10611 ಪದವೀಧರ ಶಿಕ್ಷಕರ ಹುದ್ದೆಗೆ ಅರ್ಜಿ
Team Udayavani, Mar 6, 2019, 12:30 AM IST
ಬೆಂಗಳೂರು: ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳು ಸೇರಿ ರಾಜ್ಯದ 34 ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 10,611 ಪದವೀಧರ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಸರ್ಕಾರ ಹೊಸದಾಗಿ 10,611 ಶಿಕ್ಷಕರನ್ನು ಶೀಘ್ರ ನೇಮಕ ಮಾಡಿಕೊಳ್ಳಲಿದೆ ಎಂದು “ಉದಯವಾಣಿ’ ಜ.31ರಂದು ವಿಸ್ತೃತವಾದ ವರದಿ ಪ್ರಕಟಿಸಿತ್ತು.
ಈ ಎಲ್ಲ ಹುದ್ದೆಗಳನ್ನು ಜಿಲ್ಲಾ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಪದವೀಧರ ಪ್ರಾಥಮಿಕ ಶಿಕ್ಷಕ(6 ಮತ್ತು 8ನೇ ತರಗತಿ) ವೃಂದದ ಹುದ್ದೆಗಳಿಗೆ ಅನ್ವಯವಾಗುವ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅನುಗುಣವಾಗಿ ಅರ್ಹ ವಿದ್ಯಾರ್ಹತೆ ಉಳ್ಳ ಅಭ್ಯರ್ಥಿ ಏ.10ರೊಳಗೆ ಕೇಂದ್ರೀಕೃತ ದಾಖಲಾತಿ ಘಟಕ(ಸಿಎಸಿ)ದ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲೇ ಅರ್ಜಿ ಸಲ್ಲಿಸಬೇಕು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಹೈ-ಕ ಪ್ರದೇಶದ ಜಿಲ್ಲೆಗಳ ಶೇ.80ರಷ್ಟು ಸ್ಥಳೀಯ ವೃಂದ ಮತ್ತು ಬಿಬಿಎಂಪಿ ಪ್ರದೇಶದ ಶಾಲೆಗಳ ಶೇ. 8ರಷ್ಟು ರಾಜ್ಯ ಮಟ್ಟದ ಸ್ಥಳೀಯ ವೃಂದದ ಹುದ್ದೆಗೆ 1ನೇ ಪರೀಕ್ಷೆ ಮೇ 18 ಮತ್ತು 19ರಂದು ನಡೆಯಲಿದೆ. ಹೈ-ಕ ಜಿಲ್ಲೆಗಳ ಶೇ.20, ಬಿಬಿಎಂಪಿ ವ್ಯಾಪ್ತಿ ಶಾಲೆಗಳ ಶೇ.92ರ ಉಳಿದ ವೃಂದ ಮತ್ತು ಇತರೆ ಜಿಲ್ಲೆಗಳ ಶೇ.100ರಷ್ಟು ಹುದ್ದೆಗಳಿಗೆ 2ನೇ ಪರೀಕ್ಷೆ ಮೇ 25 ಮತ್ತು 26ರಂದು ನಡೆಯಲಿದೆ. ನೇಮಕಾತಿ ನಿಯಮಗಳು, ಮೀಸಲಾತಿ ನಿಯಮಗಳು, ಸರ್ಕಾರದ ಆದೇಶ ಸಹಿತವಾಗಿ ಎಲ್ಲ ಮಾಹಿತಿ http://www.schooleducation.kar.nic.in/ನಲ್ಲಿ ಲಭ್ಯವಿದೆ.