ಉಪಚುನಾವಣೆಗೆ ಕೈ-ಕಮಲ ಕಾರ್ಯತಂತ್ರ

ಬಿಜೆಪಿ: ಕನಿಷ್ಠ 10-12 ಸ್ಥಾನ ಗೆಲ್ಲಬೇಕಾದ ಅನಿವಾರ್ಯತೆ; ಕಾಂಗ್ರೆಸ್‌: ಏಕಾಂಗಿಯಾಗಿ ಸ್ಪರ್ಧೆಗೆ ಒಲವು

Team Udayavani, Aug 2, 2019, 5:11 AM IST

17 ಶಾಸಕರನ್ನು ವಿಧಾನ ಸಭಾಧ್ಯಕ್ಷರು ಅನರ್ಹರನ್ನಾಗಿ ಮಾಡಿದ್ದರಿಂದ ಆ ಎಲ್ಲ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ. ಈ ಚುನಾವಣೆಯನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಪಕ್ಷ ಸಂಘಟನೆಗೆ ಬಿಜೆಪಿ ಒಲವು ತೋರಿದೆ. ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧಿಸಲು ಪಕ್ಷದ ಬಹುತೇಕ ನಾಯಕರು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಸರ್ಕಾರದ ಪತನಕ್ಕೆ ಕಾರಣರಾದ ಶಾಸಕರ ಕ್ಷೇತ್ರದಲ್ಲಿ ಮತ್ತೆ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಲು ಕಾಂಗ್ರೆಸ್‌ ನಿರ್ಧರಿಸಿದ್ದು, 17 ಕ್ಷೇತ್ರಗಳಲ್ಲಿ ವಸ್ತುಸ್ಥಿತಿ ತಿಳಿಯಲು ಹಿರಿಯ ನಾಯಕರ ನೇತೃತ್ವದಲ್ಲಿ ವೀಕ್ಷಕರ ತಂಡ ರಚನೆ ಮಾಡಲು ಗುರುವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ಕನಿಷ್ಠ 10-12 ಸ್ಥಾನ ಗೆಲ್ಲಬೇಕಾದ ಅನಿವಾರ್ಯತೆ
ಬೆಂಗಳೂರು: ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರಕ್ಕೆ ಪೂರ್ಣಾವಧಿ ಪೂರೈಸುವವರೆಗೂ ಯಾವುದೇ ಅಪಾಯ ಬರಬಾರದು ಎಂಬ ಉದ್ದೇಶದಿಂದ ಉಪಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ಪಕ್ಷ ಸಂಘಟನೆಯ ಕಾರ್ಯವನ್ನು ಬಿಜೆಪಿ ಅರಂಭಿಸಿದೆ.

ಸ್ಪೀಕರ್‌ ಅನರ್ಹಗೊಳಿಸಿರುವ 17 ಶಾಸಕರ ಭವಿಷ್ಯ ಸುಪ್ರೀಂ ಕೋರ್ಟ್‌ ಅಂಗಳದಲ್ಲಿದೆ. ಸುಪ್ರೀಂ ಕೋರ್ಟ್‌ ಆದೇಶದ ನಂತರ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆದರೆ, ಬಿಜೆಪಿ ಚಿಹ್ನೆಯಡಿ ಯಾರೇ ನಿಂತರೂ ಗೆಲ್ಲಬೇಕು. ಉಪಚುನಾವಣೆಯಲ್ಲಿ ಗೆದ್ದರೆ ಮಾತ್ರ 2023ರ ಮೇ ವರೆಗೂ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಇರಲಿದೆ. ಹೀಗಾಗಿ ಬಿಜೆಪಿ ಕಾರ್ಯಕರ್ತರು, ವಿವಿಧ ಪ್ರಕೋಷ್ಠಗಳ ಪ್ರಮುಖರು, ಜಿಲ್ಲಾ ಮಟ್ಟದ ಪದಾಧಿಕಾರಿಗಳು ಪಕ್ಷ ಸಂಘಟನೆಯ ಕಾರ್ಯ ಚುರುಕುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದಸ್ಯತ್ವ ಅಭಿಯಾನ ಈಗಾಗಾಲೇ ಆರಂಭವಾಗಿದ್ದು, ಸರ್ಕಾರ ರಚನೆ ಹಾಗೂ ವಿವಿಧ ಕಾರಣಗಳಿಂದಾಗಿ ಕೆಲವು ಜಿಲ್ಲೆಗಳಲ್ಲಿ ಅಭಿಯಾನ ಅಷ್ಟೊಂದು ವೇಗ ಕಂಡುಕೊಂಡಿಲ್ಲ. ಈಗ ಸರ್ಕಾರ ರಚನೆ ಪೂರ್ಣಗೊಂಡಿರುವುದರಿಂದ ಪಕ್ಷ ಸಂಘಟನೆ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಇನ್ನಷ್ಟು ವೇಗ ನೀಡಲು ರಾಜ್ಯ ಬಿಜೆಪಿ ನಿರ್ಧರಿಸಿದೆ. ಈ ಹಿನ್ನೆಲೆಯಿಂದಲೇ ಸದಸ್ಯತ್ವ ಅಭಿಯಾನದ ಪರಿಶೀಲನೆ ಹಾಗೂ ಮಾಹಿತಿ ಪಡೆಯುವುದಕ್ಕಾಗಿ ಆ.8ರಂದು ಬಿಜೆಪಿ ಸದಸತ್ವ ಅಭಿಯಾನದ ರಾಷ್ಟ್ರೀಯ ಸಂಯೋಜಕ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಕರ್ನಾಟಕ್ಕೆ ಭೇಟಿ ನೀಡಲಿದ್ದಾರೆ.

