ಕೌರವನಿಗೆ ಕಾಂಗ್ರೆಸ್‌ ಅಡ್ಡಿ

ಬಿ.ಸಿ.ಪಾಟೀಲ್‌ಗೆ ಬಣಕಾರ ಬಲ, ಬನ್ನಿಕೋಡಗೆ ಸ್ವಾಭಿಮಾನ ಛಲ

Team Udayavani, Dec 2, 2019, 6:37 PM IST

ಹಿರೇಕೆರೂರು: ಕ್ಷೇತ್ರದ ಜೋಡೆತ್ತಿನ ಅಬ್ಬರ, ತಳಮಟ್ಟದಲ್ಲಿ ಮನಸ್ಸುಗಳು ಒಗ್ಗೂಡದ ಸ್ಥಿತಿ,
ಸ್ವಾಭಿಮಾನದ ಹೆಸರಿನಲ್ಲಿ ಮತಭಿಕ್ಷೆ, ಸಚಿವ ಸ್ಥಾನ, ಭರಪೂರ ಅಭಿವೃದ್ಧಿ ಕನವರಿಕೆಯೊಂದಿಗೆ ಗೆಲುವಿನ ಜಪ. ಎರಡು ವಿರುದ್ಧ ಶಕ್ತಿಗಳು ಒಂದಾಗಿವೆ, ವಿರೋಧಿಗೆಲ್ಲಿದೆ ನೆಲೆ ಎಂಬ ಭಾವನೆ ನಿಧಾನಕ್ಕೆ ಕರಗತೊಡಗಿದ್ದು, ಪೈಪೋಟಿ ಸಮ, ಸಮ ಎನ್ನುವ ಮಟ್ಟಿಗೆ ತೀವ್ರತೆ ಪಡೆಯತೊಡಗಿದೆ.

ಇದ್ದದ್ದನ್ನು ಇದ್ದಂತೆ, ಸಮಾಜದ ಮುಖಕ್ಕೆ ಹೊಡೆಯುವಂತೆ ಹೇಳಿದ್ದ, ಸರ್ವಜ್ಞನ ತವರು ನೆಲ
ಹಾವೇರಿ ಜಿಲ್ಲೆ ಹಿರೇಕೆರೂರು ವಿಧಾನಸಭೆ ಕ್ಷೇತ್ರದಲ್ಲಿ ಉಪ ಚುನಾವಣೆ ಜೋರಾಗಿ ಸದ್ದು  ಮಾಡತೊಡಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡ ಬಿ.ಸಿ.ಪಾಟೀಲರು ಬಿಜೆಪಿಯಿಂದ ಸ್ಪರ್ಧಿಸಿದ್ದರೆ, ಕಾಂಗ್ರೆಸ್‌ನಿಂದ ಬಿ.ಎಚ್‌.ಬನ್ನಿಕೋಡ ಸ್ಪರ್ಧಿಸಿದ್ದಾರೆ. ಜೆಡಿಎಸ್‌ನಿಂದ ರಟ್ಟಿಹಳ್ಳಿಯ ಕಬ್ಬಿಣಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನಾಮಪತ್ರ ಹಿಂಪಡೆದಿದ್ದು, ಅಂತಿಮವಾಗಿ ಕಣದಲ್ಲಿ 9 ಜನರಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಹಾಗೂ ತೀವ್ರ
ಸ್ಪರ್ಧೆ ಏರ್ಪಟ್ಟಿದೆ.

