ಶಾಸಕರ ಅಪಹರಣ ಆರೋಪ: ಕೋಲಾಹಲ

ಪರಿಶೀಲನೆ ನಡೆಸಿ ಶುಕ್ರವಾರ ವರದಿ ಸಲ್ಲಿಸುವಂತೆ ಗೃಹ ಸಚಿವರಿಗೆ ಸ್ಪೀಕರ್‌ ಸೂಚನೆ

Team Udayavani, Jul 19, 2019, 5:47 AM IST

ವಿಧಾನಸಭೆ: ‘ಕಾಂಗ್ರೆಸ್‌ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಬಿಜೆಪಿಯವರು ಅಪಹರಿಸಿ ಬಳಿಕ ಅನಾರೋಗ್ಯದ ಪ್ರಹಸನ ನಡೆಸಿದ್ದಾರೆ’ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಸೇರಿ ಕಾಂಗ್ರೆಸ್‌ನ ನಾಯಕರ ಆರೋಪ ಕೋಲಾಹಲ ಸೃಷ್ಟಿಸಿತು.

ಕಾಂಗ್ರೆಸ್‌ ಆರೋಪಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ಅವರು ಕೂಡಲೇ ಗೃಹ ಸಚಿವರು ಈ ಪ್ರಕರಣದ ಬಗ್ಗೆ ಪರಿಶೀಲನೆ ನಡೆಸಿ ಶುಕ್ರವಾರ ವರದಿ ಸಲ್ಲಿಸಬೇಕು. ಇಲ್ಲದಿದ್ದರೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಬೇಕಾಗುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಎಂ.ಬಿ.ಪಾಟೀಲ್ ಕ್ರಮ ವಹಿಸುವುದಾಗಿ ಹೇಳಿದರು.

ಗುರುವಾರ ಮಧ್ಯಾಹ್ನ 3.20ಕ್ಕೆ ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಡಿ.ಕೆ.ಶಿವಕುಮಾರ್‌, ಮಾಜಿ ಸಚಿವರೊಬ್ಬರು ನಮ್ಮ ಶಾಸಕರನ್ನು ಮುಂಬೈಗೆ ಹೊತ್ತೂಯ್ದು ಬಲವಂತವಾಗಿ ಆಸ್ಪತ್ರೆಯಲ್ಲಿ ಮಲಗಿಸಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ. ಬಿಜೆಪಿಯ ಮಾಜಿ ಸಚಿವ ಲಕ್ಷ್ಮಣ ಸವದಿ ಸೇರಿ ಕೆಲವರು ನಮ್ಮ ಶಾಸಕರನ್ನು ಮುಂಬೈಗೆ ಕರೆದೊಯ್ದಿದ್ದಾರೆ ಎಂದು ದೂರಿದರು. ಆಗ ಪ್ರತಿಪಕ್ಷ ಮುಖ್ಯ ಸಚೇತಕ ಸುನೀಲ್ ಕುಮಾರ್‌, ‘ಅದಕ್ಕೂ ನಮಗೂ ಏನು ಸಂಬಂಧ’ ಎಂದು ಕುಟುಕಿದರು.

ನಮ್ಮ ಶಾಸಕರ ಅಪಹರಣವಾಗಿದೆ: ನಮ್ಮ ಶಾಸಕರ ಅಪಹರಣವಾಗಿದ್ದು, ಅವರ ಕುಟುಂಬದವರು ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಸಭಾಧ್ಯಕ್ಷರು ನಮ್ಮ ಶಾಸಕರಿಗೆ ರಕ್ಷಣೆ ಕೊಡಬೇಕೆಂದು ಡಿ.ಕೆ.ಶಿವಕುಮಾರ್‌ ಕೋರಿದರು. ಆಗಲೂ ಬಿಜೆಪಿಯ ವಿ.ಸೋಮಣ್ಣ, ‘ಅದಕ್ಕೂ ನಮಗೂ ಏನು ಸಂಬಂಧ’ ಎಂದು ಪ್ರಶ್ನಿಸಿದರು. ಆಗ ಡಿ.ಕೆ.ಶಿವಕುಮಾರ್‌, ನಿಮಗೇನೂ ಸಂಬಂಧವಿಲ್ಲ. ನಮ್ಮ ಶಾಸಕರಿಗೆ ರಕ್ಷಣೆ ಕೊಡಿ ಎಂದು ಕೋರುತ್ತಿದ್ದೇವೆ ಎಂದು ಹೇಳಿದರು.