ಅಭಿಯಾನದ ನಡೆಯುತ್ತಿರುವ ಬಗೆ, ಕೊಟ್ಟಿರುವ ಗುರಿ ಹಾಗೂ ಉಪ ಚುನಾವಣೆಯಲ್ಲಿ ಗೆಲ್ಲಬೇಕಾದರೆ, ಹೊಸ ಸದಸ್ಯರ ಸಂಖ್ಯೆ ಎಷ್ಟು ಹೆಚ್ಚಬೇಕು ಎಂಬಿತ್ಯಾದಿ ಹಲವು ಮಾಹಿತಿಗಳನ್ನು ರಾಜ್ಯ ನಾಯಕರು ಕಲೆ ಹಾಕುತ್ತಿದ್ದಾರೆ. ಅದರಂತೆ ಮನೆ ಮನೆಗೆ ತೆರಳಿ ಸದಸ್ಯತ್ವ ಅಭಿಯಾನ ನಡೆಸುವ ಕಾರ್ಯ ಈಗ ವೇಗವಾಗಿ ನಡೆಯುತ್ತಿದೆ ಎಂದು ರಾಜ್ಯ ಬಿಜೆಪಿ ನಾಯಕರೊಬ್ಬರು ಮಾಹಿತಿ ನೀಡಿದರು.

ಬಿಜೆಪಿ 105 ಶಾಸಕರನ್ನು ಹೊಂದಿದ್ದು, ಓರ್ವ ಪಕ್ಷೇತರ ಶಾಸಕರ ಬೆಂಬಲದಿಂದ ಸರ್ಕಾರ ರಚನೆ ಮಾಡಲಾಗಿದೆ. ಎಲ್ಲವೂ ಅಂದುಕೊಂಡಂತೇ ಆದರೆ ಮುಂದಿನ ಆರು ತಿಂಗಳಲ್ಲಿ 17 ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುವ ಸಾಧ್ಯತೆ ಇದೆ. ಆಗ ಬಿಜೆಪಿ ಸರ್ಕಾರ ಬಹುಮತ ಸಾಬೀತು ಮಾಡಬೇಕಾದರೆ ಕನಿಷ್ಠ 10ರಿಂದ 12 ಕ್ಷೇತ್ರವಾದರೂ ಗೆಲ್ಲಲೇ ಬೇಕು. 224 ಮತ್ತು ಆಂಗ್ಲೋ ಇಂಡಿಯನ್‌ ಸದಸ್ಯೆ ಸೇರಿದಂತೆ 225 ವಿಧಾನಸಭಾದಲ್ಲಿ ಕನಿಷ್ಠ 113 ಸಂಖ್ಯೆ ಬಲ ಹೊಂದಲೇಬೇಕು. 113ಕ್ಕೆ ಸೀಮಿತಗೊಂಡರೆ ಅಸಮಾಧಾನದ ಬೇಗೆಯಿಂದ ಸರ್ಕಾರ ಪತನವಾಗುವ ಅಪಾಯ ಎದುರಾಗಲಿದೆ. ಹೀಗಾಗಿ 17ರಲ್ಲಿ ಕನಿಷ್ಠ 10ರಿಂದ 12 ಗೆಲ್ಲಬೇಕಾದ ಅನಿವಾರ್ಯತೆ ಇರುವುದರಿಂದ 17ಕ್ಕೆ 17 ಕ್ಷೇತ್ರದಲ್ಲೂ ಪ್ರಬಲ ಸ್ಪರ್ಧೆಗೆ ಸಂಘಟನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಕಾರ್ಯ ಆರಂಭವಾಗಿದೆ.

