ಡಿಸಿ ಕಚೇರಿ ಆವರಣದಲ್ಲೇ ಆತ್ಮಹತ್ಯೆಗೆ ಯತ್ನ
Team Udayavani, Jun 27, 2019, 3:00 AM IST
ಧಾರವಾಡ: ಅತಿ ಬಡ್ಡಿ ಆಸೆಯಿಂದ ಮೋಸಕ್ಕೆ ಒಳಗಾಗಿದ್ದಕ್ಕೆ ಮನನೊಂದು ಮನೆ ಬಿಟ್ಟು ಹೋಗಿದ್ದ ಶಿಕ್ಷಕರೊಬ್ಬರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ. ಯಾದಗಿರಿ ಜಿಲ್ಲೆಯ ಮಗದಪುರ ತಾಂಡಾ ಶಿಕ್ಷಕ, ಮೂಲತಃ ಕುಂದಗೋಳ ತಾಲೂಕಿನ ರೊಟ್ಟಿಗವಾಡದ ದ್ಯಾಮಣ್ಣ ಮೇಟಿ (45) ಆತ್ಮಹತ್ಯೆಗೆ ಯತ್ನಿಸಿದವರು.
ಕಲಘಟಗಿಯ ಸುರಭಿ ಟ್ರೇಡರ್ಸ್ ಫೈನಾನ್ಸ್ ಕಂಪನಿಯ ಬಡ್ಡಿ ಆಮಿಷಕ್ಕೆ ಒಳಗಾಗಿ ಹಣ ಕಳೆದುಕೊಂಡಿದ್ದಕ್ಕೆ ಮನನೊಂದು 3 ತಿಂಗಳು ಹಿಂದೆ ಮನೆ ಬಿಟ್ಟು ಹೋಗಿದ್ದ ದ್ಯಾಮಣ್ಣ, ಬುಧವಾರ ನ್ಯಾಯ ಕೊಡಿಸುವಂತೆ ಮನವಿ ಮಾಡಲು ಜಿಲ್ಲಾಧಿಕಾರಿಗೆ ಕಚೇರಿಗೆ ಬಂದಿದ್ದರು.
ಈ ವೇಳೆ, ಶೌಚಾಲಯಕ್ಕೆ ಹೋಗಿ ಪಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಲ್ಲದೇ ಬ್ಲೆಡ್‌ನಿಂದ ಎಡಗೈ ಕೊಯ್ದುಕೊಂಡಿದ್ದಾರೆ. ಅಸ್ವಸ್ಥಗೊಂಡು ಬಿದ್ದಿದ್ದ ದ್ಯಾಮಣ್ಣ ಅವರನ್ನು ಕೂಡಲೇ ಸ್ಥಳದಲ್ಲಿದ್ದವರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.