ಡೆತ್‌ನೋಟ್‌ನಲ್ಲಿ ಹೆಸರಿದ್ದ ಮಾತ್ರಕ್ಕೆ ಜಾಮೀನು ನಿರಾಕರಿಸುವಂತಿಲ್ಲ
Team Udayavani, Dec 5, 2020, 8:26 AM IST
ಬೆಂಗಳೂರು: “ಆತ್ಮಹತ್ಯೆ ಮಾಡಿಕೊಂಡವರು ಡೆತ್‌ನೋಟ್‌ನಲ್ಲಿ ಯಾರದ್ದಾದರೂ ಹೆಸರು ಬರೆದಿದ್ದ ಮಾತ್ರಕ್ಕೆ ಅವರೇ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂದು ತೀರ್ಮಾನಿಸಿ ಜಾಮೀನು ನಿರಾಕರಿಸಲಾಗದು’ ಎಂದು ಹೈಕೋರ್ಟ್ ಹೇಳಿದೆ.
ಮಹಿಳೆಯೊಬ್ಬರು ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್‌ನಲ್ಲಿ ಹೆಸರಿದ್ದ ಕಾರಣಕ್ಕೆ ಬಂಧನಕ್ಕೊಳಗಾಗಿದ್ದ ಬೆಂಗಳೂರಿನ ಉದ್ಯಮಿ ಸಲ್ಲಿಸಿದ್ದ ಜಾಮೀನು ಅರ್ಜಿ ಕುರಿತ ತೀರ್ಪಿನಲ್ಲಿ ಹೈಕೋರ್ಟ್ ಈ ರೀತಿ ಅಭಿಪ್ರಾಯಪಟ್ಟಿದೆ.
ನಗರದ ಮನೆಯೊಂದರಲ್ಲಿ ಮಹಿಳೆಯೊಬ್ಬರು 2020ರ ಜು. 28ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್‌ನೋಟ್‌ನಲ್ಲಿ ಉದ್ಯಮಿ ಸೇರಿ ಮೂವರ ಹೆಸರಿತ್ತು. ಮೃತರ ಪುತ್ರ ನೀಡಿದ್ದ ದೂರು ಆಧರಿಸಿ ಐಪಿಸಿ ಸೆಕ್ಷನ್ 306ರ (ಆತ್ಮಹತ್ಯೆಗೆ ಪ್ರಚೋದನೆ) ಅಡಿ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ಉದ್ಯಮಿಯನ್ನು ಬಂಧಿಸಿದ್ದರು.
ಉದ್ಯಮಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ವೇಳೆ ಪ್ರಾಸಿಕ್ಯೂಷನ್ ಪರ ವಕೀಲರು ವಾದ ಮಂಡಿಸಿ, ಮಹಿಳೆ ಮತ್ತು ಉದ್ಯಮಿ ನಡುವೆ ಹಲವು ವರ್ಷಗಳಿಂದ ಹಣಕಾಸು ವ್ಯವಹಾರ ಇತ್ತು. ಉದ್ಯಮಿ ಹಣ ನೀಡದೆ ಸತಾಯಿಸಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಿಂದ ಬೇಸತ್ತು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್‌ನಲ್ಲಿ ಉದ್ಯ ಮಿಯ ಹೆಸರಿದೆ. ಆದ್ದರಿಂದ ಜಾಮೀನು ನೀಡಬಾರದು ಎಂದು ಕೋರಿದ್ದರು.