ಸಿಇಟಿ ಸಿದ್ಧತೆಗೆ ಆರಂಭವಾಗದ “ವಿಕಸನ’
Team Udayavani, May 19, 2022, 6:30 AM IST
ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ) ತಯಾರಿ ನಡೆಸುವ ಬಗ್ಗೆ ಡಿಡಿ ಚಂದನ ವಾಹಿನಿಯಲ್ಲಿ ಪ್ರತೀ ವರ್ಷ ಪ್ರಸಾರವಾಗುತ್ತಿದ್ದ “ವಿಕಸನ’ ಕಾರ್ಯಕ್ರಮ ಈ ಬಾರಿ ಇನ್ನೂ ಆರಂಭವಾಗದಿರುವುದು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ.
ಪ್ರತೀ ವರ್ಷ ಪರೀಕ್ಷೆಗೂ ಒಂದು ತಿಂಗಳು ಮೊದಲೇ “ವಿಕಸನ’ ಕಾರ್ಯಕ್ರಮವನ್ನು ಆರಂಭಿಸಲಾಗುತ್ತಿತ್ತು. ಚಂದನ ವಾಹಿನಿಯಲ್ಲಿ ಬೆಳಗ್ಗೆ ಮತ್ತು ಸಂಜೆ ತಲಾ ಒಂದು ಗಂಟೆಯಂತೆ 30 ದಿನಗಳಲ್ಲಿ 60 ತರಗತಿಗಳನ್ನು ಪ್ರಸಾರ ಮಾಡುತ್ತಿತ್ತು. ಆದರೆ, ಈ ಬಾರಿ ಪರೀಕ್ಷೆಗೆ ತಿಂಗಳಿಗೂ ಕಡಿಮೆ ಸಮಯವಿದೆ. ಆದರೂ ಕಾರ್ಯಕ್ರಮ ಆರಂಭಿಸುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.
ಏನಿದು ವಿಕಸನ ಕಾರ್ಯಕ್ರಮ?
ಪರೀಕ್ಷಾ ಪ್ರಾಧಿಕಾರ ಹಾಗೂ ಚಂದನ ವಾಹಿನಿ ಸಹಯೋಗದಲ್ಲಿ ಸಿಇಟಿ ಪರೀಕ್ಷೆಗೆ ವಿದ್ಯಾರ್ಥಿಗಳು ಹೇಗೆ ಸಿದ್ಧತೆ ನಡೆಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಾವ ರೀತಿಯಲ್ಲಿ ಎದುರಿಸಬೇಕು. ಉತ್ತಮ ಅಂಕ ಗಳಿಸಲು ಹೇಗೆ ತಯಾರಿ ನಡೆಸಬೇಕು? ಯಾವ ಯಾವ ವಿಷಯಗಳಿಗೆ ಹೆಚ್ಚಿನ ಗಮನ ನೀಡಬೇಕು?
ಪರೀಕ್ಷಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳ ಮನಸ್ಥಿತಿ ಹೇಗಿರಬೇಕು…. ಹೀಗೆ ಹತ್ತಾರು ರೀತಿಯಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ “ವಿಕಸನ’ ಎನ್ನುವ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿತ್ತು. ವಿಷಯ ತಜ್ಞರು ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ಬೋಧನೆ ಮಾಡುತ್ತಿದ್ದರು. ಇದು ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ದಲ್ಲಿ ಸಾಕಷ್ಟು ಪ್ರಯೋಜನಕಾರಿ ಯಾಗುತ್ತಿತ್ತು. ಜೂ. 16ರಿಂದ 18ರ ವರೆಗೆ ಸಿಇಟಿ ಪರೀಕ್ಷೆ ನಡೆಯಲಿದೆ. ಸರಕಾರ ಕೂಡಲೇ ಎಚ್ಚೆತ್ತುಕೊಂಡು ಕಾರ್ಯಕ್ರಮ ಪ್ರಸಾರ ಮಾಡಿದರೆ ಅನುಕೂಲವಾಗಲಿದೆ ಎಂದು ಪೋಷ ಕರು ಸರಕಾರವನ್ನು ಆಗ್ರಹಿಸಿದ್ದಾರೆ.
