ಪಕ್ಷ ವಿರೋಧಿ ಹೇಳಿಕೆ ನೀಡುವವರ ವಿರುದ್ಧ ಕ್ರಮ

Team Udayavani, Jul 25, 2018, 6:00 AM IST

ಬೆಂಗಳೂರು: “ಪಕ್ಷ ವಿರೋಧಿ ಚಟುವಟಿಕೆ, ಸಮ್ಮಿಶ್ರ ಸರ್ಕಾರ ಬಗ್ಗೆ ವಿರೋಧಿ ಹೇಳಿಕೆಗಳನ್ನು ನೀಡುವವರು ಎಷ್ಟೇ ದೊಡ್ಡವರಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಎಚ್ಚರಿಕೆ ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕಾಂಗ ಪಕ್ಷದ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಜೆಡಿಎಸ್‌ ಜತೆಗಿನ ಮೈತ್ರಿ ಕುರಿತು ಹೇಳಿಕೆ ನೀಡಿದ್ದ ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಹಾಗೂ ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಅವರಿಗೆ ನೋಟಿಸ್‌ ನೀಡಿರುವುದನ್ನು ಸಮರ್ಥಿಸಿಕೊಂಡರು. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಬಗ್ಗೆ ಗಮನ ಹರಿಸಬೇಕಿದೆ. ಅದನ್ನು ಬಿಟ್ಟು ಯಾವುದೇ ನಾಯಕರು ಸರ್ಕಾರದ ಬಗ್ಗೆ ಅನಗತ್ಯ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.

ಜೆಡಿಎಸ್‌ಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟರೆ, ಕಾಂಗ್ರೆಸ್‌ಗೆ ಹಾಸನ ಬಿಟ್ಟು ಕೊಡುವಂತೆ ಮಾಜಿ ಸಚಿವ ಎ.ಮಂಜು ಕೇಳಿರುವ ಬಗ್ಗೆ ಮಾಹಿತಿಯಿಲ್ಲ. ಪಕ್ಷದ ಸೂಚನೆಯಂತೆ ನಡೆಯುವುದಾಗಿ ಅವರು ಹೇಳಿದ್ದಾರೆ ಎಂದರು. ಇದೇ ವೇಳೆ, ಸಿಎಂ ಕುಮಾರ ಸ್ವಾಮಿ ಖಾಸಗಿ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡದಿರಲು ಕೈಗೊಂಡಿರುವ ತೀರ್ಮಾನಕ್ಕೆ ಪ್ರತಿಕ್ರಿಯಿುಸಿರುವ ಅವರು ಮೈತ್ರಿ ಸರ್ಕಾರದಲ್ಲಿ ಯಾವುದೇ ತೀರ್ಮಾನ ಕೈಗೊಳ್ಳುವ ಮೊದಲು ಚರ್ಚಿಸುವುದು ಉತ್ತಮ ಎಂದರು. ಸಂಪುಟ ವಿಸ್ತರಣೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಆಷಾಢ ಮಾಸದಲ್ಲಿ ಸಂಪುಟ ಸೇರಲು ಕೆಲವರಿಗೆ ಇಷ್ಟವಿಲ್ಲ. ಆಷಾಢದ ನಂತರ ಸಂಪುಟ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