ಬಿಎಸ್‌ವೈ ಬಿಜೆಪಿ ಸಿಎಂ ಅಭ್ಯರ್ಥಿ: ರಾವ್‌

Team Udayavani, Mar 11, 2018, 8:15 AM IST

ಬೆಂಗಳೂರು: “ಮುಂದಿನ ಐದು ವರ್ಷಗಳ ಅವಧಿಗೆ ರಾಜ್ಯದಲ್ಲಿ ಬಿ.ಎಸ್‌. ಯಡಿಯೂರಪ್ಪ ಅವರೇ ನಮ್ಮ ನಾಯಕ. ಅವರ ನೇತೃತ್ವದಲ್ಲೇ ವಿಧಾನಸಭೆ ಚುನಾವಣೆ ನಡೆಯಲಿದ್ದು, ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಐದು ವರ್ಷ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಯಾವುದೇ ಕಾರಣಕ್ಕೂ ಬದಲಾವಣೆ ಇಲ್ಲ’ -ಇದು ರಾಜ್ಯ ಬಿಜೆಪಿ ಉಸ್ತುವಾರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್‌ ಅವರ ಸ್ಪಷ್ಟ ನುಡಿ. ಈ ವಿಚಾರವನ್ನು ನಾವು ಈಗಾಗಲೇ ಹಲವು ಬಾರಿ ಹೇಳಿದ್ದೇವೆ. ಅದರಲ್ಲಿ ಯಾವುದೇ ಗೊಂದಲ ಅಥವಾ ಅಸ್ಪಷ್ಟತೆ ಇಲ್ಲ. ರಾಜ್ಯದ ಬಿಜೆಪಿ ಸರಕಾರದಲ್ಲಿ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಎಂದು ಸ್ಪಷ್ಟಪಡಿಸಿದರು. ಬಿಜೆಪಿಯ ಚುನಾವಣಾ ಸಿದ್ಧತೆ, ರಾಜಕೀಯ ಹೋರಾಟದ ಕುರಿತು ಮುರಳೀಧರ ರಾವ್‌ ಅವರ ಜತೆ “ಉದಯವಾಣಿ’ ನಡೆಸಿದ  ಸಂದರ್ಶನದ ಆಯ್ದ ಭಾಗ ಇಲ್ಲಿದೆ.  

ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಸಿದ್ಧತೆ ಹೇಗೆ ನಡೆಯುತ್ತಿದೆ?
ಚುನಾವಣಾ ಸಿದ್ಧತೆ ಪೂರ್ಣಗೊಂಡಿದೆ. ಇನ್ನು ಹೋರಾಟ ಮಾತ್ರ ಬಾಕಿ. ಪರಿವರ್ತನಾ ಯಾತ್ರೆ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಎಲ್ಲ 224 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿರುವುದು, ಬೀದರ್‌, ಬೆಂಗಳೂರು, ಮೈಸೂರು, ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಗಳು ಚುನಾವಣೆಗೆ ವೇದಿಕೆ ಸಿದ್ಧಗೊಳಿಸಿವೆ. ಸಂಘಟನಾತ್ಮಕವಾಗಿಯೂ ಬಲ ವಾಗಿದ್ದೇವೆ. ಚುನಾವಣಾ ಪ್ರಣಾಳಿಕೆಯನ್ನು ಜನರ ಸಹಭಾಗಿತ್ವದಲ್ಲಿ ರೂಪಿಸುವ ಮತ್ತು ಪ್ರತಿ ವಿಧಾನಸಭಾ ಕ್ಷೇತ್ರ ಮಟ್ಟದಲ್ಲೂ ಪ್ರಣಾಳಿಕೆ ಸಿದ್ಧಪಡಿಸುವುದರೊಂದಿಗೆ ಜನರನ್ನೂ ತೊಡಗಿಸಿ ಕೊಳ್ಳಲಾಗುತ್ತಿದೆ.

