ಸಾರಿಗೆ ಬಸ್ಸಲ್ಲೇ ಆಯ್ತು ಹೆರಿಗೆ !
Team Udayavani, Sep 26, 2019, 3:00 AM IST
ಬಳ್ಳಾರಿ: ಸಾರಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡು ಕೊನೆಗೆ ಬಸ್ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬಳ್ಳಾರಿ ಹಾಗೂ ಚಿತ್ರದುರ್ಗ ಜಿಲ್ಲೆ ಗಡಿಭಾಗ ರಾಂಪುರದಲ್ಲಿ ಈ ಘಟನೆ ನಡೆದಿದ್ದು, ತಾಯಿ-ಮಗುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಗೊಲ್ಲಲಿಂಗಮ್ಮನಹಳ್ಳಿ ಗ್ರಾಮದ ರತ್ನಮ್ಮ ಬುಧವಾರ ರಾಂಪುರಕ್ಕೆ ತೆರಳಲು ಬಸ್ ಏರಿದ್ದಾರೆ.
ಪ್ರಯಾಣ ಮಧ್ಯದಲ್ಲೇ ಹೆರಿಗೆ ನೋವು ಕಾಣಿಸಿಕೊಂಡು ನರಳಲಾರಂಭಿಸಿದ್ದಾರೆ. ಇದನ್ನು ಗಮನಿಸಿದ ಮಹಿಳಾ ಪ್ರಯಾಣಿಕರು ಆಕೆ ಕುಳಿತಿದ್ದ ಸೀಟಿನ ಸುತ್ತಲೂ ಸೀರೆಯೊಂದನ್ನು ಕಟ್ಟಿ, ಬಸ್ಸಿನಲ್ಲೇ ಹೆರಿಗೆ ಮಾಡಿಸಿದ್ದಾರೆ. ಬಳಿಕ ಬಸ್ನ ಚಾಲಕ ಹಾಗೂ ನಿರ್ವಾಹಕ ನೇರವಾಗಿ ರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಸ್ ಕೊಂಡೊಯ್ದು ತಾಯಿ ಮತ್ತು ಮಗುವನ್ನು ಅಲ್ಲಿ ದಾಖಲಿಸಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.