ಗಂಡಸಿ ಸಂತೆ ದನ, ಕುರಿ ವ್ಯಾಪಾರನಾ?: ಜೆಡಿಎಸ್‌ನ ಶಿವಲಿಂಗೇಗೌಡ, ಈ ರೀತಿಯ ಘಟನೆಗಳಿಂದ ಶಾಸಕರಿಗೆ ಭಯ ಬರುತ್ತಿದೆ. ರೆಸಾರ್ಟ್‌ನಲ್ಲಿದ್ದವರನ್ನು ಅಪಹರಿಸಿ ವಿಶೇಷ ವಿಮಾನದಲ್ಲಿ ಮುಂಬೈಗೆ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೇನು ಗಂಡಸಿ ಸಂತೆ ದನ, ಕುರಿ ವ್ಯಾಪಾರನಾ..? ಕುರ್ಚಿಗಾಗಿ ಇಷ್ಟೆಲ್ಲಾ ಯಾಕೆ ಮಾಡಬೇಕು? ಕಾಂಗ್ರೆಸ್‌ ಶಾಸಕರನ್ನು ಕರೆದೊಯ್ದ ಲಕ್ಷ್ಮಣ ಸವದಿ ಯಾರು? ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಹರಿಹಾಯ್ದರು.

ಶಾಸಕ ದಿನೇಶ್‌ ಗುಂಡೂರಾವ್‌ ಮಾತನಾಡಿ, ಶಾಸಕ ಶ್ರೀಮಂತ ಪಾಟೀಲ್ ಅವರು ಬುಧವಾರ ಸಭೆಯಲ್ಲಿ ಪಾಲ್ಗೊಂಡು ಆರೋಗ್ಯವಾಗಿದ್ದರು. ರಾತ್ರಿವರೆಗೆ ಜತೆಯಲ್ಲೇ ಇದ್ದು, ಬಳಿಕ ರೆಸಾರ್ಟ್‌ನಲ್ಲಿ ನಾಪತ್ತೆಯಾದರು. ಬಿಜೆಪಿಯವರು ಈ ನಾಟಕ ಮಾಡಿಸುತ್ತಿದ್ದಾರೆಂದು ನೇರ ಆರೋಪ ಮಾಡಿದರು. ಇದಕ್ಕೆ ಸಿಡಿಮಿಡಿಗೊಂಡ ಪ್ರತಿಪಕ್ಷ ಉಪನಾಯಕ ಗೋವಿಂದ ಕಾರಜೋಳ, ‘ನಿಮಗೆ ಮಾನ, ಮರ್ಯಾದೆ ಇದೆಯೇ? ಬಹುಮತವಿಲ್ಲದ ಸರ್ಕಾರ ನಿಮ್ಮದು. ಬಿಜೆಪಿ ಬಗ್ಗೆ ಯಾಕೆ ಆರೋಪಿಸುತ್ತೀರಿ’ ಎಂದು ಕಿಡಿ ಕಾರಿದರು.