ರಾಜಧಾನಿ ಬೆಂಗಳೂರಿನ ಕೆ.ಆರ್‌.ಪುರಂ, ಶಿವಾಜಿನಗರ, ಯಶವಂತಪುರ, ರಾಜರಾಜೇಶ್ವರಿ ನಗರ, ಮಹಾಲಕ್ಷ್ಮೀ ಬಡವಾಣೆಗಳಲ್ಲಿ ಬಿಜೆಪಿ ಶಕ್ತಿ ಇದ್ದರೂ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಾಗಿ ಸ್ಪರ್ಧಿಸಿದರೆ ಗೆಲವು ಅಷ್ಟು ಸುಲಭವಿಲ್ಲ ಎಂಬುದನ್ನು ಅರಿತಿರುವ ನಾಯಕರು ಸಂಘಪರಿವಾರದ ಸಹಕಾರದೊಂದಿಗೆ ತಳಮಟ್ಟದಿಂದಲೇ ಸಂಘಟನಾ ಕಾರ್ಯ ಆರಂಭಿಸಿದ್ದಾರೆ ಎನ್ನಲಾಗಿದೆ.

ಹುಣಸೂರು, ಕೆ.ಆರ್‌.ಪೇಟೆ, ಗೋಕಾಕ್‌, ಅಥಣಿ, ಕಾಗವಾಡ. ಹಿರೇಕೆರೂರು, ರಾಣಿಬೆನ್ನೂರು, ಮಸ್ಕಿ, ಹೊಸಕೋಟೆ, ಚಿಕ್ಕಬಳ್ಳಾಪುರ, ವಿಜಯನಗರ, ಯಲ್ಲಾಪುರದಲ್ಲಿ ಬಿಜೆಪಿ ಶಕ್ತಿ ಚೆನ್ನಾಗಿದೆಯಾದರೂ, ಅನರ್ಹ ಶಾಸಕರ ಭವಿಷ್ಯ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾವಾಗುತ್ತಿದ್ದಂತೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅನರ್ಹ ಶಾಸಕರಿಗೆ ಜಯ ದೊರೆತರೆ ಅವರೇ ಅಭ್ಯರ್ಥಿಗಳಾಗಿರುತ್ತಾರೆ ಅಥವಾ ಕುಟುಂಬದ ಸದಸ್ಯರೋ ಅಥವಾ ಆಪ್ತವಲಯದವರಿಗೆ ಟಿಕೆಟ್ ನೀಡುವಂತೆ ಒತ್ತಡ ಹೇರುವ ಸಾಧ್ಯತೆ ಇದೆ. ಉಪಚುನಾವಣೆಯಲ್ಲೂ ಪೇಜ್‌ಪ್ರಮುಖ, ಬೂತ್‌ ಪ್ರಮುಖ, ಮಂಡಲ ಪ್ರಮುಖ್‌ ಹೀಗೆ ನಾನಾ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಬಿಜೆಪಿ ಮುಖಂಡರೊಬ್ಬರು ಮಾಹಿತಿ ನೀಡಿದರು.

ಕಾಂಗ್ರೆಸ್‌: ಏಕಾಂಗಿಯಾಗಿ ಸ್ಪರ್ಧೆಗೆ ಒಲವು
ಬೆಂಗಳೂರು: ಮೈತ್ರಿ ಸರ್ಕಾರದಿಂದ ಸಿಡಿದೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 17 ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಎದುರಾಗ ಲಿದೆ. ಚುನಾವಣೆಯನ್ನು ಕಾಂಗ್ರೆಸ್‌ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಏಕಾಂಗಿಯಾಗಿ ಸ್ಪರ್ಧೆಗೆ ಪಕ್ಷದ ಬಹುತೇಕ ನಾಯಕರು ಒಲವು ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ ರಾವ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆ ಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾ ಧ್ಯಕ್ಷ ಈಶ್ವರ್‌ ಖಂಡ್ರೆ, ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌, ಮಾಜಿ ಸಚಿವರಾದ ಡಿ.ಕೆ ಶಿವಕುಮಾರ್‌, ಹೆಚ್.ಕೆ.ಪಾಟೀಲ್ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು.