ಬಿ.ಸಿ.ಪಾಟೀಲ್‌ ಕಸರತ್ತೇನು?: ಕ್ಷೇತ್ರದ ಅಭಿವೃದ್ಧಿಗಾಗಿಯೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಉಪ ಚುನಾವಣೆಯಲ್ಲಿ ಗೆದ್ದರೆ ಸಚಿವನಾಗಿ ಕ್ಷೇತ್ರದ ಅಭಿವೃದ್ಧಿಗೆ ಭರಪೂರ ಅನುದಾನ ತರುವೆ ಎಂಬ ಭರವಸೆಯೊಂದಿಗೆ ಪ್ರಚಾರಕ್ಕಿಳಿದಿದ್ದಾರೆ. ರಾಜಕೀಯವಾಗಿ ಕಡುವೈರಿಯಂತಿದ್ದ ಮಾಜಿ ಶಾಸಕ ಯು.ಬಿ.ಬಣಕಾರ ತಮ್ಮ ಗೆಲುವಿಗೆ ಟೊಂಕ ಕಟ್ಟಿರುವುದು ಪಾಟೀಲರ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಪ್ರಧಾನಿ ಮೋದಿ ಬಗೆಗಿನ ಮೋಹ, ಸಿಎಂ ಆಗಿ ಯಡಿಯೂರಪ್ಪ
ಮುಂದುವರೆಯಬೇಕೆಂಬ ಮಮಕಾರ ಪಾಟೀಲರ ಗೆಲುವಿನ ನಡೆಗೆ ಸಹಕಾರಿ ಆಗುವ ಸಾಧ್ಯತೆ ಇದೆ.
ಆ ಕಡೆ ಹಳ್ಳಿಯೂ ಅಲ್ಲದ ಈ ಕಡೆ ಪಟ್ಟಣವೂ ಆಗಿರದ ದೊಡ್ಡ ಹಳ್ಳಿಯಂತಿರುವ ಹಿರೇಕೆರೂರು
ಪಟ್ಟಣದ ಅಭಿವೃದಿಟಛಿ ಸೇರಿದಂತೆ ಕಣ್ಣಿಗೆ ಕಾಣುವ ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಗೆದ್ದರೆ ಸಚಿವ ಸ್ಥಾನ ಹಾಗೂ ಕ್ಷೇತ್ರಕ್ಕೆ ಅಗಾಧ ಅಭಿವೃದ್ಧಿ ಗ್ಯಾರಂಟಿ ಎಂಬುದನ್ನು ಮತದಾರರ ಮನ ಮುಟ್ಟಿಸುವುದಕ್ಕೆ ಪಾಟೀಲ ಸಾಕಷ್ಟು ಸರ್ಕಸ್‌ಗಿಳಿದಿದ್ದಾರೆ.

“ಜೋಡೆತ್ತು’ ಉಳುಮೆ ಹೇಗಿದೆ?: ಕ್ಷೇತ್ರದ ಜೋಡೆತ್ತುಗಳು ಎಂಬ ಪ್ರಚಾರದೊಂದಿಗೆ ಬಿ.ಸಿ.ಪಾಟೀಲ, ಯು.ಬಿ.ಬಣಕಾರ ಒಂದಾಗಿದ್ದು, ಎರಡು ಶಕ್ತಿಗಳ ಮತಗಳು ಒಗ್ಗೂಡಿದರೆ ವಿಪಕ್ಷ ಅಭ್ಯರ್ಥಿಗಳು ಉಡೀಸ್‌ ಎಂಬ ಅನಿಸಿಕೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದರೆ, ನಾಯಕರು ಒಂದಾಗಿದ್ದರೂ ತಳಮಟ್ಟದ ಕಾರ್ಯಕರ್ತರ ಮನಸ್ಸುಗಳಿನ್ನೂ ಒಂದಾಗಿಲ್ಲ. ನಮ್ಮ ನಾಯಕನ ಭವಿಷ್ಯದ ದೃಷ್ಟಿಯಿಂದ
ಪಕ್ಷಾಂತರಿಗಳಿಗೆ ಒಮ್ಮೆ ಪಾಠ ಕಲಿಸಬೇಕೆಂಬ ಭಾವನೆ ಬಿ.ಸಿ.ಪಾಟೀಲರಿಗೆ ಕಿರಿಕಿರಿ ತಂದೊಡ್ಡುವ ಸಾಧ್ಯತೆ ಇದೆ. ಪಾಟೀಲರು ಹಳ್ಳಿಗಳ ಅಭಿವೃದಿಟಛಿಗೆ ಹೆಚ್ಚು ಗಮನ ನೀಡಿಲ್ಲ ಎಂಬ ನೋವು ಹಲವು ಕಡೆ ಇದೆ.

