ಒಂದೇ ಕುಟುಂಬದ ಐವರು ನಾಪತ್ತೆ
Team Udayavani, Jun 20, 2019, 3:00 AM IST
ಸಾಗರ: ಒಂದೇ ಕುಟುಂಬದ ಐವರು ನಾಪತ್ತೆಯಾಗಿರುವ ಘಟನೆ ತಾಲೂಕಿನ ಅರಲಗೋಡು ಗ್ರಾಪಂ ವ್ಯಾಪ್ತಿಯ ಆರೋಡಿ ಗ್ರಾಮದಲ್ಲಿ ನಡೆದಿದ್ದು, ಈ ಬಗ್ಗೆ ಜೋಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಡಿ ಗ್ರಾಮದ ಆಟೋ ಚಾಲಕ ರಾಜು ಎಂಬುವರ ಅತ್ತೆ ನೀಲಮ್ಮ (55), ಇವರ ಪತ್ನಿ ನಾಗರತ್ನ (39), ಪುತ್ರಿಯರಾದ ಕವನಶ್ರೀ (13), ಶ್ರೇಯನಾ (11) ಕೀರ್ತನಾ (6) ನಾಪತ್ತೆಯಾಗಿದ್ದು ದೂರು ದಾಖಲಾಗಿದೆ.
ಜೂ.14ರಂದು ನಾಗರತ್ನ ಅವರು ತನ್ನ ಗಂಡನ ವಿರುದ್ಧ ಜೋಗ ಠಾಣೆಯಲ್ಲಿ ದೂರು ದಾಖಲಿಸಿದ್ದ ಹಿನ್ನೆಲೆಯಲ್ಲಿ ಠಾಣೆಗೆ ಗಂಡ- ಹೆಂಡತಿ ಇಬ್ಬರನ್ನೂ ಕರೆಸಿ ರಾಜಿ ಪಂಚಾಯ್ತಿ ಮಾಡಿಸಿ, ಇಬ್ಬರೂ ಒಟ್ಟಾಗಿ ಸಂಸಾರ ಮಾಡುವಂತೆ ಪೊಲೀಸರು ಬುದ್ಧಿ ಹೇಳಿ ಕಳುಹಿಸಿದ್ದರು.
ನಂತರ, ರಾಜು ತನ್ನ ಪತ್ನಿ ನಾಗರತ್ನರನ್ನು ಕರೆದುಕೊಂಡು ತವರು ಮನೆಗೆ ಬಿಟ್ಟು ಬಂದಿದ್ದ. 15ರಂದು ಮಕ್ಕಳನ್ನು ನೋಡಲೆಂದು ಶಾಲೆಗೆ ಹೋಗಿದ್ದ. ಆದರೆ, ಆ ದಿನ ಮಕ್ಕಳು ಶಾಲೆಗೆ ಬಂದಿರಲಿಲ್ಲ. ಅಲ್ಲದೆ, ಪತ್ನಿ ನಾಗರತ್ನರ ತವರು ಮನೆಗೆ ಹೋದರೆ ಮನೆಗೆ ಬೀಗ ಹಾಕಲಾಗಿತ್ತು.
ಪತ್ನಿ ಹಾಗೂ ಅತ್ತೆಯ ಮೊಬೈಲ್ಗೆ ಕರೆ ಮಾಡಿದಾಗ ಸ್ವಿಚ್ಆಫ್ ಎನ್ನುವ ಉತ್ತರ ಬಂದಿದೆ. ಈ ಹಿನ್ನೆಲೆಯಲ್ಲಿ ಪತ್ನಿ, ಅತ್ತೆ ಹಾಗೂ ಮಕ್ಕಳನ್ನು ಹುಡುಕಿ ಕೊಡುವಂತೆ ರಾಜು, ಜೋಗ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.