ಪಕ್ಷದ ಆಂತರಿಕ ಭಿನ್ನಮತ ಈ ಚಟುವಟಿಕೆ ಗಳಿಗೆ ಅಡ್ಡಿಯಾಗುತ್ತಿದೆಯಲ್ಲ ?
ಪಕ್ಷದಲ್ಲಿ ಸ್ಪರ್ಧಾತ್ಮಕ ಪರಿಸ್ಥಿತಿ ಮತ್ತು ಆಂತರಿಕ ಸ್ವಾತಂತ್ರ್ಯ ಇದ್ದಾಗ ಇವೆಲ್ಲ  ಸಾಮಾನ್ಯ. ಆಕಾಂಕ್ಷಿಗಳು ಹೆಚ್ಚಾಗಿದ್ದಾಗ ಭಿನ್ನಾಭಿಪ್ರಾಯಗಳೂ ಇರುತ್ತವೆ. ಆದರೆ ಸಿದ್ಧಾಂತದ ವಿಚಾರ ಬಂದಾಗ ಅದಕ್ಕೆ ಹೊರತಾಗಿ ಯಾರೂ ಹೋಗುವುದಿಲ್ಲ. ಪಕ್ಷದ ಸಿದ್ಧಾಂತ ಮತ್ತು ರಾಷ್ಟ್ರೀಯ ನಾಯಕತ್ವದಿಂದಾಗಿ ಆ ಭಿನ್ನಾಭಿಪ್ರಾಯಗಳು ನಿಭಾಯಿಸಬಹುದಾದ ಮಟ್ಟಕ್ಕೆ ಇಳಿದಿವೆ. ಭಿನ್ನಮತ ಉಳಿದಿದ್ದರೂ  ಸರಿ ಮಾಡುತ್ತೇವೆ. ನಮ್ಮ ಗೆಲುವಿಗೆ ಇವ್ಯಾವುವೂ ಅಡ್ಡಿಯಾಗುವುದಿಲ್ಲ.

ಕಾಂಗ್ರೆಸ್‌ ಅಲ್ಪಸಂಖ್ಯಾಕರ ತುಷ್ಟೀಕರಣ ಮಾಡುತ್ತಿದೆ ಎನ್ನುತ್ತೀರಿ. ಹಿಂದುತ್ವ ಅಜೆಂಡಾ ಮೂಲಕ ನೀವು ಹಿಂದೂಗಳನ್ನು ಮಾತ್ರ ಓಲೈಸುತ್ತಿದ್ದೀರಲ್ಲ?
ಹಿಂದುತ್ವ ಎಂಬುದು ಸೈದ್ಧಾಂತಿಕ ವಿಚಾರವೇ ಹೊರತು ಚುನಾವಣಾ ವಿಷಯವಲ್ಲ. ಬಿಜೆಪಿ ಯಾವತ್ತೂ ಒಂದು ಸಮುದಾಯ, ಧರ್ಮಕ್ಕೆ ಸೀಮಿತ ನೀತಿ ರೂಪಿಸಿಲ್ಲ. ಎಲ್ಲರೂ ಸಮಾನರು ಎಂದು ಭಾವಿಸಿ ಕೆಲಸ ಮಾಡುತ್ತದೆ. ಆದರೆ ರಾಜ್ಯದ ಕಾಂಗ್ರೆಸ್‌ ಸರಕಾರ ಮುಸ್ಲಿಂ ಮೂಲಭೂತವಾದಿಗಳನ್ನು ಪ್ರೋತ್ಸಾಹಿಸುತ್ತಾ, ಅವರ ವಿರುದ್ಧದ ಪ್ರಕರಣಗಳನ್ನು ವಾಪಸ್‌ ಪಡೆಯುತ್ತಿದೆ. ಹಿಂದೂ ಕಾರ್ಯಕರ್ತರನ್ನು ಹುಡುಕಿ ಕೊಲ್ಲುವ ಜೆಹಾದಿ ಸಂಘಟನೆಗಳಿಗೆ ಬೆಂಬಲ ಸೂಚಿಸಿ ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ. ಟಿಪ್ಪು ಜಯಂತಿ ಆಚರಿಸುತ್ತಿರುವ ಕಾಂಗ್ರೆಸ್‌ ಸರಕಾರಕ್ಕೆ ಹೈದರಾಬಾದ್‌ ಕರ್ನಾಟಕ ವನ್ನು ನಿಜಾಮರಿಂದ ಮುಕ್ತಗೊಳಿಸಿ ಕರ್ನಾಟಕದಲ್ಲಿ ವಿಲೀನಗೊಳಿಸಿದ ಕಾಂಗ್ರೆಸ್‌ ನವರೇ ಆದ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ನೆನಪಾಗುವುದಿಲ್ಲ. ಅಲ್ಪಸಂಖ್ಯಾಕರ ತುಷ್ಟೀಕರಣ ನೀತಿಯಿಂದ ಹಿಂದೂಗಳಿಗೆ ಅನ್ಯಾಯವಾಗುತ್ತಿದ್ದರೆ ಆ ಬಗ್ಗೆ ದನಿ ಎತ್ತಿ ಎಲ್ಲರನ್ನೂ ಒಂದಾಗಿ ನೋಡಿ ಎನ್ನುವುದನ್ನೇ ಬಿಜೆಪಿಯ ಹಿಂದುತ್ವ ಅಜೆಂಡಾ ಎನ್ನುತ್ತಾರೆ ಎಂದಾದರೆ ಅದಕ್ಕೆ ನಾವು ಸಿದ್ಧ.