ಬನ್ನಿಕೋಡ ಸಾಧ್ಯತೆ ಹೇಗಿದೆ?: ಕಾಂಗ್ರೆಸ್‌ನ ಬನ್ನಿಕೋಡ ಅವರು ಮೃದು ವ್ಯಕ್ತಿತ್ವದ ಸಂಭಾವಿತ ರಾಜಕಾರಣಿ ಎಂಬ ಭಾವನೆ ಅನೇಕರದ್ದಾಗಿದೆ. ಸ್ವಾಭಿಮಾನದ ಹೆಸರಲ್ಲಿ ಮತಭಿಕ್ಷೆಗೆ ಮುಂದಾಗಿರುವ ಬನ್ನಿಕೋಡಗೆ, ಹಿರಿತನ ಹಾಗೂ ರಾಜಕೀಯ ಕೊನೆ ಅವಧಿಯಲ್ಲಿರುವ ಅವರನ್ನು ಬೆಂಬಲಿಸಿ ಇದೊಂದು ಬಾರಿ ಶಾಸಕರನ್ನಾಗಿ ಮಾಡಿ ಬಿಡೋಣ ಎಂಬ ಅನಿಸಿಕೆ ಹಾಗೂ ಪಾಟೀಲರನ್ನು ವಿರೋಧಿಸಿದ್ದವರು, ಹಲವು ನೋವು ಅನುಭವಿಸಿದವರು ತಮ್ಮ ನಿಲುವಿಗೆ ಬದಟಛಿರಾಗಿಯೇ ಉಳಿದರೆ ಕಾಂಗ್ರೆಸ್‌ಗೆ
ವರವಾಗುವ ಸಾಧ್ಯತೆ ಇದೆ. ಬನ್ನಿಕೋಡ ಸಂಭಾವಿತರೇನೋ ಹೌದು. ಆದರೆ, ಇಂದಿನ ರಾಜಕಾರಣಕ್ಕೆ ಅವರು ಸರಿ ಹೋಗಲಾರರು. ಬನ್ನಿಕೋಡ ಗೆದ್ದರೆ ಶಾಸಕ ಮಾತ್ರ. ಬಿ.ಸಿ.ಪಾಟೀಲ ಗೆದ್ದರೆ ಸಚಿವರಾಗುತ್ತಾರೆ. ಹಲವು ದಶಕಗಳ ನಂತರ ಕ್ಷೇತ್ರಕ್ಕೆ ಸಚಿವ ಸ್ಥಾನ ದೊರೆಯುವ ಅವಕಾಶವಿದ್ದು,
ಅದನ್ನೇಕೆ ಕಳೆದುಕೊಳ್ಳಬೇಕು ಎಂಬುವುದು ಬಿಜೆಪಿಯವರ ಪ್ರಚಾರ. ಒಟ್ಟಿನಲ್ಲಿ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್‌ ನಡುವೆ ತೀವ್ರ ಹಣಾಹಣಿ ಇದ್ದು, ಮತದಾರ ಯಾರ ಕೈ ಹಿಡಿಯುತ್ತಾನೆ ಎಂಬ ಕುತೂಹಲ ಮೂಡಿದೆ.