ಬಿಜೆಪಿ ಕೈವಾಡ: ಬಳಿಕ ದಿನೇಶ್‌ ಗುಂಡೂರಾವ್‌, ಶ್ರೀಮಂತ ಪಾಟೀಲ್ ಆರೋಗ್ಯವಾಗಿಯೇ ಇದ್ದರು. ಅವರನ್ನು ಚೆನ್ನೈಗೆ ರಾತ್ರಿ ಕರೆದೊಯ್ದು ಬೆಳಗ್ಗೆ ಲಕ್ಷ್ಮಣ ಸವದಿ ಇತರರು ಮುಂಬೈಗೆ ಕರೆದೊಯ್ದಿದ್ದಾರೆ. ಅವರು ಅನಾರೋಗ್ಯಕ್ಕೆ ಒಳಗಾಗಿದ್ದರೆ ಚೆನ್ನೈಗೆ ತೆರಳಿ ಅಲ್ಲಿಂದ ಮುಂಬೈಗೆ ಹೋಗಲು ಹೇಗೆ ಸಾಧ್ಯ? ಅಲ್ಲದೇ ಮಹಾರಾಷ್ಟ್ರ ಸರ್ಕಾರ ಯಾವ ಕಾರಣಕ್ಕೆ ಅವರಿಗೆ ಪೊಲೀಸ್‌ ರಕ್ಷಣೆ ನೀಡುತ್ತಿದೆ? ಈ ಎಲ್ಲ ಕೃತ್ಯಗಳಲ್ಲಿ ಬಿಜೆಪಿ ಕೈವಾಡವಿದೆ ಎಂದು ಆರೋಪಿಸಿದರು.

ಈ ಬಗ್ಗೆ ಪೊಲೀಸ್‌ ತನಿಖೆ ನಡೆಸಬೇಕು. ಶ್ರೀಮಂತ ಪಾಟೀಲ್ ಅನಾರೋಗ್ಯಕ್ಕೆ ಒಳಗಾಗಿದ್ದಾರೆಂದು ತೋರಿಸಿ ‘ವಿಪ್‌’ ಉಲ್ಲಂಘನೆಗೆ ರಕ್ಷಣೆ ಪಡೆಯುವ ಪ್ರಯತ್ನವನ್ನು ಬಿಜೆಪಿ ಮಾಡಿಸುತ್ತಿದೆ. ಈ ಬಗ್ಗೆ ಪತ್ರ ಕೂಡ ಬರೆಯಲಾಗುವುದು. ಸಭಾಧ್ಯಕ್ಷರು ಕೂಡಲೇ ಗೃಹ ಇಲಾಖೆಯಿಂದ ತನಿಖೆ ನಡೆಸಲು ಆದೇಶಿಸಬೇಕು ಎಂದು ಮನವಿ ಮಾಡಿದರು.

ಆಗ ಬಿಜೆಪಿಯ ಸಿ.ಟಿ.ರವಿ ಮಾತನಾಡಿ, ಅಧಿಕಾರ ಕಳೆದುಕೊಳ್ಳುತ್ತಿರುವವರ ಸಂಕಟ ಅರ್ಥವಾಗುತ್ತದೆ. ಕಾಂಗ್ರೆಸ್‌ ಶಾಸಕರು ಯಾರ ವಶದಲ್ಲಿದ್ದರು? ಬೇಲಿಯೇ ಎದ್ದು ಮೇಯ್ದರೆ ಏನು ಮಾಡುವುದು? ಮುಖ್ಯಮಂತ್ರಿಗಳು, ಗೃಹ ಸಚಿವರು ಆಡಳಿತ ಪಕ್ಷದವರೇ ಆಗಿದ್ದು, ಶಾಸಕರು ಹೇಗೆ ನಾಪತ್ತೆಯಾಗುತ್ತಾರೆ? ನಾವು 105 ಶಾಸಕರಿದ್ದೇವೆ. ಆದರೆ ಸಂಖ್ಯಾಬಲವಿಲ್ಲದವರು ಮೈಮೇಲೆ ದೇವರು, ದೆವ್ವ ಬಂದಂತೆ ಆಡುತ್ತಿದ್ದಾರೆ. ಕೂಡಲೇ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ನಡೆಸಿ ಎಂದು ಆಗ್ರಹಿಸಿದರು.