ಸರ್ಕಾರದ ಪತನಕ್ಕೆ ಕಾರಣರಾದ ಶಾಸಕರ ಕ್ಷೇತ್ರದಲ್ಲಿ ಮತ್ತೆ ಪಕ್ಷವನ್ನು ತಳ ಮಟ್ಟದಿಂದ ಸಂಘಟಿಸಲು ನಿರ್ಧರಿಸಿದ್ದು, 17 ಕ್ಷೇತ್ರಗಳಲ್ಲಿ ವಸ್ತುಸ್ಥಿತಿ ತಿಳಿಯಲು ಹಿರಿಯ ನಾಯಕರ ನೇತೃತ್ವದಲ್ಲಿ ವೀಕ್ಷಕರ ತಂಡ ರಚನೆ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಜೆಡಿಎಸ್‌ ಜೊತೆ ಮೈತ್ರಿ ಕಡಿದುಕೊಂಡು ಸ್ವತಂತ್ರವಾಗಿ ಸ್ಪರ್ಧಿಸಲು ಆಸಕ್ತಿ ವಹಿಸಿರುವ ಕಾಂಗ್ರೆಸ್‌ ನಾಯಕರು ಉಪ ಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸುವ ಕುರಿತು ಸುದೀರ್ಘ‌ ಚರ್ಚೆ ನಡೆಸಿದ್ದಾರೆ.

ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ದಿನೇಶ್‌ ಗುಂಡೂರಾವ್‌, ಪಕ್ಷದ ಮುಂದಿನ ಹಾದಿಯ ಬಗ್ಗೆ, ಅನರ್ಹರ ವಿರುದ್ಧ ಕಾನೂನು ಹೋರಾಟದಲ್ಲಿ ಪಕ್ಷದ ನಿಲುವು ಕುರಿತು ದೀರ್ಘ‌ ಸಮಾಲೋಚನೆ ನಡೆಸಲಾಗಿದೆ. ಬೆನ್ನಿಗೆ ಚೂರಿ ಹಾಕಿರುವ 17 ಅನರ್ಹರಿಗೆ ಚುನಾವಣೆಯಲ್ಲಿ ಪಾಠ ಕಲಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಪ್ರಕರಣ ಕೈ ಬಿಡಬಾರದು: ಬಿಜೆಪಿ ಶಾಸಕರಾದ ಕೆ.ಜಿ.ಬೋಪಯ್ಯ, ರೂಪಾಲಿ ನಾಯಕ್‌ ಅವರು ಸರ್ಕಾರಕ್ಕೆ ಪತ್ರ ಬರೆದು, ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಕೈ ಬಿಡುವಂತೆ ಒತ್ತಾಯಿಸಿದ್ದಾರೆ. ಪರೇಸ್‌ ಮೆಸ್ತಾ ಪ್ರಕರಣವನ್ನು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳಲಾಗಿದೆ. ಈ ಪ್ರಕರಣಗಳಲ್ಲಿ ಒಂದು ವೇಳೆ ಅಮಾಯಕರು ಸೇರಿದ್ದರೆ ಅವರನ್ನು ಕೈಬಿಡಲಿ. ಆದರೆ ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣ ಕೈಬಿಡುವಂತೆ ಹೇಳುವುದು ಎಷ್ಟರ ಮಟ್ಟಿಗೆ ಸರಿ? ಇದಕ್ಕೆ ಮುಖ್ಯಮಂತ್ರಿಗಳು ಒಪ್ಪಬಾರದು ಎಂದರು.

ಆಪರೇಷನ್‌ ಕಮಲ ನಿಂತಿಲ್ಲ: ಬಿಜೆಪಿ ನಾಯಕರು ಇನ್ನೂ ಆಪರೇಷನ್‌ ಕಮಲ ನಿಲ್ಲಿಸಿಲ್ಲ. ಈಗಲೂ ಕಾಂಗ್ರೆಸ್‌ನ ಕನಿಷ್ಠ 15 ಶಾಸಕರಿಗೆ ಅಧಿಕಾರ ಹಾಗೂ ಹಣದ ಆಮಿಷ ಒಡುತ್ತಿದ್ದಾರೆ ಎಂದು ಹೇಳಿದರು.

-ರಾಜು ಖಾರ್ವಿ ಕೊಡೇರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