ಕಾಂಗ್ರೆಸ್‌ ವಿರುದ್ಧ ಹೋರಾಟಕ್ಕೆ ನಿಮ್ಮ ಮುಂದಿರುವ ವಿಚಾರಗಳೇನು?
ರಾಜ್ಯದಲ್ಲಿ ಕಾಂಗ್ರೆಸ್‌ನ ದುರಾಡಳಿತ, ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ರೈತರಿಗೆ ಆಗಿರುವ ತೊಂದರೆಗಳು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫ‌ಲ್ಯತೆ, ಮೂಲ ಸೌಕರ್ಯ ಕೊರತೆ, ದಕ್ಷ ಅಧಿಕಾರಿಗಳಿಗೆ ಕಿರುಕುಳ, ಕೇಂದ್ರ ಸರಕಾರದ ಯೋಜನೆಗಳನ್ನು ಜಾರಿಗೆ ತರುವಲ್ಲಿ ನಿರ್ಲಕ್ಷ್ಯ ಒಂದೆಡೆಯಾದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಜ್ಯಕ್ಕೆ ನೀಡಿದ ಕೊಡುಗೆಗಳು, ಭವಿಷ್ಯದ ಭಾರತದ ನಗರ, 21ನೇ ಶತಮಾನದ ನಗರವಾಗಿದ್ದ ಬೆಂಗಳೂರನ್ನು ಸಮಸ್ಯೆಗಳ ನಗರವಾಗಿ ಮಾಡಿರುವುದು ಪ್ರಮುಖ ಚುನಾವಣಾ ವಿಷಯಗಳಾಗಿರುತ್ತವೆ. ಉತ್ತಮ ಆಡಳಿತಕ್ಕಾಗಿ ಬಿಜೆಪಿ ಎಂಬುದು ನಮ್ಮ ಘೋಷವಾಕ್ಯವಾಗಿರುತ್ತದೆ.

ಅಲ್ಪಸಂಖ್ಯಾಕರ ತುಷ್ಟೀಕರಣ, ದುರಾಡಳಿತ, ಭ್ರಷ್ಟಾಚಾರ, ಬಿಜೆಪಿ ಬಗ್ಗೆ ದ್ವೇಷ ಕಾಂಗ್ರೆಸ್‌ ರಾಷ್ಟ್ರಮಟ್ಟದಲ್ಲಿ ಅನುಸರಿಸಿಕೊಂಡು ಬರುತ್ತಿರುವ ವಿದ್ಯಮಾನ. ಕರ್ನಾಟಕ ಕಾಂಗ್ರೆಸ್‌ ಕೂಡ ಅದಕ್ಕೆ ಹೊರತಲ್ಲ. ಕುಟುಂಬ ರಾಜಕಾರಣ, ವಂಶ ರಾಜಕಾರಣ ಕಾಂಗ್ರೆಸ್‌ನ ಪರಂಪರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದಕ್ಕೆ ಹೊರತಾಗಿಲ್ಲ. ಅವರ ನೇತೃತ್ವದ ರಾಜ್ಯ ಸರಕಾರದ ಮೇಲಿರುವ ಭ್ರಷ್ಟಾಚಾರ, ಹಗರಣಗಳ ಆರೋಪಗಳೇ ಸಾಕ್ಷಿ.

ಯಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂಬುದು ಆ ಪಕ್ಷದ ಹಕ್ಕು. ಆದರೆ ಹಗರಣಗಳ  ರೂವಾರಿ, ದಂಧೆಕೋರರನ್ನು ಕಾಂಗ್ರೆಸ್‌ ಸೇರಿಸಿಕೊಳ್ಳುತ್ತದೆ ಎಂದರೆ ಅದನ್ನು ಚುನಾವಣಾ ವಿಚಾರವಾಗಿ ತೆಗೆದುಕೊಳ್ಳಬೇಕಾಗುತ್ತದೆ. ರೈತ ವಿರೋಧಿ, ಬೆಂಗಳೂರು ಸುತ್ತಮುತ್ತ ಸಾವಿರಾರು ರೈತರ ಭೂಮಿಯನ್ನು  ಸ್ವಾರ್ಥಕ್ಕೆ ಬಳಸಿಕೊಂಡು ಅವರನ್ನು ಹಾಳು ಮಾಡಿದ ಅಶೋಕ್‌  ಖೇಣಿಯಂಥವರನ್ನು  ಕಾಂಗ್ರೆಸ್‌ಗೆ ಸೇರಿಸಿ ಕೊಂಡಿರುವ ಉದ್ದೇಶವನ್ನು  ಬಿಜೆಪಿ ಬಯಲಿಗೆಳೆಯದೆ  ಬಿಡುವುದಿಲ್ಲ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