ಸುದೀರ್ಘ‌ ಚರ್ಚೆ ಬಳಿಕ ಮಾತನಾಡಿದ ಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌, ಶಾಸಕ ಶ್ರೀಮಂತ ಪಾಟೀಲ್ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದರು, ಯಾವ ಫೋಟೋ, ಯಾರು ಯಾರೊಂದಿಗೆ ಹೋದರು ಎಂಬುದನ್ನು ನಾನು ತನಿಖೆ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ತಮ್ಮ ಶಾಸಕರನ್ನು ಅಪಹರಿಸಲಾಗಿದೆ ಎಂದು ಪತ್ರ ನೀಡಿದ್ದು, ಇದೊಂದು ಕ್ರಿಮಿನಲ್ ದೂರು ಎಂದು ಹೇಳಿದರು.

ಶ್ರೀಮಂತ ಪಾಟೀಲ್ ಅವರು ಸಹಿಯಿರುವ ಪತ್ರವೊಂದು ನನಗೆ ತಲುಪಿದೆ. ಅವರ ಪತ್ರ ಅವರ ಲೆಟರ್‌ ಪ್ಯಾಡ್‌ನ‌ಲ್ಲಿ ಇಲ್ಲ. ದಿನಾಂಕ ನಮೂದಿಸಿಲ್ಲ. ತೀವ್ರ ಹೃದಯ ಬೇನೆಯಿಂದ ಬಳಲುತ್ತಿದ್ದು, ಅಧಿವೇಶನಕ್ಕೆ ಗೈರಾಗುತ್ತಿರುವುದಾಗಿ ನಮೂದಿಸಲಾಗಿದೆ. ಸಂಜೀವಿನಿ ಆಸ್ಪತ್ರೆಯ ಲೆಟರ್‌ಹೆಡ್‌ನ‌ಲ್ಲಿ ಒಂದಿಷ್ಟು ವಿವರ ಸಲ್ಲಿಸಿದ್ದಾರೆ. ಬುಧವಾರ ಸಂಜೆ ಇಲ್ಲೇ ಇದ್ದರು. ಮುಂಬೈಗೆ ಯಾಕೆ ಹೋದರು? ಇದು ನೈಸರ್ಗಿಕವಾಗಿದೆ ಎಂದು ಹೇಗೆ ಹೇಳುವುದು ಎಂದರು.

ನಿಮ್ಮ ಅಧಿಕಾರ ಹೋರಾಟದಲ್ಲಿ ಸಾರ್ವಜನಿಕ ಬದುಕು ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಸಿದ್ದರಾಮಯ್ಯ ಅವರು ಬರೆದಿರುವ ಪತ್ರವನ್ನು ಗೃಹ ಸಚಿವರಿಗೆ ಕಳುಹಿಸಲಾಗುವುದು. ಗೃಹ ಸಚಿವರು ಶ್ರೀಮಂತ ಪಾಟೀಲ್ ಅವರ ಕುಟುಂಬದವರನ್ನು ಸಂಪರ್ಕಿಸಬೇಕು. ಎದೆ ನೋವು ಯಾವಾಗ ಬಂತು, ಹಿಂದೆ ಯಾವಾಗಲಾದರೂ ಬಂದಿತ್ತೆ ಎಂಬುದನ್ನು ಪರಿಶೀಲಿಸಿ ವಿಸ್ತೃತ ವರದಿ ಸಲ್ಲಿಸಬೇಕು. ಇಲ್ಲದಿದ್ದರೆ ಸೂಕ್ತ ರಕ್ಷಣೆ ನೀಡುವಂತೆ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಸೂಚಿಸಬೇಕಾಗುತ್ತದೆ ಎಂದು ಸೂಚನೆ ನೀಡಿದರು.