ಗ್ರಾಮೀಣ ವಿದ್ಯಾರ್ಥಿಗಳಿಗೆ ಹಿನ್ನಡೆ
ಡಿಡಿ ಚಂದನದಲ್ಲಿ ಪ್ರಸಾರವಾಗುವ ಕಾರ್ಯಕ್ರಮವು ಕುಗ್ರಾಮಗದಲ್ಲಿರುವ ವಿದ್ಯಾರ್ಥಿಗಳಿಗೂ ತಲುಪುತ್ತಿತ್ತು. ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಕೊನೆಯಾಗಿದೆ. ಆದರೂ ಕಾರ್ಯಕ್ರಮ ಪ್ರಸಾರ ಮಾಡುವ ವೇಳಾಪಟ್ಟಿಯನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ನಗರ ಪ್ರದೇಶದ ವಿದ್ಯಾರ್ಥಿಗಳು ಕೋಚಿಂಗ್‌ಗೆ ಹೋಗಿ ಸಿದ್ಧತೆ ನಡೆಸುತ್ತಾರೆ. ಆದರೆ, ಗ್ರಾಮೀಣ ವಿದ್ಯಾರ್ಥಿಗಳು ಅದರಲ್ಲಿಯೂ ಕಡುಬಡತನದಲ್ಲಿರುವ ವಿದ್ಯಾರ್ಥಿಗಳು ಸರಕಾರದ ಪ್ರಾಯೋಜಿತ ಕಾರ್ಯಕ್ರಮಗಳನ್ನೇ ನೆಚ್ಚಿಕೊಂಡಿರುತ್ತಾರೆ. ಈ ಕಾರ್ಯಕ್ರಮ ಆರಂಭಿಸದಿರುವುದರಿಂದ ಅವರಿಗೆ ಭಾರೀ ಹಿನ್ನಡೆಯಾಗಿದೆ.
ವಿಕಸನ ಕಾರ್ಯಕ್ರಮವನ್ನು ಯಾವಾಗದಿಂದ ಆರಂಭಿಸಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಕೇವಲ ಒಂದು ತಿಂಗಳು ಮಾತ್ರ ಸಮಯವಿದೆ. ಸಾಧ್ಯವಾದರೆ, ಮುಂದಿನ ವಾರದಿಂದ ಆರಂಭಿಸಲು ಸಿದ್ಧತೆ ನಡೆಸಲಾಗುವುದು.
– ಎಸ್. ರಮ್ಯಾ, ಕಾರ್ಯನಿರ್ವಾಹಕ ನಿರ್ದೇಶಕರು, ಕೆಇಎ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಠ್ಯ ಪುಸ್ತಕದಲ್ಲಿ ಕನಕದಾಸರ ಕಡೆಗಣನೆ : ಕಾಗಿನೆಲೆ ಶ್ರೀ ಆಕ್ರೋಶ
ಬಿಜೆಪಿಯವರು ಯಾಕೆ ದಲಿತರನ್ನ ಸಿಎಂ ಮಾಡಲಿಲ್ಲ?: ಎಂ.ಬಿ ಪಾಟೀಲ್
ಕಸದ ವಾಹನದಲ್ಲಿ ಕೆಂಪೇಗೌಡರ ಭಾವಚಿತ್ರ ಮೆರವಣಿಗೆ: ಉಗ್ರ ಹೋರಾಟದ ಎಚ್ಚರಿಕೆ
ಪೌರ ಕಾರ್ಮಿಕರನ್ನು ಖಾಯಂ ಮಾಡಿ ; ಇಲ್ಲದಿದ್ದರೆ ಜುಲೈ 1 ರಿಂದ ಕೆಲಸ ಸ್ಥಗಿತ
ಕೆಂಪೇಗೌಡರ ಆಶಯ ಈಡೇರಿಸುತ್ತಿರುವ ಪ್ರಧಾನಿ ಮೋದಿ: ನಳಿನ್ಕುಮಾರ್ ಕಟೀಲ್