ ಸಾಧನೆ ಮಾಡಿದೆ. 2014ರಲ್ಲಿ ಚೀನದ ನಾಂಜಿಂಗ್‌ನಲ್ಲಿ ನಡೆದ ಈ ಹಿಂದಿನ ಯೂತ್ ಒಲಿಂಪಿಕ್ಸ್‌ನಲ್ಲಿ ಭಾರತ ಕೇವಲ ಎರಡು ಪದಕ (ಬೆಳ್ಳಿ, ಕಂಚು) ಜಯಿಸಿತ್ತು. ಸಿಂಗಾಪುರದಲ್ಲಿ 2010ರ ಉದ್ಘಾಟನಾ ಗೇಮ್ಸ್‌ನಲ್ಲಿ ಭಾರತ 6 ಬೆಳ್ಳಿ ಮತ್ತು 2 ಕಂಚಿನ ಪದಕ ಜಯಿಸಿತ್ತು.
ಭಾಕರ್‌ಗೆ ಚಿನ್ನ
ಏಶ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆಲ್ಲಲು ವಿಫಲರಾಗಿ ನಿರಾಸೆ ಅನುಭವಿಸಿದ್ದ ಮನು ಭಾಕರ್ ಅದ್ಭುತ ನಿರ್ವಹಣೆ ನೀಡಿ ಚಿನ್ನದ ಪದಕ ಗೆದ್ದರು. ಇದು ಯೂತ್ ಒಲಿಂಪಿಕ್ಸ್‌ನ ಶೂಟಿಂಗ್‌ನಲ್ಲಿ ಭಾರತಕ್ಕೆ ಒಲಿದ ಮೊದಲ ಚಿನ್ನವಾಗಿದೆ. ವನಿತೆಯರ 10 ಮೀ. ಏರ್ ಪಿಸ್ತೂಲ್‌ನಲ್ಲಿ 16ರ ಹರೆಯದ ಬಾಕರ್ 236.5 ಅಂಕ ಸಂಪಾದಿಸಿ ಚಿನ್ನ ಗೆದ್ದರು. 8 ಸ್ಪರ್ಧಿಗಳ ಫೈನಲ್ ಸುತ್ತಿನಲ್ಲಿ ಬಾಕರ್ 10.0 ಅಂಕದೊಂದಿಗೆ ಹೋರಾಟ ಆರಂಭಿಸಿದ್ದರು. ಅನಂತರವೂ ಉತ್ತಮ ನಿರ್ವಹಣೆ ನೀಡಿದ ಅವರು ಕೊನೆಯತನಕವೂ ಮುನ್ನಡೆ ಕಾಯ್ದುಕೊಂಡು ಚಿನ್ನ ಗೆದ್ದರು. ಅವರಿಗೆ ತೀವ್ರ ಪೈಪೋಟಿ ನೀಡಿದ ರಶ್ಯದ ಐನಾ ಎನಿನಾ 235.9 ಅಂಕ ಗಳಿಸಿ ಬೆಳ್ಳಿ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಐಪಿಎಲ್ ಟೈ ಮ್ಯಾಚ್-07: ಗುಜರಾತ್ ಲಯನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಮೇಲುಗೈ
ಮಹಿಳಾ ಟಿ20 ಚಾಲೆಂಜ್: ಮಿಥಾಲಿ ರಾಜ್-ಜೂಲನ್ ಗೋಸ್ವಾಮಿಗೆ ಇಲ್ಲ ಜಾಗ
ಐಪಿಎಲ್ 2022: ಡೆಲ್ಲಿ ಕ್ಯಾಪಿಟಲ್ಸ್-ಪಂಜಾಬ್ ಕಿಂಗ್ಸ್: ಮಸ್ಟ್ ವಿನ್ ಗೇಮ್
ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 24 ರನ್ ಗೆಲುವು
ಪ್ರಧಾನಿ ಮೋದಿ ನಿವಾಸಕ್ಕೆ ಆಟಗಾರರಿಗೆ ಆಹ್ವಾನ