ಈ ಪ್ರಕರಣದಲ್ಲಿ ನೈಸರ್ಗಿಕ, ನ್ಯಾಯ ಇದೆ ಎನಿಸುತ್ತದೆ. ಇಲ್ಲಿ ನಡೆಯುವುದನ್ನೆಲ್ಲಾ ಜನ ಗಮನಿಸುತ್ತಿದ್ದಾರೆ ಎಂಬುದನ್ನು ಯಾಕೆ ಮರೆಯುತ್ತಿದ್ದೀರಿ? ಸಾವಾದ ಮನೆಯಲ್ಲಿ ಪುರೋಹಿತರಿಗೆ ಯಾವುದೇ ನೋವು ಇರುವುದಿಲ್ಲ. ಅವರು ತಮ್ಮ ಕರ್ಮ ನಿರ್ವಹಿಸಿ ದಕ್ಷಿಣೆ ಪಡೆದು ಹೋಗುತ್ತಿರುತ್ತಾರೆ. ಗೃಹ ಸಚಿವರು ಕೂಡಲೇ ಈ ಪ್ರಕರಣ ಸಂಬಂಧ ಶುಕ್ರವಾರ ವರದಿ ನೀಡಬೇಕು ಎಂದು ಸೂಚಿಸಿದರು. ಇದಕ್ಕೆ ಗೃಹ ಸಚಿವ ಎಂ.ಬಿ.ಪಾಟೀಲ್ ಕ್ರಮ ವಹಿಸುವುದಾಗಿ ಸದನಕ್ಕೆ ತಿಳಿಸುವ ಮೂಲಕ ಚರ್ಚೆಗೆ ತೆರೆ ಬಿತ್ತು.

ನಾವು ಶಾಸಕರನ್ನು ಮಾರಾಟ ವಸ್ತು ಮಾಡಿಲ್ಲ
‘ನಾನು ಈಗಾಗಲೇ ವಿಶ್ವಾಸ ಮತ ಯಾಚಿಸುವ ಭಾವನೆ ವ್ಯಕ್ತಪಡಿಸಿದ್ದೇನೆ. ನಾನು ಅಧಿಕಾರಕ್ಕೆ ಅಂಟಿ ಕೂರುವವನಲ್ಲ. ನಾನು ಯಾರಿಗೂ ದಮ್ಮಯ್ಯ ಹಾಕುವವನಲ್ಲ. 2008-13ನೇ ಅವಧಿಯಲ್ಲಿ ನಡೆದ ಘಟನಾವಳಿಗಳು ನೆನಪಿರಲಿ. ನಾವು ಶಾಸಕರನ್ನು ದನಗಳಾಗಿ ಮಾರಾಟ ವಸ್ತು ಮಾಡಿಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ನುಡಿದರು. ಕಾಂಗ್ರೆಸ್‌ ಶಾಸಕ ಶ್ರೀಮಂತ ಪಾಟೀಲ್ ಅವರ ವಿಚಾರವನ್ನು ವಾಟ್ಸಾಪ್‌ನಲ್ಲಿ ಹರಿಬಿಟ್ಟವರು ಯಾರು? ಎಲ್ಲಿ ಅವರನ್ನು ಇರಿಸಲಾಗಿದೆ? ಅವರೊಂದಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದವರ ಟಿಕೆಟ್ ವಿವರವೂ ಇದೆ. ಸದಸ್ಯರಿಗೆ ರಕ್ಷಣೆ ನೀಡಲು ಅಧಿಕಾರ ಬಳಸಿ ಎಂದು ಶಾಸಕರು ಕೋರಿದ್ದಾರೆ. ವಿಶ್ವಾಸ ಮತ ಹಾಕುವ ದಿನ ಸಂಖ್ಯಾಬಲ ಸಾಬೀತುಪಡಿಸಬೇಕಾಗುತ್ತದೆ. 2009ರ ಪ್ರಹಸನ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