ಕ್ಷೇತ್ರದ ಇತಿಹಾಸ
ಸರ್ವಜ್ಞನ ತವರು ನೆಲ, ದುರ್ಗಾದೇವಿ ಆಲಯ, 900 ಎಕರೆಯಷ್ಟು ವಿಸ್ತೀರ್ಣದ ಹಿರೇಕೆರೆ ಕ್ಷೇತ್ರದ ಹಿರಿಮೆಯನ್ನು ಸಾರುತ್ತಿವೆ. ಮೂರು ವರ್ಷಕ್ಕೊಮ್ಮೆ ನಡೆಯುವ ದುರ್ಗಾದೇವಿ ಜಾತ್ರೆಗೆ ರಾಜ್ಯದಷ್ಟೇ ಅಲ್ಲ, ನೆರೆಯ ಮಹಾರಾಷ್ಟ್ರ ಇನ್ನಿತರ ಕಡೆಯ ಭಕ್ತರು ಬರುತ್ತಾರೆ. ಕಬ್ಬು- ಮೆಣಸಿಕಾಯಿ ಬೆಳೆಗೆ ಹೆಸರಾಗಿದ್ದ
ಹಿರೇಕೆರೂರು ತಾಲೂಕು ಇದೀಗ ನಿಧಾನಕ್ಕೆ ಮೆಕ್ಕೆಜೋಳಕ್ಕೆವಾಲುತ್ತಿದೆ. ಬೀಜೋತ್ಪಾದನೆಯಲ್ಲಿ ಸಾಧನೆಯ ಹೆಜ್ಜೆ ಇರಿಸುತ್ತಿದೆ. ರಾಜಕೀಯವಾಗಿ ಇಲ್ಲಿ ಪಕ್ಷಕ್ಕಿಂತ ವ್ಯಕ್ತಿನಿಷ್ಠೆ ಅಧಿಕ. ಕಳೆರಡು
ದಶಕಗಳಿಂದ ಇಲ್ಲಿನ ರಾಜಕೀಯ ಹೊಸ ತಿರುವು ಪಡೆದುಕೊಂಡಿದ್ದು, ಜಿದ್ದಾಜಿದ್ದಿತನಕ್ಕೆ ಸಾಕ್ಷಿಯಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿರುವ ಸಾದರ ಲಿಂಗಾಯತ ಸಮಾಜದವರೇ
ಬಹುತೇಕವಾಗಿ ಶಾಸಕರಾಗಿ ಆಯ್ಕೆಯಾಗುತ್ತ ಬಂದಿದ್ದಾರೆ. ಕಾಂಗ್ರೆಸ್‌ 5 ಬಾರಿ ಗೆದ್ದಿದ್ದರೆ, ಜೆಡಿಎಸ್‌ ಮೂರು ಬಾರಿ, ತಲಾ ಒಂದು ಬಾರಿ ಬಿಜೆಪಿ, ಕೆಜೆಪಿ ಹಾಗೂ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. 2018ರಲ್ಲಿ ಕಾಂಗ್ರೆಸ್‌ನ ಬಿ.ಸಿ.ಪಾಟೀಲ 72,461 ಮತ ಪಡೆದಿದ್ದರೆ, ಬಿಜೆಪಿಯ ಯು.ಬಿ.ಬಣಕಾರ 71,906 ಮತಗಳನ್ನು ಪಡೆದಿದ್ದು, ಬಿ.ಸಿ.ಪಾಟೀಲ ಕೇವಲ 555 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಪ್ರಮುಖ ವಿಷಯ
ಕ್ಷೇತ್ರದಲ್ಲಿ ವ್ಯಕ್ತಿನಿಷ್ಠೆಗೆ ಹೆಚ್ಚು ಒಲವು ಎಂಬುದಕ್ಕೆ ಚುನಾವಣೆಗಳ ಫ‌ಲಿತಾಂಶವೇ ಸಾಕ್ಷಿ. ಇಲ್ಲಿನ ಮತ್ತೂಂದು ವಿಶೇಷವೆಂದರೆ ಬಹುತೇಕ ಬಾರಿ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಪಕ್ಷದ ವಿರುದ್ಧವಾಗಿ ಶಾಸಕರನ್ನು ಆಯ್ಕೆ ಮಾಡುವ ಪ್ರತೀತಿ ಯನ್ನು ಕ್ಷೇತ್ರ ಹೊಂದಿದೆ. ಜೆಡಿಎಸ್‌, ಕಾಂಗ್ರೆಸ್‌ನಿಂದ ಒಟ್ಟು ಮೂರು ಬಾರಿ ಆಯ್ಕೆಯಾಗಿರುವ ಬಿ.ಸಿ. ಪಾಟೀಲ, ಇದೀಗ ಬಿಜೆಪಿ ಅಭ್ಯರ್ಥಿ. ಜನತಾದಳ ಹಾಗೂ
ಪಕ್ಷೇತರರಾಗಿ ಶಾಸಕರಾಗಿದ್ದ ಬಿ.ಎಚ್‌.ಬನ್ನಿಕೋಡ ಕಾಂಗ್ರೆಸ್‌ ಹುರಿಯಾಳು.

ತೀವ್ರ ಪೈಪೋಟಿ
ಮತದಾನ ಸಮೀಪಿಸುತ್ತಿದ್ದಂತೆಯೇ ಚಿತ್ರಣ ಬದಲಾಗುತ್ತಿದೆ. ಗೆಲುವು ಸುಲಭ ಎಂದುಕೊಂಡಿದ್ದು, ಕಠಿಣವಾಗತೊಡಗಿದೆ. ಪೈಪೋಟಿ ಸಮ, ಸಮಕ್ಕೆ ಬರುತ್ತಿದ್ದು, ಯಾರೇ ಗೆದ್ದರೂ
ಹೆಚ್ಚಿನ ಅಂತರ ಇರದು ಎಂಬುದು ಗ್ರಾಮೀಣ ಮತದಾರರ ಅನಿಸಿಕೆ.

● ಅಮರೇಗೌಡ ಗೋನವಾರ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