ಕಾಂಗ್ರೆಸ್ ನಾಯಕರಿಂದ ರಾಮ ಜಪ!
Team Udayavani, Aug 6, 2020, 6:22 AM IST
ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿರುವುದಕ್ಕೆ ಕಾಂಗ್ರೆಸ್‌ನ ಬಹುತೇಕ ನಾಯಕರು ಶುಭ ಕೋರಿದ್ದಾರೆ.
ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿ, ರಾಮ ಎಂದರೆ ಪ್ರೇಮ! ಅಸೂಯೆ ಇರುವ ಕಡೆ ಶ್ರೀ ರಾಮನು ಕಾಣಿಸಿಕೊಳ್ಳುವುದಿಲ್ಲ.
ರಾಮ ಎಂದರೆ ಕರುಣೆ! ಕ್ರೂರತೆ ಇರುವ ಕಡೆ ಶ್ರೀ ರಾಮ ಕಾಣಿಸಿಕೊಳ್ಳುವುದಿಲ್ಲ. ರಾಮ ಎಂದರೆ ನ್ಯಾಯ! ಅನ್ಯಾಯ ಇರುವ ಕಡೆ ಶ್ರೀ ರಾಮ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟ್ವೀಟ್ ಮಾಡಿ, ನಾವು ರಾಮ ಮಂದಿರ ನಿರ್ಮಾಣಕ್ಕೆ ಯಾವತ್ತೂ ವಿರೋಧಿಸಿಲ್ಲ. ಶ್ರೀರಾಮ ಹಾಗೂ ಹಿಂದೂ ಧರ್ಮ ಈ ದೇಶದ ಆಸ್ತಿಯೇ ಹೊರತು ಒಂದು ಪಕ್ಷಕ್ಕೆ ಸೀಮಿತವಾದುದಲ್ಲ. ಬಿಜೆಪಿ ಮೊದಲಿನಿಂದಲೂ ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಾ ಬಂದಿದೆ. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಇಂದು ಸಪ್ತ ಮೋಕ್ಷ ಕ್ಷೇತ್ರಗಳಲ್ಲಿ ಒಂದಾದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನಡೆಯುತ್ತಿದೆ. ಈ ಪವಿತ್ರ ಕ್ಷಣದಲ್ಲಿ ದೇಶದಲ್ಲಿ ಶಾಂತಿ, ಸಮೃದ್ಧಿ ನೆಲೆಸಿ ಸಾಂಸ್ಕೃತಿಕ ಸಾಮರಸ್ಯ, ಸೌಹಾರ್ದ ಮೂಡಲಿ. ಎಲ್ಲ ಭಾರತ ವಾಸಿಗಳೂ ಭ್ರಾತೃತ್ವದಿಂದ ಬಾಳಲಿ ಎಂದು ಆಶಿಸುತ್ತೇನೆ ಮತ್ತು ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ರಾಮ ಮಂದಿರ ನಿರ್ಮಾಣದ ಶಿಲಾನ್ಯಾಸ ಸಂತೋಷದ ವಿಚಾರ. ಶ್ರೀರಾಮ ಬೋಧಿಸಿದ ಸಹಬಾಳ್ವೆಯ ತತ್ವ ಎಲ್ಲರಿಗೂ ಮಾದರಿಯಾಗಲಿ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಮಾತ್ರ ಈ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸದೆ ಅಂತರ ಕಾಯ್ದುಕೊಂಡಿದ್ದಾರೆ.
ಸಂತಸದ ಕ್ಷಣ: ಎಚ್‌ಡಿಕೆ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು ಎಂಬ ಭಾರತೀಯ ಶತಮಾನಗಳ ಕನಸು ನನಸಾಗಲು ಇಂದು ಕಾಲ ಕೂಡಿ ಬಂದಿದೆ. ಇದು ನಮ್ಮೆಲ್ಲರ ಸಂತೋಷದ ಘಳಿಗೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಶ್ರೀರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವಾದುದು ಭಾವನಾತ್ಮಕ ಸನ್ನಿವೇಶ ಎಂಬುದು ನನ್ನ ಅನಿಸಿಕೆ. ರಾಮನ ಜನಪರ ಕಾಳಜಿ ಹಾಗೂ ಹೃದಯ ವೈಶಾಲ್ಯ ಈಗಿನ ನಮ್ಮ ಜನ ಪ್ರತಿನಿಧಿಗಳಿಗೆ ಮೇರು ಪ್ರೇರಣೆಯಾಗಲಿ ಎಂದು ಹೇಳಿದ್ದಾರೆ.