ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಅಧಿಕಾರಿಗಳ ವಿರುದ್ಧ ಕ್ರಮ: ಆರಗ ಜ್ಞಾನೇಂದ್ರ ಎಚ್ಚರಿಕೆ
ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡ ಪೊಲೀಸರು..!
Team Udayavani, Jan 19, 2022, 4:32 PM IST
ಬೆಂಗಳೂರು : ಅಪರಾಧ ಪ್ರಕರಣದಲ್ಲಿ ಭಾಗಿಯಾಗುವ ಯಾವುದೇ ಪೊಲೀಸ್ ಸಿಬ್ಬಂದಿಗಳ ವಿರುದ್ಧ, ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ, ಇಂದು, ಮಾತನಾಡುತ್ತಿದ್ದ, ಸಚಿವರು, ” ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ, ಸಾರ್ವಜನಿಕರ ಜೀವ ಹಾಗೂ ಆಸ್ತಿಪಾಸ್ತಿಗಳನ್ನು ರಕ್ಷಿಸಬೇಕಾದ, ಹೊಣೆಗಾರಿಕೆ ಹೊಂದಿರುವ, ಪೊಲೀಸ್ ಸಿಬ್ಬಂದಿಗಳೇ ಅಪರಾಧ ಎಸಗುವುದನ್ನು, ಸಹಿಸಲಾಗುವುದಿಲ್ಲ.ರಾಜ್ಯದಲ್ಲಿ ಸರಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳಿದ್ದು ಕೇವಲ ಬೆರೆಣಿಕೆಯಷ್ಟು ಸಿಬ್ಬಂದಿಗಳು ಮಾಡುವ ಕೆಟ್ಟ ಕೆಲಸದಿಂದ, ಇಡೀ ಇಲಾಖೆಯ ಬಗ್ಗೆ, ಸಾರ್ವಜನಿಕರಲ್ಲಿ, ಋಣಾತ್ಮಕ ಭಾವನೆ ಬೆಳೆಯಲು ಕಾರಣವಾಗುತ್ತದೆ, “ಅಂಥಹ ಸಿಬ್ಬಂದಿ ಗಳನ್ನು ಸಸ್ಪೆಂಡ್ ಅಷ್ಟೇ ಅಲ್ಲಾ, ಡಿಸ್ ಮಿಸ್ ಮಾಡುವ ಬಗ್ಗೆಯೂ ಸೂಚಿಸಲಾಗುವುದು” ಎಂದರು.
ಮುಖ್ಯಮಂತ್ರಿಗಳ ನಿವಾಸದ ಸಮೀಪ, ಭದ್ರತೆಗೆಂದು ನಿಯೋಜಿಸಲಾದ ಇಬ್ಬರು ಪೊಲೀಸರು ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿಕೊಡಿರುವುದು ಬೆಳಕಿಗೆ ಬಂದಿದೆ. ” ಇಂಥಹ ಕೃತ್ಯವನ್ನು ಪತ್ತೆ ಮಾಡಿ ಕಾನೂನು ಕ್ರಮ ತೆಗೆದುಕೊಂಡ ಅಧಿಕಾರಿಗಳನ್ನು ಅಭಿನಂದಿಸುವೆ ಹಾಗೂ ಸೂಕ್ತ ಬಹುಮಾನ ಘೋಷಿಸಲು ನಿರ್ದೇಶನ ನೀಡಿದ್ದೇನೆ” ಎಂದು ಸಚಿವರು ತಿಳಿಸಿದರು.