3 ಡಿಸಿಎಂಗಳ ಅಗತ್ಯವೇನಿತ್ತು?
Team Udayavani, Aug 28, 2019, 3:05 AM IST
ಮೈಸೂರು: ಸಂವಿಧಾನದಲ್ಲಿ ಇಲ್ಲದ ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿ, ಮೂವರು ಉಪ ಮುಖ್ಯಮಂತ್ರಿಗಳನ್ನೇಕೆ ಮಾಡಬೇಕಿತ್ತು. ಈ ರೀತಿ ಮೂಗಿಗೆ ತುಪ್ಪ ಸವರುವ ಕೆಲಸವನ್ನೇಕೆ ಮಾಡಿದ್ದೀರಿ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ, ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಪಕ್ಷದ ನಿರ್ಧಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂರು ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿದ್ದರಿಂದ ಶಾಸಕರಲ್ಲಿ ಅಸಮಾಧಾನ ಜಾಸ್ತಿಯಾಗಿದೆ. ಖಾತೆ ಹಂಚಿಕೆ ಬಗ್ಗೆಯೂ ಈಗಾಗಲೇ ಹಲವು ಸಚಿವರಲ್ಲಿ ಅಸಮಾಧಾನವಿದೆ. ಈ ರೀತಿ ಕಚ್ಚಾಡಿಕೊಂಡೇ ದೋಸ್ತಿಗಳು ಮನೆಗೆ ಹೋದರು. ರಾಜ್ಯದ ಪರಿಸ್ಥಿತಿಯ ಬಗ್ಗೆ ಪಕ್ಷದ ಹೈಕಮಾಂಡ್‌ಗೆ ಸೂಕ್ತ ಮಾಹಿತಿ ನೀಡಬೇಕಿತ್ತು.
ಜತೆಗೆ, ಹೈಕಮಾಂಡ್ ಕೂಡ ಸರಿಯಾಗಿ ಯೋಚನೆ ಮಾಡಬೇಕಿತ್ತು. ಇಲ್ಲಿ ಯಡಿಯೂರಪ್ಪ-ಸಂತೋಷ್ ಎಂಬ ಪ್ರಶ್ನೆ ಬರುವುದಿಲ್ಲ. ಯಡಿಯೂರಪ್ಪ ಹಾಗೂ ಪಕ್ಷದ ಧುರೀಣರು ಕುಳಿತು ಈ ಬಗ್ಗೆ ಚರ್ಚಿಸಿ, ಹೊಂದಾಣಿಕೆ ಮಾಡಿಕೊಂಡು ಹೋಗಬೇಕೆಂದು ಸಲಹೆ ನೀಡಿದರು.
“ನಿಮ್ಮನ್ನು ಅಧಿಕಾರಕ್ಕೆ ತಂದ 17 ಶಾಸಕರು ಅತಂತ್ರರಾಗಿದ್ದಾರೆ. ಅವರಿಂದ ನೀವು ಸರ್ಕಾರ ರಚನೆ ಮಾಡಿರುವುದು ಎಂಬುದು ನೆನಪಿರಲಿ. ಅವರಿಲ್ಲದಿದ್ದರೆ ನಿಮ್ಮಿಂದ ಸರ್ಕಾರ ರಚಿಸಲು ಸಾಧ್ಯವಾಗುತ್ತಿತ್ತಾ?. ಸರ್ಕಾರ ರಚಿಸಲು ಬಹುಮತ ಇತ್ತಾ?’ ಎಂದು ಪಕ್ಷದ ನಾಯಕರನ್ನು ಪ್ರಶ್ನಿಸಿದರು.