3ನೇ ಕೋವಿಡ್ ಅಲೆಯಲ್ಲಿ ಪ್ರತಿ ದಿನ 1.2 ಲಕ್ಷ ಪ್ರಕರಣ: ತಜ್ಞರ ಎಚ್ಚರಿಕೆ : ಡಾ. ಸುಧಾಕರ್
Team Udayavani, Jan 19, 2022, 7:30 AM IST
ಬೆಂಗಳೂರು: ಕೊರೊನಾ 3ನೇ ಅಲೆಯಲ್ಲಿ ಪ್ರತಿ ದಿನ 1.2 ಲಕ್ಷ ಕೊವಿಡ್ ಪೊಸಿಟಿವ್ ಪ್ರಕರಣಗಳು ದಾಖಲಾಗಲವೆ ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿಯ ಸಭೆಯಲ್ಲಿ ವಚ್ಯುìವಲ್ ಮೂಲಕ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ರಾಜ್ಯದ 18 ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದೇವೆ.
ಕೊವಿಡ್ 3ನೇ ಅಲೆ ಎರಡು ಅಲೆಗಳಿಗಿಂತ ವೇಗವಾಗಿ ಹರಡುತ್ತಿದ್ದು, ಅಷ್ಟೇ ವೇಗವಾಗಿ ಕಡಿಮೆಯಾಗುತ್ತಿದೆ. ತಜ್ಞರ ಪ್ರಕಾರ ಪ್ರತಿ ದಿನ 1.20 ಲಕ್ಷ ಕೊವಿಡ್ ಪ್ರಕರಣಗಳು ದಾಖಲಾಗಲಿವೆ. ಫೆಬ್ರವರಿ 2 ಮತ್ತು 3 ನೇ ವಾರದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಲಿದೆ ಎಂದು ಹೇಳಿದರು.
ಜಿಲ್ಲೆಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಕೆಲವು ಸೂಚನೆ ಸಲಹೆ ಕೊಟ್ಟಿದ್ದೇವೆ. ತಪಾಸಣೆಯನ್ನು ಐಸಿಎಂಆರ್ ಮಾರ್ಗಸೂಚಿಯಂತೆ ಮಾಡಬೇಕು. 60 ವರ್ಷ ಮೇಲ್ಪಟ್ಟ ಮೇಲೆ ಹೆಚ್ಚಿನ ಕಾಳಜಿವಹಿಸಬೇಕು. ಪಾಸಿಟಿವ್ ಬರುವ ಬಗ್ಗೆ ಹೆಚ್ಚಿನ ಚಿಂತನೆ ಬೇಡ. ಪ್ರತಿ ಜಿಲ್ಲಾಕೇಂದ್ರ ಹಾಗೂ ಗ್ರಾಮಗಳಲ್ಲೂ ವಾರ್ ರೂಮ್ ಸ್ಥಾಪಿಸಬೇಕು. ಇದರಿಂದ ಆಸ್ಪತ್ರೆಗೆ ಹೋಗುವವರ ಸಂಖ್ಯೆ ಕಡಿಮೆ ಆಗುತ್ತೆ. ಹೋಮ್ ಐಷಲೋಷನ್ ಇದ್ದವರಿಗೆ ಕಿಟ್ಸ್ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ:ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ : ಏ.16ರಿಂದ ಮೇ 4 ರವರೆಗೆ ನಡೆಯಲಿದೆ ಪರೀಕ್ಷೆ
ವೈದ್ಯರು ಹಾಗೂ ದಾದಿಯರ ನಡಿಗೆ ಹಳ್ಳಿಯ ಕಡೆಗೆ ಪುನರಾರಂಭಕ್ಕೆ ಸೂಚಿಸಲಾಗಿದೆ. 264 ಆಕ್ಸಿಜನ್ ಪ್ಲಾಂಟ್‌ಗಳಲ್ಲಿ 222 ಸೇವೆಗೆ ಚಾಲನೆ ನೀಡಲಾಗಿದೆ. 17 ಘಟಕ ಸ್ಥಾಪನೆಗೆ ಕಾರ್ಪೊರೇಟ್ ಕಂಪನಿಗಳು ಇನ್ನೂ ಮುಂದೆ ಬಂದಿಲ್ಲ. ರಾಜ್ಯದಲ್ಲಿ ಮೂರನೇ ಡೋಸ್ ಲಸಿಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಇದುವರೆಗೂ ಶೇ 39 ಜನರಿಗೆ 3ನೇ ಡೋಸ್ ನೀಡಲಾಗಿದೆ. ಇದು ತೃಪ್ತಿದಾಯಕವಾಗಿಲ್ಲ. ಹೀಗಾಗಿ ಮುಂದಿನ ವಾರ ಇದರ ಅಭಿಯಾನ ಮಾಡುತ್ತೇವೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗಿದ್ದು, ಲಸಿಕೆ ತೆಗೆದುಕೊಳ್ಳದವರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಆದರೆ, ಸಾವಿನ ಪ್ರಮಾಣ ಕಡಿಮೆ ಇದೆ ಎಂದರು.
ಇದೇ ವೇಳೆ, ಆಹಾರ ಸಚಿವ ಉಮೇಶ ಕತ್ತಿ ಅವರು ಮಾಸ್ಕ್ ಹಾಕದಿರುವ ಬಗ್ಗೆ ನೀಡಿದ ಹೇಳಿಕೆಯನ್ನು ಡಾ. ಸುಧಾಕರ್ ಸಮರ್ಥಿಸಿಕೊಂಡಿದ್ದು, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಹೇಳಿದ್ದಾರೆ ಎಂದರು.
ವೀಕೆಂಡ್ ಕರ್ಫ್ಯೂ ಸಡಿಲಿಕೆ ಬಗ್ಗೆ ಗೊತ್ತಿಲ್ಲ. ಶುಕ್ರವಾರ ಸಭೆಯಲ್ಲಿ ನಾಯಕರು ಹಾಗೂ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಸಲಹೆ ಪಡೆದು ಸಿಎಂ ನಿರ್ಧಾರ ಮಾಡುತ್ತಾರೆ. ನಾವೇ ತೀರ್ಮಾನ ಮಾಡಲು ಆಗುವುದಿಲ್ಲ. ಈ ಬಗ್ಗೆ ಶುಕ್ರವಾರ ಗೊತ್ತಾಗುತ್ತದೆ.
-ಡಾ. ಕೆ.ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ.